08/03/2026

Law Guide Kannada

Online Guide

2ನೇ ಪತಿಯಿಂದಲೂ ಜೀವನಾಂಶ ಕೇಳುವ ಹಕ್ಕು ಪತ್ನಿಗಿದೆ- ಸುಪ್ರೀಂಕೋರ್ಟ್ 

ನವದೆಹಲಿ: ಮೊದಲ ಮದುವೆಯು ಕಾನೂನಿನ ಪ್ರಕಾರ ಚಾಲ್ತಿಯಲ್ಲಿ ಇದ್ದರೂ ಸಹ ಎರಡನೇ ಪತಿಯಿಂದಲೂ ಜೀವನಾಂಶ ಕೇಳುವ ಹಕ್ಕು ಪತ್ನಿಗೆ ಇದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

 

ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮ ಅವರಿದ್ದ ವಿಭಾಗೀಯ ಪೀಠವು, ಮೊದಲ ಮದುವೆಯು ಕಾನೂನಿನ ಪ್ರಕಾರ ಚಾಲ್ತಿಯಲ್ಲಿ ಇದ್ದರೂ, ಅಪರಾಧ ದಂಡಪ್ರಕ್ರಿಯಾ ಸಂಹಿತೆಯ (ಸಿಆರ್ಪಿಸಿ) ಸೆಕ್ಷನ್ 125ರ ಅಡಿಯಲ್ಲಿ ಎರಡನೆಯ ಪತಿಯಿಂದ ಜೀವನಾಂಶ ಕೇಳುವ ಹಕ್ಕು ಮಹಿಳೆಗೆ ಇರುತ್ತದೆ ಎಂದು ತಿಳಿಸಿದೆ.  ಸೆಕ್ಷನ್ 125ರ ಅಡಿಯಲ್ಲಿ ಸಿಗುವ ಜೀವನಾಂಶವು ಮಹಿಳೆ ಪಡೆದುಕೊಳ್ಳುವುದು ಸೌಲಭ್ಯವಲ್ಲ.  ಅದು ಪತಿಯ ಪಾಲಿನ ಕರ್ತವ್ಯ ಎಂದು ನ್ಯಾಯಪೀಠ ಅಭಿಪ್ರಾಯಿಸಿದೆ.

 

ಮಹಿಳೆಯ ಪರ ವಾದ ಮಂಡಿಸಿದ ವಕೀಲರು, ಮಹಿಳೆ ಮತ್ತು ಪ್ರತಿವಾದಿ ಪುರುಷ ವಿವಾಹಿತರಂತೆ ಇದ್ದರು, ಇಬ್ಬರೂ ಒಟ್ಟಾಗಿ ಮಗುವನ್ನು ಸಲಹುತ್ತಿದ್ದರು. ಹೀಗಾಗಿ, ಜೀವನಾಂಶದ ಪ್ರಯೋಜನವು ಮಹಿಳೆಗೂ ಸಿಗಬೇಕು. ಮಹಿಳೆಗೆ ಮೊದಲೇ ಒಂದು ಮದುವೆ ಆಗಿದೆ ಎಂಬುದನ್ನು ಎರಡನೆಯ ಪತಿಯಿಂದ ಮುಚ್ಚಿಟ್ಟಿರಲಿಲ್ಲ ಎಂದು ತಿಳಿಸಿದರು.

 

ಇದಕ್ಕೆ ಪ್ರತಿಯಾಗಿ ಪ್ರತಿವಾದ ಮಂಡಿಸಿದ ಪುರುಷನ (ಎರಡನೆಯ ಪತಿ) ಪರ ವಕೀಲರು, ಮೊದಲ ಮದುವೆಯು ಊರ್ಜಿತದಲ್ಲಿ ಇದ್ದಾಗ, ಆಕೆಯು ತನ್ನ ಕಕ್ಷಿದಾರನ ಪತ್ನಿ ಎಂದು ಪರಿಗಣಿತಳಾಗುವುದಿಲ್ಲ. ಹೀಗಾಗಿ ಆಕೆಯು ಸೆಕ್ಷನ್ 125 ಅಡಿಯಲ್ಲಿ ಜೀವನಾಂಶ ಕೇಳಲು ಅವಕಾಶ ಇರುವುದಿಲ್ಲ ಎಂದು ವಾದಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ
Copyright © All rights reserved. | Newsphere by AF themes.