20/05/2025

Law Guide Kannada

Online Guide

ಪತ್ನಿ ಖಾಸಗಿಯಾಗಿ ಬ್ಲೂಫಿಲಂ ವೀಕ್ಷಣೆ , ಸ್ವ-ಸುಖದಲ್ಲಿ ತೊಡಗುವುದು ಪತಿಯ ಮೇಲಿನ ಕ್ರೌರ್ಯವಲ್ಲ – ಹೈಕೋರ್ಟ್

ಚೆನ್ನೈ: ಪತ್ನಿ ಖಾಸಗಿಯಾಗಿ ಪೋರ್ನ್ ನೋಡಿ ಸುಖ ಪಡುವುದು ಪತಿಯ ಮೇಲಿನ ಕ್ರೌರ್ಯವಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿಚ್ಛೇದನ ನಿರಾಕರಿಸಿದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಮಹಿಳೆಯ ಪರ ನಿಂತ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ, ಪತ್ನಿ ಖಾಸಗಿಯಾಗಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದು ಮತ್ತು ಸ್ವ-ಸುಖದಲ್ಲಿ ತೊಡಗುವುದು ಪತಿಗೆ ಕ್ರೌರ್ಯವಾಗುವುದಿಲ್ಲ ಎಂದು ತೀರ್ಪು ನೀಡಿದೆ.

ಕರೂರಿನ ಕುಟುಂಬ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ವ್ಯಕ್ತಿ ಸಲ್ಲಿಸಿದ ಸಿವಿಲ್ ವಿವಿಧ ಮೇಲ್ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ಆರ್. ಪೂರ್ಣಿಮಾ ಅವರ ವಿಭಾಗೀಯ ಪೀಠವು, ತಮ್ಮ ಪತ್ನಿ ಸಾಂಕ್ರಾಮಿಕ ರೂಪದಲ್ಲಿ ಲೈಂಗಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ ಮತ್ತು ಆಕೆಯ ನಡವಳಿಕೆಯು ಕ್ರೌರ್ಯವನ್ನು ಪ್ರತಿನಿಧಿಸುತ್ತದೆ ಎಂದು ಪತಿ ತಮ್ಮ ಪ್ರಕರಣಕ್ಕೆ ಆಧಾರವನ್ನಾಗಿ ಮಾಡಿದ್ದರು. ಇನ್ನೂ ಸಂಗಾತಿಯು ಲೈಂಗಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಆರೋಪವು ಗಂಭೀರ ಕಳಂಕವನ್ನುಂಟು ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಈ ಆರೋಪಕ್ಕೆ ಕಟ್ಟುನಿಟ್ಟಾದ ಪುರಾವೆಗಳು ಬೇಕಾಗುತ್ತವೆ. ಆಕೆಯ ಸ್ಥಿತಿಯು ನೈತಿಕವಾಗಿ ವಿಚಲಿತ ನಡವಳಿಕೆಯ ಫಲಿತಾಂಶವಲ್ಲ, ಆದರೆ ಆಕೆಯ ನಿಯಂತ್ರಣಕ್ಕೆ ಮೀರಿದ ಕೆಲವು ಸಂದರ್ಭಗಳಿಂದಾಗಿ ಎಂದು ತೋರಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯ ಗಮನಿಸಿತು.

ತನ್ನ ಪತ್ನಿ ಲೈಂಗಿಕ ಕಾಯಿಲೆಯಿಂದ ಬಳಲುತ್ತಿದ್ದಾಳೆ ಎಂಬ ಆರೋಪವನ್ನು ಸಾಬೀತುಪಡಿಸಲು ಮೇಲ್ಮನವಿ ಸಲ್ಲಿಸಿದವರು ವಿಫಲರಾಗಿದ್ದಾರೆ. ಖಾಸಗಿ ವ್ಯವಸ್ಥೆಯಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವುದು ಅಪರಾಧವಾಗುವುದಿಲ್ಲ. ಪತ್ನಿ ಅಶ್ಲೀಲ ಚಿತ್ರಗಳನ್ನು ನೋಡುವುದು ಆಕೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅದು ಮಾತ್ರ ಇತರ ಸಂಗಾತಿಯೊಂದಿಗೆ ಕ್ರೌರ್ಯವಾಗಿ ವರ್ತಿಸುವುದಕ್ಕೆ ಸಮನಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಹಾಗೆಯೇ ಮದುವೆಯಾದ ನಂತರವೂ ಮಹಿಳೆಗೆ ತನ್ನ ಸ್ವಂತಿಕೆ ಮತ್ತು ವ್ಯಕ್ತಿತ್ವ ಉಳಿಸಿಕೊಳ್ಳುವ ಹಕ್ಕಿದೆ. ಹೆಂಡತಿ ಆದ ಮಾತ್ರಕ್ಕೆ ಮಹಿಳೆಯ ಅಸ್ಮಿತೆಗೆ ಕುತ್ತು ತರುವಂತಿಲ್ಲ ಎಂದೂ ಹೇಳಿದೆ.

ನೀಲಿ ಚಿತ್ರದ ವ್ಯಸನವು ಕೆಟ್ಟದು ಮತ್ತು ನೈತಿಕವಾಗಿ ಸಮರ್ಥನೀಯವಲ್ಲ. ಆದರೆ, ಇದು ವಿಚ್ಛೇದನಕ್ಕೆ ಕಾನೂನಿನ ಆಧಾರವಾಗುವುದಿಲ್ಲ. ಪುರುಷರಲ್ಲಿ ಹಸ್ತ ಮೈಥುನವನ್ನು ಸಾರ್ವತ್ರಿಕವೆಂದು ಒಪ್ಪಿಕೊಂಡಾಗ, ಮಹಿಳೆಯರು ಹಸ್ತಮೈಥುನ ಮಾಡಿಕೊಳ್ಳುವುದನ್ನು ಕಳಂಕವಾಗಿ ಪರಿಗಣಿಸಲಾಗದು. ಸ್ವ-ಭೋಗದಲ್ಲಿ ತೊಡಗುವುದು ಮದುವೆಯನ್ನು ವಿಸರ್ಜಿಸಲು ಕಾರಣವಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.