19/05/2025

Law Guide Kannada

Online Guide

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೇ SC ಸ್ಥಾನಮಾನ ಸಿಗುವುದಿಲ್ಲವೇ..?

ವಿಜಯವಾಡ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ ಪರಿಶಿಷ್ಟಜಾತಿ(SC)ಯ ಸ್ಥಾನಮಾನ ಸಿಗುವುದಿಲ್ಲ ಎಂದು ಆಂಧ್ರ ಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಎಸ್ಸಿ/ಎಸ್ಟಿ ಕಾಯ್ದೆಯಡಿ ದೂರು ದಾಖಲಿಸಿದ್ದ ಗುಂಟೂರು ಜಿಲ್ಲೆಯ ಕೊತ್ತಪಾಲೆಂನ ಪಾದ್ರಿ ಚಿಂತಕ ಆನಂದ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎನ್ ಹರಿನಾಥ್ ಅವರು ಈ ತೀರ್ಪು ನೀಡಿದ್ದಾರೆ.

ಪರಿಶಿಷ್ಟ ಜಾತಿಗೆ (ಎಸ್ಸಿ) ಸೇರಿದ ವ್ಯಕ್ತಿಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ತಕ್ಷಣ ತಮ್ಮ SC ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ. ಆ ಮೂಲಕ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ರಕ್ಷಣೆಯನ್ನು ಕಳೆದುಕೊಳ್ಳುತ್ತಾರೆ ಎಂದು ಆಂಧ್ರಪ್ರದೇಶ ಹೈಕೋರ್ಟ್ ತಿಳಿಸಿದೆ.

ಒಂದು ದಶಕಕ್ಕೂ ಹೆಚ್ಚು ಕಾಲ ಪಾದ್ರಿಯಾಗಿದ್ದ ಆನಂದ್ ಅವರು, ಅಕ್ಕಲಾ ರಾಮಿರೆಡ್ಡಿ ಮತ್ತಿತರರು ತನ್ನ ಜಾತಿಯ ಆಧಾರದ ಮೇಲೆ ನಿಂದಿಸಿದ್ದಾರೆ ಎಂದು ಆರೋಪಿಸಿ ಜನವರಿ 2021 ರಂದು ಚಂದೋಲು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ರಾಮಿರೆಡ್ಡಿ ಮತ್ತಿತರರು ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಾದ ಪ್ರತಿವಾದ ಆಲಿಸಿತು. ಅರ್ಜಿದಾರರ ಪರ ವಾದಮಂಡಿಸಿದ ವಕೀಲ ಫಣಿ ದತ್ ಅವರು, ಆನಂದ್ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಹತ್ತು ವರ್ಷಗಳ ಕಾಲ ಪಾದ್ರಿಯಾಗಿ ಸೇವೆ ಸಲ್ಲಿಸಿದ ನಂತರ ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ, 1950 ರ ಅಡಿಯಲ್ಲಿ ಎಸ್ಸಿ ಸದಸ್ಯರಾಗಿ ಅರ್ಹತೆ ಪಡೆದಿಲ್ಲ ಎಂದು ತಿಳಿಸಿದರು.

ಇದಕ್ಕೆ ಪ್ರತಿವಾದ ಮಂಡಿಸಿದ ಆನಂದ್ ಪರ ವಕೀಲ ಈರ್ಲ ಸತೀಶ್ ಕುಮಾರ್, ಆನಂದ್ ಅವರು ಎಸ್ಸಿ ಹಿಂದೂ ಜಾತಿ ಪ್ರಮಾಣಪತ್ರವನ್ನು ಹೊಂದಿದ್ದು, ಕಾಯ್ದೆಯಡಿ ರಕ್ಷಣೆಗೆ ಅರ್ಹತೆ ಹೊಂದಿರುವುದಾಗಿ ಪ್ರತಿಪಾದಿಸಿದರು.

ಆದಾಗ್ಯೂ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವುದರಿಂದ, ಜಾತಿ ಭೇದಗಳು ಇರಲ್ಲ.ಯಾವುದೇ ಜಾತಿ ಪ್ರಮಾಣವನ್ನು ಹೊಂದಿದ್ದರೂ ಅದನ್ನು ಲೆಕ್ಕಿಸದೆ SC ಸ್ಥಾನಮಾನವನ್ನು ರದ್ದಾಗುತ್ತದೆ. ಎಸ್ಸಿ ಮತ್ತು ಎಸ್ಟಿ ಸಮುದಾಯಗಳನ್ನು ತಾರತಮ್ಯ ಮತ್ತು ದೌರ್ಜನ್ಯಗಳಿಂದ ರಕ್ಷಿಸಲು ಎಸ್ಸಿ/ಎಸ್ಟಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಆದರೆ ಅದರ ನಿಬಂಧನೆಗಳು ಇತರ ಧರ್ಮಗಳಿಗೆ ಮತಾಂತರಗೊಂಡವರಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಪರಿಗಣಿಸಿತು. ಹಾಗೆಯೇ ಆನಂದ್ ಅವರು ಸುಳ್ಳು ದೂರು ದಾಖಲಿಸುವ ಮೂಲಕ ಎಸ್ಸಿ/ಎಸ್ಟಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿತು.

ಆನಂದ್ ಪಾದ್ರಿಯಾಗಿ ಒಂದು ದಶಕ ಕಾರ್ಯನಿರ್ವಹಿಸಿರುವುದನ್ನು ಸಾಕ್ಷಿಗಳು ದೃಢಪಡಿಸಿದ್ದು, ಈ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಹರಿನಾಥ್ ಅವರು , ಅವರ ಸ್ಥಿತಿಯನ್ನು ಪರಿಶೀಲಿಸದೆ ಪ್ರಕರಣವನ್ನು ದಾಖಲಿಸಿದ್ದಕ್ಕಾಗಿ ಪೊಲೀಸರ ಕ್ರಮವನ್ನು ಟೀಕಿಸಿ ರಾಮಿರೆಡ್ಡಿ ಮತ್ತಿತರರ ದಾಖಲಿಸಿದ್ದ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದರು.

ಆನಂದ್ ಅವರ ದೂರಿಗೆ ಕಾನೂನು ಮಾನ್ಯತೆ ಇಲ್ಲ. ಆನಂದ್ ಅವರ ಜಾತಿ ಪ್ರಮಾಣಪತ್ರದ ಸಿಂಧುತ್ವವು ಅಧಿಕಾರಿಗಳ ಪರಿಶೀಲನೆಗೆ ಒಳಪಟ್ಟಿರುತ್ತದೆ. ಆದರೆ ಮತಾಂತರದ ನಂತರದ ಎಸ್ಸಿ/ಎಸ್ಟಿ ಕಾಯ್ದೆಯಡಿ ರಕ್ಷಣೆ ಸಿಗಲ್ಲ ಎಂದು ನ್ಯಾಯಾಧೀಶರು ತೀರ್ಪು ನೀಡಿ ಪ್ರಕರಣ ಇತ್ಯರ್ಥಪಡಿಸಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.