20/05/2025

Law Guide Kannada

Online Guide

ಜಮೀನು ಪೋಡಿ ಎಂದರೇನು? ಪೋಡಿ ಏಕೆ ಮಾಡಿಸಬೇಕು, ಅನುಕೂಲಗಳೇನು? ಇಲ್ಲಿದೆ ನೋಡಿ ಮಾಹಿತಿ

ಬೆಂಗಳೂರು : ಗ್ರಾಮೀಣ ಭಾಗ ಸೇರಿ ಹಲವಾರು ಮಂದಿಗೆ ಎಷ್ಟೋ ಜನರಿಗೆ ಪೋಡಿ ಎಂದರೆ ಏನು? ಪೋಡಿ ಏಕೆ ಮಾಡಿಸಬೇಕು, ಅದರ ಅನುಕೂಲಗಳೇನು? ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಆದರೆ ಎಲ್ಲರೂ ಪೋಡಿ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಪೋಡಿ ಎಂದರೆ ಜಮೀನಿನ ದುರಸ್ತಿ ಭಾಗ ಮಾಡುವುದು ಎಂದರ್ಥ. ಉದಾಹರಣೆಗೆ ಒಂದು ಸರ್ವೆ ನಂಬರ್ ನಲ್ಲಿ ಎರಡಕ್ಕಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪ್ರತ್ಯೇಕವಾಗಿ ಹೆಸರು ಮಾಡುವುದಕ್ಕೆ ಪೋಡಿ ಎಂದು ಕರೆಯಲಾಗುತ್ತದೆ. ಹಾಗಾದರೇ ಪೋಡಿ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಆನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪೋಡಿ ಪ್ರಕರಣಗಳಿಗೆ ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಈಗಾಗಲೇ 2024 ರ ಸೆಪ್ಟಂಬರ್ ರಲ್ಲೇ ಪೋಡಿ ಅಭಿಯಾನಕ್ಕೆ ಚಾಲನೆ ನೀಡಿದೆ.

ಸಾಗುವಳಿ ಮಾಡುವ ರೈತರಿಗೆ ಮಂಜೂರು ಮಾಡಿರುವ ಲಕ್ಷಾಂತರ ಪ್ರಕರಣಗಳಲ್ಲಿ ಹಲವು ವರ್ಷಗಳಿಂದ ಪೋಡಿ ದುರಸ್ತಿಯಾಗಿಲ್ಲ. ಈ ಹಿಂದಿನ ಸರ್ಕಾರದ ಅವಧಿಯಲ್ಲೂ ಹಲವು ಚರ್ಚೆ, ನಾನಾ ಪ್ರಯತ್ನಗಳಾಗಿದ್ದರೂ ಈ ವಿಚಾರದಲ್ಲಿ ಸರಿಯಾದ ಪರಿಹಾರ ನೀಡಲು ಸಾಧ್ಯವಾಗಿರಲಿಲ್ಲ. ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ದಶಕಗಳ ಹಿಂದೆ ಮಂಜೂರಾಗಿದ್ದ ಸರ್ಕಾರಿ ಜಮೀನು ಸಹ, ಪೋಡಿ ದುರಸ್ತಿ ಆಗದೆ ಬಾಕಿ ಉಳಿದಿದೆ. ರೈತರಿಗೆ ಅವರ ಜಮೀನಿನ ಹಕ್ಕನ್ನು ಸಂಪೂರ್ಣವಾಗಿ ಅವರಿಗೇ ನೀಡಲು, ಈ ವಿಚಾರದಲ್ಲಿ ಶಾಶ್ವತ ಪರಿಹಾರ ನೀಡಲು ರಾಜ್ಯ ಸರ್ಕಾರ ಸಂಕಲ್ಪ ತೊಟ್ಟಿದೆ. ರೈತರಿಗೆ ಜಮೀನು ಮಂಜೂರಾಗಿದ್ದರೂ ಪೋಡಿ ದುರಸ್ತಿಯಾಗದಿರಲು ಪ್ರಮುಖ ಕಾರಣಗಳಿವೆ. ದಶಕಗಳ ಹಿಂದಿನಿಂದಲೂ ಅಧಿಕಾರಿಗಳು ನೂರು ಎಕರೆ ಜಮೀನಿದ್ದರೆ ಅದಕ್ಕಿಂತ ಹೆಚ್ಚು ವಿಸ್ತೀರ್ಣ ಮಂಜೂರು ಮಾಡಿದ್ದಾರೆ. ಇದೊಂದು ಕಾರಣವಾದರೆ, ಕೆಲವು ಸಂದರ್ಭದಲ್ಲಿ ಸಾಗುವಳಿ ಮಾಡದಂತವರಿಗೂ ಮಂಜೂರು ಮಾಡಿದ್ದಾರೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಆರ್ಟಿಸಿಯಲ್ಲಿ ಮಂಜೂರುದಾರರ ಹೆಸರಿದೆ. ಆದರೆ, ಅವರಿಗೆ ಮಂಜೂರು ಆಗಿರುವ ಬಗ್ಗೆ ಯಾವುದೇ ನಿಖರ ದಾಖಲೆಗಳಿಲ್ಲ.

ಮತ್ತಷ್ಟು ಪ್ರಕರಣಗಳಲ್ಲಿ ಮಂಜೂರಿಗೆ ಅರ್ಜಿ ಕೊಟ್ಟಿರುವ ದಾಖಲೆ ಇದೆ. ಆದರೆ, ಮಂಜೂರು ಆಗಿರುವ ದಾಖಲೆ ಇಲ್ಲ. ಈ ಎರಡು ಪ್ರಮುಖ ಕಾರಣಗಳಿಂದ ಜಮೀನು ಮಂಜೂರಾಗಿದ್ದರೂ ದುರಸ್ತಿಯಾಗಿಲ್ಲ. ಹೀಗಾಗಿ ರೈತರು ಅಂತಹ ಜಮೀನಿನಲ್ಲಿ ಕೃಷಿ ಮಾಡಬಹುದೇ ವಿನಃ ಅವರಿಗೆ ಆ ಭೂಮಿಯಿಂದ ಬೇರೆ ಯಾವುದೇ ಪ್ರಯೋಜನ ಇಲ್ಲ.

ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಸಚಿವರ ಒತ್ತಡ ಇದೆ. ರೈತರಿಂದಲೂ ಸಾಕಷ್ಟು ಒತ್ತಡವಿದ್ದ ಕಾರಣ, ಅಧಿಕಾರಿಗಳ ಜೊತೆ ನಿರಂತರ ಚರ್ಚೆ ನಡೆಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ. ಯಾರಿಗೆ ಪೋಡಿ ಮಾಡಿಕೊಡಲು ಸಾಧ್ಯವೋ ಅವರಿಗೆಲ್ಲಾ ಪೋಡಿ ಮಾಡಿಕೊಡಲು ತೀರ್ಮಾನಿಸಿದ್ದಾರೆ.

ಪೋಡಿ ಎಂದರೇ ಏನು..? ಅದರ ಅನುಕೂಲತೆ ಈ ಕೆಳಕಂಡಂತಿದೆ
ಪೋಡಿ ಎಂದರೆ ಜಮೀನಿನ ದುರಸ್ತಿ ಭಾಗ ಮಾಡುವುದು ಎಂದರ್ಥ. ಉದಾಹರಣೆಗೆ ಒಂದು ಸರ್ವೆ ನಂಬರ್ ನಲ್ಲಿ ಎರಡಕ್ಕಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪ್ರತ್ಯೇಕವಾಗಿ ಹೆಸರು ಮಾಡುವುದಕ್ಕೆ ಪೋಡಿ ಎಂದು ಕರೆಯಲಾಗುತ್ತದೆ. ಪೋಡಿಯಲ್ಲಿ ನಾಲ್ಕು ವಿಧಗಳನ್ನು ಕಾಣಬಹುದು. ದರ್ಖಾಸ್ತು ಪೋಡಿ, ಅಲಿನೇಷನ್ ಪೋಡಿ, ತತ್ಕಾಲ ಪೋಡಿ ಮತ್ತು ಮ್ಯೂಟೇಷನ್ ಪೋಡಿ ಎಂದು ನಾಲ್ಕು ವಿಧಗಳಿವೆ.
ಒಂದು ಸರ್ವೆ ನಂಬರ್ ನಲ್ಲಿ ಹಲವಾರು ಹಿಸ್ಸಾ ಸಂಖ್ಯೆಗಳಿರುತ್ತವೆ. ಆದರೆ, ಭೂ ಮಾಲೀಕತ್ವದ ಹೆಸರು ಒಂದೇ ಪಹಣಿಯಲ್ಲಿ ಇರುತ್ತದೆ. ಇದರಿಂದಾಗಿ ರೈತರಿಗೆ ಸಾಕಷ್ಟು ಸಮಸ್ಯೆಯಾಗುವುದರ ಜೊತೆಗೆ ಸರ್ಕಾರದ ಸೌಲಭ್ಯಗಳು ಸಹ ಸಿಗುವುದಿಲ್ಲ. ಹಾಗಾಗಿ, ಜಮೀನಿನ ಮಾಲೀಕರು ಪೋಡಿ ಮಾಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಜಮೀನನ್ನು ಕಾಯ್ದೆ ಪ್ರಕಾರ ವಿಭಜನೆ ಮಾಡಿ ಪ್ರತ್ಯೇಕ ಹಿಸ್ಸಾ ಸಂಖ್ಯೆ ಹಾಗೂ ತಾತ್ಕಾಲಿಕ ಪೋಡಿ ನಂಬರ್ ನೀಡಲಾಗುತ್ತದೆ. ಆಗ ಪೋಡಿ ಮಾಡಲಾಗಿರುವ ಭೂಮಿಗೆ ಆದಾಯ ದಾಖಲೆಗಳನ್ನು ತಯಾರು ಮಾಡಿ ಏಕ ಮಾಲೀಕತ್ವದ ಪಹಣಿ ದೊರೆಯುತ್ತದೆ. ಉದಾಹರಣೆಗೆ ಹೇಳುವುದಾದರೆ, ಒಂದು ಸರ್ವೆ ನಂಬರ್ ನಲ್ಲಿ ಐದು ಹಿಸ್ಸಾಗಳಿವೆ. ಆದರೆ, ಪ್ರತ್ಯೇಕ ಪಹಣಿ ಇರುವುದಿಲ್ಲ. ಐದು ಹಿಸ್ಸಾ ಸಂಖ್ಯೆಗಳು ಅಥವಾ ಮಾಲೀಕರ ಹೆಸರುಗಳು ಮತ್ತು ಜಮೀನಿನ ವಿವರ ಒಂದೇ ಪಹಣಿಯಲ್ಲಿರುತ್ತವೆ. ಈ ವೇಳೆ ಸರ್ವೆ ನಂಬರ್ ನಲ್ಲಿರುವ ಹೆಸರು ಪ್ರತ್ಯೇಕವಾಗಿ ಬರಬೇಕೆಂದರೆ ತಾತ್ಕಾಲಿಕ ಪೋಡಿ ಮಾಡಿಸಬೇಕಾಗುತ್ತದೆ.

ಪೋಡಿ ಮಾಡಿಸಲು ಬೇಕಾಗಿರುವ ದಾಖಲೆಗಳು
ಜಮೀನು ಮಾಲೀಕನ ಆಧಾರ್ ಕಾರ್ಡ್ ಹಾಗೂ ಪಹಣಿ ಕಡ್ಡಾಯವಾಗಿ ಬೇಕಾಗುತ್ತದೆ. ಇನ್ನು ಹೆಚ್ಚಿನ ದಾಖಲೆಗಳ ಮಾಹಿತಿಗಾಗಿ ತಹಶಿಲ್ದಾರ್ ಕಚೇರಿ ಅಥವಾ ನಾಡಕಚೇರಿಗೆ ಸಂಪರ್ಕಿಸಿ, ಪೋಡಿ ಮಾಡಿಸಲು ನಾಡ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಪೋಡಿಯಲ್ಲಿ ಹೆಸರು ಬದಲಾವಣೆಯಾಗುವುದಿಲ್ಲ. ಕೇವಲ ಗಡಿ ರೇಖೆ ಮಾತ್ರ ಗುರುತು ಮಾಡಲಾಗುತ್ತದೆ.
ಪೋಡಿ ಮಾಡಿಸುವುದರಿಂದಾಗುವ ಪ್ರಯೋಜನಗಳು ಈ ಕೆಳಕಂಡಂತಿದೆ
ಭೂಮಿ ಮಾಲೀಕತ್ವ ಖಾತ್ರಿ ಪಡೆದುಕೊಳ್ಳುವುದರಿಂದ ಒತ್ತುವರಿಯಾಗುವುದಿಲ್ಲ.
ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ.
ಬೆಳೆ ವಿಮೆ ಮಾಡಿಸಲು ಸುಲಭವಾಗುತ್ತದೆ.
ಏಕ ಮಾಲೀಕತ್ವವಿದ್ದರೆ ಕಿಸಾನ್ ಕ್ರೆಡಿಟ್ ಕಾರ್ಡ್, ಬೆಳೆ ಸಾಲ ಸಿಗುತ್ತದೆ.
ಕೃಷಿ ಭೂಮಿ ಖರೀದಿ ಹಾಗೂ ಮಾರಾಟ ಮಾಡಲು ಜಮೀನು ಪೋಡಿ ಮಾಡಿಸುವುದು ಕಡ್ಡಾಯವಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.