06/03/2026

Law Guide Kannada

Online Guide

‘ಜಾತಿ ಪ್ರಮಾಣಪತ್ರಗಳ ಸಿಂಧುತ್ವ: ಸ್ವಯಂ ಪ್ರೇರಿತ ತನಿಖೆಗೆ ಅವಕಾಶವಿಲ್ಲ- ಹೈಕೋರ್ಟ್

ಬೆಂಗಳೂರು: ‘ನಾಗರಿಕ ಹಕ್ಕುಗಳ ಜಾರಿ ಕೋಶವು ಜಾತಿ ಪ್ರಮಾಣಪತ್ರದ ಸಿಂಧುತ್ವದ ಕುರಿತಂತೆ ಸ್ವಯಂಪ್ರೇರಿತ ತನಿಖೆ ಕೈಗೆತ್ತಿಕೊಳ್ಳುವ ಅಧಿಕಾರ ಹೊಂದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ತಮ್ಮ ಜಾತಿ ಪ್ರಮಾಣದ ಸಿಂಧುತ್ವಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನಾಗರಿಕ ಹಕ್ಕುಗಳ ಜಾರಿ ವಿಭಾಗದ ಡಿವೈಎಸ್ ಪಿಗೆ ನಿರ್ದೇಶನ ನೀಡಲಾಗಿದ್ದ ಕ್ರಮವನ್ನು ಪ್ರಶ್ನಿಸಿ ಹಾವೇರಿ ಜಿಲ್ಲೆಯ ಲಕ್ಕಾಪುರದ ನಿವೃತ್ತ ಮುಖ್ಯ ಶಿಕ್ಷಕ ಟಿ.ಎಚ್.ಹೊಸಮನಿ ಎಂಬುವವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ಪುರಸ್ಕರಿಸಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು, ಜಾತಿ ಪ್ರಮಾಣಪತ್ರಗಳ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನಾಗರಿಕ ಹಕ್ಕುಗಳ ಘಟಕಕ್ಕೆ ಸ್ವಯಂ ಪ್ರೇರಿತ ತನಿಖೆ ಕೈಗೊಳ್ಳುವ ಅವಕಾಶವಿಲ್ಲ. ಆದರೆ, ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ನೀಡುವ ವರದಿಯ ಬಳಿಕ ತನಿಖೆ ಕೈಗೊಳ್ಳುವ ಅಧಿಕಾರ ಹೊಂದಿರುತ್ತದೆ. ಹೀಗಾಗಿ, ಈ ಪ್ರಕರಣದಲ್ಲಿ ಅರ್ಜಿದಾರರಿಗೆ ಸಂಬಂಧಿಸಿದಂತೆ ನಾಗರಿಕ ಹಕ್ಕುಗಳ ಜಾರಿ ಘಟಕದ ನಿರ್ದೇಶನದ ಅನುಸಾರ ಕೈಗೊಂಡಿರುವ ಪ್ರಕ್ರಿಯೆ ಮತ್ತು ಅದರ ನಂತರದ ಎಲ್ಲ ಪ್ರಕ್ರಿಯೆಗಳು ಅನೂರ್ಜಿತವಾಗಲಿವೆ’ ಎಂದು ತಿಳಿಸಿತು.

‘ಕರ್ನಾಟಕ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ, ಮೀಸಲಾತಿ ಇತ್ಯಾದಿ) ನಿಯಮ-1992ರ 7ರ ಉಪ ನಿಯಮ(4)ರಡಿ ಯಾವುದೇ ವ್ಯಕ್ತಿ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ತನಿಖೆ ನಡೆಸಲು ಸೂಚಿಸಿದರೆ ಮಾತ್ರವೇ ನಾಗರಿಕ ಹಕ್ಕುಗಳ ಜಾರಿ ಘಟಕ ಅದನ್ನು ಕಾರ್ಯರೂಪಕ್ಕೆ ತರಬಹುದಾಗಿದೆ’ ಎಂದು ನ್ಯಾಯಪೀಠ ತಿಳಿಸಿದೆ.

ಹಾಗೆಯೇ ‘ಹೊಸಮನಿ ಅವರಿಗೆ ಲಭ್ಯವಾಗಬೇಕಾದ ಪ್ರಯೋಜನಗಳನ್ನು ತಡೆಹಿಡಿದಿದ್ದರೆ ತಕ್ಷಣವೇ ಬಿಡುಗಡೆ ಮಾಡಬೇಕು. ಆದರೆ, ಅರ್ಜಿದಾರರ ಕುಟುಂಬದ ಸದಸ್ಯರು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ್ದವರು ಎಂದು ಹೇಳಿಕೊಂಡು ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಲು ಅರ್ಜಿದಾರರ ಜಾತಿ ಪ್ರಮಾಣಪತ್ರವನ್ನು ಬಳಕೆ ಮಾಡಲು ಅವಕಾಶವಿಲ್ಲ’ ಎಂದು ವಿವರಿಸಿದೆ.

ಅರ್ಜಿದಾರರ ಪರ ಹೈಕೋರ್ಟ್ ವಕೀಲರಾದ ಬಿ.ವಿಜಯಕುಮಾರ್ ಮತ್ತು ಜಿ.ಕೆ.ಹಿರೇಗೌಡರ ವಾದಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.