BH ಸರಣಿಯಲ್ಲಿ ವಾಹನ ನೋಂದಣಿ: ತಮ್ಮ ನಿಯಮಗಳ ಅನ್ವಯ ತೆರಿಗೆ ವಿಧಿಸಲು ರಾಜ್ಯ ಸರ್ಕಾರಗಳು ಸ್ವತಂತ್ರ- ಹೈಕೋರ್ಟ್

ಕೇರಳ: ಭಾರತ್ (BH) ಸರಣಿಯಲ್ಲಿ ವಾಹನ ನೋಂದಣಿ ಮಾಡುವಾಗ ಆಯಾ ರಾಜ್ಯ ಸರ್ಕಾರಗಳು ತಮ್ಮ ನೀತಿಗಳಿಗೆ ಅನುಗುಣವಾಗಿ ತೆರಿಗೆ ವಿಧಿಸಲು ಸ್ವತಂತ್ರ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.
“ಹರೀಶ್ ಕುಮಾರ್ ಕೆ ಪಿ ವರ್ಸಸ್ ಭಾರತೀಯ ಒಕ್ಕೂಟ” ಪ್ರಕರಣದ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಬಿ.ಎಚ್. ಸರಣಿಯ ನೋಂದಣಿ ಗುರುತು ಹೊಂದಿರುವ ವಾಹನಗಳ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ನಿವಾಸ ಬದಲಾಯಿಸಿದರೆ ಆಗ ಹೊಸದಾಗಿ ನೋಂದಣಿ ಗುರುತು ಪಡೆಯುವ ಅಗತ್ಯವಿಲ್ಲ. ಬಿ ಎಚ್ ಸರಣಿ ಸಾರಿಗೆಯೇತರ ವಾಹನಗಳನ್ನು ನೋಂದಾಯಿಸುವಾಗ ಆಯಾ ರಾಜ್ಯಗಳ ಕಾನೂನಿನ ಅಡಿಯಲ್ಲಿ ಸೂಚಿಸಿರುವಂತೆ ತೆರಿಗೆ ವಿಧಿಸಲು ರಾಜ್ಯ ಸರಕಾರಗಳು ಸ್ವತಂತ್ರವಾಗಿದೆ ಎಂದು ಸ್ಪಷ್ಟಪಡಿಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ 2021ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಭಾರತ್ (BH) ಸರಣಿಯ ವಾಹನ ನೋಂದಾವಣೆ ಆರಂಭಿಸಿತು. ಬಿ ಎಚ್ ಸರಣಿಯ ನೋಂದಣಿ ಗುರುತು ಹೊಂದಿರುವ ವಾಹನಗಳ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ನಿವಾಸ ಬದಲಾಯಿಸಿದರೆ ಆಗ ಹೊಸ ನೋಂದಣಿ ಗುರುತು ಪಡೆಯುವ ಅಗತ್ಯ ಇರುವುದಿಲ್ಲ. ಸಂವಿಧಾನದ 7ನೇ ಶೆಡ್ಯೂಲ್ ಪಟ್ಟಿ IIರ ನಮೂದು 57ರ 246ನೇ ವಿಧಿಯ ಪ್ರಕಾರ ತೆರಿಗೆ ದರ ಸೇರಿದಂತೆ ಮೋಟಾರು ವಾಹನಗಳ ಮೇಲಿನ ತೆರಿಗೆಗಳು ರಾಜ್ಯದ ವ್ಯಾಪ್ತಿಗೆ ಬರುತ್ತವೆ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಕೇಂದ್ರ ಸರಕಾರದ ಶಾಸಕಾಂಗ ವ್ಯಾಪ್ತಿ ಮೀರಿರುವುದರಿಂದ ಕೇಂದ್ರ ಮೋಟಾರ್ ವಾಹನ ನಿಯಮಾವಳಿ 51 ಬಿ ಪ್ರಕಾರ ಬಿಎಚ್ ಸರಣಿಯ ಸಾರಿಗೆಯೇತರ ವಾಹನಗಳಿಗೆ ಸಾಂವಿಧಾನಿಕವಾಗಿ ತೆರಿಗೆ ವಿಧಿಸಲು ಸಾಧ್ಯವಿಲ್ಲ ಎಂದು ತೀರ್ಪು ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ