ಮದುವೆಯಾದ ಮೂರೇ ದಿನಕ್ಕೆ ಪತಿ ವಿರುದ್ದ ‘DOWRY CASE’ ಹಾಕಿದ್ದ ಪತ್ನಿಗೆ ಹೈಕೋರ್ಟ್ ನಲ್ಲಿ ಹಿನ್ನೆಡೆ: ಕಾರಣವೇನು..?
ಬೆಂಗಳೂರು: ಮದುವೆಯಾದ ಮೂರೇ ದಿನದಲ್ಲಿಪತಿ ಮತ್ತು ಆತನ ಮನೆಯವರ ವಿರುದ್ದ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದ ಪತ್ನಿಗೆ ಹೈಕೋರ್ಟ್ ನಲ್ಲೂ ಹಿನ್ನೆಡೆಯಾಗಿದೆ.
ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯದ ನೀಡಿದ್ದ ವಿಚ್ಛೇದನದ ತೀರ್ಪನ್ನ ಹೈಕೋರ್ಟ್ ಎತ್ತಿಹಿಡಿದಿದೆ. ಇದರಿಂದಾಗಿ ವೈವಾಹಿಕ ಸಂಬಂಧ ಪುನರಾರಂಭ ಕೋರಿ ಅರ್ಜಿ ಸಲ್ಲಿಸಿದ್ದ ಪತ್ನಿಗೆ ಹಿನ್ನಡೆಯಾಗಿದ್ದು, ಆಕೆ ಇನ್ನು ಶಾಶ್ವತವಾಗಿ ಪತಿಯಿಂದ ದೂರ ಉಳಿಯಬೇಕಾಗಿದೆ.
ವಿಚ್ಛೇದನ ಮಂಜೂರು ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮತ್ತು ಪತಿಯೊಂದಿಗೆ ಮತ್ತೆ ವೈವಾಹಿಕ ಜೀವನ ಪುನರಾರಂಭಿಸಲು ಕೋರಿ ಮಹಿಳೆಯೊಬ್ಬರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಮತ್ತು ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ಪೀಠವು ಕೌಟುಂಬಿಕ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದು ಆದೇಶಿಸಿದೆ.
‘ಪ್ರಕರಣದಲ್ಲಿ ಪತ್ನಿ ವಿವಾಹದ ಬಳಿಕ ಪತಿಯ ಮನೆಯಲ್ಲಿ ಮೂರು ದಿನ ಮಾತ್ರ ನೆಲೆಸಿದ್ದರು, ಈ ಸಮಯದಲ್ಲಿ ಹೆಚ್ಚುವರಿ ವರದಕ್ಷಿಣೆ ತರುವಂತೆ ತನಗೆ ಕಿರುಕುಳ ನೀಡಿ ಕ್ರೂರವಾಗಿ ನಡೆದುಕೊಂಡಿದ್ದಾರೆಂದು ಅರ್ಜಿದಾರೆ ಮಹಿಳೆ ಆರೋಪಿಸಿದ್ದಾರೆ. ಆದರೆ, ಅದಕ್ಕೆ ಯಾವುದೇ ಸಾಕ್ಷ್ಯಾಧಾರ ಒದಗಿಸಿಲ್ಲ. ಆದ್ದರಿಂದ ಅದನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ,’ ಎಂದು ನ್ಯಾಯಪೀಠ ತಿಳಿಸಿದೆ.
ಅರ್ಜಿದಾರರು ಮತ್ತು ಪ್ರತಿವಾದಿಯಾಗಿರುವವರ ನಡುವೆ ಕುಟುಂಬಸ್ಥರ ಒಪ್ಪಿಗೆಯಿಂದ ನಡೆದ ಮದುವೆಯಾಗಿದ್ದು, ದಂಪತಿ ನಡುವೆ ವಿವಾಹಕ್ಕೂ ಮುನ್ನ ಮಾತುಕತೆ ನಡೆದಿದೆ. ಎರಡೂ ಕುಟುಂಬಗಳ ಆರ್ಥಿಕ ಸ್ಥಿತಿಗತಿ ಪರಿಗಣಿಸಿಯೇ ವಿವಾಹ ನಡೆದಿದೆ. ಆದರೆ, ಮದುವೆಯಾದ ತಕ್ಷಣ ವೈವಾಹಿಕ ಜೀವನ ನಡೆಸಲು ಮಹಿಳೆ ನಿರಾಕರಿಸಿದ್ದರು. ಜತೆಗೆ, ಹೆಚ್ಚುವರಿ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂಬುದಾಗಿ ಆರೋಪ ಮಾಡಿದ್ದಾರೆ. ಈ ಎಲ್ಲಅಂಶಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲದ ಪರಿಣಾಮ ಆರೋಪವನ್ನು ನಂಬಲಾಗುವುದಿಲ್ಲ ಎಂದು ಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಅರ್ಜಿದಾರರಿಗೆ ಮಾನಸಿಕ ಅಸ್ವಸ್ಥತೆ ಇದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ, ಅವರು ಚಿಕಿತ್ಸೆ ಮುಂದುವರಿಸಲು ನಿರಾಕರಿಸಿದ್ದಾರೆಂಬ ಅಂಶ ದಾಖಲೆಗಳಿಂದ ಗೊತ್ತಾಗಿದೆ. ಅರ್ಜಿದಾರರು ಕೌಟುಂಬಿಕ ನ್ಯಾಯಾಲಯದ ವಿಚಾರಣೆ ವೇಳೆ ಈ ಅಂಶವನ್ನು ಒಪ್ಪಿಕೊಂಡಿದ್ದರು. ಅಲ್ಲದೆ, ಮಾನಸಿಕವಾಗಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಪೊಲೀಸರು ಮತ್ತು ಸಂಬಂಧಿಕರ ಒತ್ತಡದ ಮೇಲೆ ಚಿಕಿತ್ಸೆ ಪಡೆದುಕೊಂಡಿದ್ದೆಂದು ತಿಳಿಸಿದ್ದಾರೆ. ಆದರೆ, ಯಾವ ಕಾರಣಕ್ಕೆ ಚಿಕಿತ್ಸೆ ಮುಂದುವರಿಸಿಲ್ಲಎಂಬುದನ್ನು ವಿವರಿಸಿಲ್ಲ. ಈ ಅಂಶಗಳು, ಅರ್ಜಿದಾರರೊಂದಿಗೆ ಪತಿ ಜೀವನ ನಡೆಸುವುದಕ್ಕೆ ತೊಂದರೆ ಅನುಭವಿಸಿದ್ದಾರೆಂಬ ಅಂಶ ಗೊತ್ತಾಗಲಿದೆ, ಎಂದು ನ್ಯಾಯಪೀಠ ತಿಳಿಸಿದೆ.
ಏನಿದು ಪ್ರಕರಣ…
2017ರಲ್ಲಿ ನಗರದ ಪ್ರತಿಷ್ಠಿತ ಕಲ್ಯಾಣ ಮಂಟಪದಲ್ಲಿ ಅರ್ಜಿದಾರರು ಮತ್ತು ಪ್ರತಿವಾದಿ ನಡುವೆ ವಿವಾಹ ಸಂಪ್ರದಾಯಬದ್ದವಾಗಿ ನಡೆದಿತ್ತು. ಬಳಿಕ ಅರ್ಜಿದಾರರಾಗಿರುವ ಪತ್ನಿ ತನ್ನ ಗಂಡನ ಮನೆಯಲ್ಲಿಯೇ ಇದ್ದರು. ಮೂರು ದಿನಗಳ ಕಾಲ ಪತಿಯೊಂದಿಗಿದ್ದ ಅರ್ಜಿದಾರರು, ಬಳಿಕ ಪತಿ ಮತ್ತು ಅವರ ಕುಟುಂಬಸ್ಥರು 10 ಲಕ್ಷ ರೂ. ಗಳ ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದು, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಮನೆಯಿಂದ ಹೊರ ಹೋಗಲು ಸೂಚನೆ ನೀಡಿದ್ದಾರೆ ಎಂದು ಆರೋಪಿಸಿದ್ದರು.
ಈ ಸಂಬಂಧ ರಾಜಿ ಪಂಚಾಯಿತಿ ನಡೆದರೂ, ಯಾವುದೇ ಫಲ ನೀಡಿರಲಿಲ್ಲ. ಬಳಿಕ 2018ರ ಸೆಪ್ಟಂಬರ್2 ರಂದು ಅರ್ಜಿದಾರರು (ಪತ್ನಿ) ತನ್ನ ಪೋಷಕರೊಂದಿಗೆ ಪತಿಯ ಮನೆಗೆ ಬಂದು, ಮತ್ತೆ ಮನೆಗೆ ಸೇರಿಸಿಕೊಳ್ಳಲು ಮನವಿ ಮಾಡಿದರು. ಅದಕ್ಕೆ ಪತಿಯ ಮನೆಯವರು ಒಪ್ಪಿರಲಿಲ್ಲ. ಇದರಿಂದಾಗಿ ಗಲಾಟೆ ನಡೆದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ದೂರಿನ ಆಧಾರದ ಮೇಲೆ ಪತಿ ಮತ್ತವರ ಕುಟುಂಬದ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
