ಮಹಿಳೆ ‘ಕೂಡದು’ ಎಂದರೆ ಅಸಮ್ಮತಿಯೇ ಹೌದು: ಮೂವರು ಅಪರಾಧಿಗಳ ವಿರುದ್ದದ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

ಮುಂಬೈ: ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳ ವಿರುದ್ಧದ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ.
ನ್ಯಾಯಮೂರ್ತಿಗಳಾದ ನಿತಿನ್ ಸೂರ್ಯವಂಶಿ ಮತ್ತು ಎಂ.ಡಬ್ಲ್ಯೂ, ಚಂದ್ವಾನಿ ಅವರ ಪೀಠವು ಈ ತೀರ್ಪು ನೀಡಿದ್ದು ಈ ಪ್ರಕರಣದಲ್ಲಿ ಮೂವರು ಅಪರಾಧಿಗಳ ವಿರುದ್ಧದ ಶಿಕ್ಷೆಯನ್ನು ರದ್ದುಗೊಳಿಸಲು ನ್ಯಾಯಪೀಠ ನಿರಾಕರಿಸಿದೆ.
ಸಂಭೋಗಕ್ಕೆ ಸಂಬಂಧಿಸಿದಂತೆ ಮಹಿಳೆಯು ‘ಕೂಡದು’ ಎಂದು ಅಸಮ್ಮತಿ ಸೂಚಿಸಿದರೆ ಅದನ್ನು ಹಾಗೆಯೇ ಪರಿಗಣಿಸಬೇಕು . ಮಹಿಳೆ ‘ಕೂಡದು’ ಎಂದು ಹೇಳಿದ ಮೇಲೆ, ಆಕೆಯ ಹಿಂದಿನ ಲೈಂಗಿಕ ಚಟುವಟಿಕೆಗಳನ್ನು ಆಧರಿಸಿ ಒಪ್ಪಿಗೆಯನ್ನು ಊಹಿಸಿಕೊಳ್ಳಲು ಅವಕಾಶವಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಿಸಿದೆ.
ಮೂವರು ಅಪರಾಧಿಗಳ ವಿರುದ್ಧದ ಶಿಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿದ ನ್ಯಾಯಪೀಠವು ಅವರ ಶಿಕ್ಷೆಯನ್ನು ಜೀವಾವಧಿಯಿಂದ 20 ವರ್ಷಗಳ ಜೈಲು ಶಿಕ್ಷೆಗೆ ಇಳಿಸಿ ತೀರ್ಪು ನೀಡಿದೆ.
ಮಹಿಳೆಯ ಒಪ್ಪಿಗೆಯಿಲ್ಲದೆ ಲೈಂಗಿಕ ಕ್ರಿಯೆ ನಡೆಸಿದಾಗ ಅದು ಆಕೆಯ ದೇಹ, ಮನಸ್ಸು ಮತ್ತು ಖಾಸಗಿತನದ ಮೇಲಿನ ಹಲ್ಲೆ ಎಂದೇ ಪರಿಗಣಿಸಲಾಗುತ್ತದೆ’ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಅತ್ಯಾಚಾರವು ನೈತಿಕ ಮತ್ತು ದೈಹಿಕವಾಗಿ ಘೋರ ಅಪರಾಧವಾಗಿದೆ ಎಂದು ಅದು ಉಲ್ಲೇಖಿಸಿದೆ.
‘ಮಹಿಳೆಯು ಆರಂಭದಲ್ಲಿ ತಮ್ಮ ಮೂವರಲ್ಲಿ ಒಬ್ಬರೊಂದಿಗೆ ಸಂಬಂಧ ಹೊಂದಿದ್ದರು. ಬಳಿಕ ಇನ್ನೊಬ್ಬ ಪುರುಷನೊಂದಿಗೆ ಲಿವ್-ಇನ್ ಸಂಬಂಧ ಬೆಳೆಸಿಕೊಂಡಿದ್ದರು’ ಎಂದು ಈ ಅಪರಾಧಿಗಳು ತಮ್ಮ ಮೇಲ್ಮನವಿ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು. ಆದರೆ, ಮಹಿಳೆಯ ನೈತಿಕತೆಯನ್ನು ಪ್ರಶ್ನಿಸಲು ಅಪರಾಧಿಗಳು ಮಾಡಿದ ಈ ಪ್ರಯತ್ನಕ್ಕೆ ಹೈಕೋರ್ಟ್ ಛೀಮಾರಿ ಹಾಕಿತು.
‘ಮಹಿಳೆಯು ಪತಿಯಿಂದ ಬೇರ್ಪಟ್ಟ ಪತ್ನಿಯಾಗಿದ್ದರೂ, ವಿಚ್ಛೇದನ ಪಡೆಯದೆ ಇನ್ನೊಬ್ಬ ಪುರುಷನ ಜತೆ ವಾಸಿಸುತ್ತಿದ್ದರೂ, ಆಕೆಯ ಒಪ್ಪಿಗೆಯಿಲ್ಲದೆ ಯಾವುದೇ ವ್ಯಕ್ತಿಯು ಸಂಭೋಗಕ್ಕೆ ಒತ್ತಾಯಿಸುವಂತಿಲ್ಲ. ಸಂತ್ರಸ್ತೆಯು ಅಪರಾಧಿಗಳ ಪೈಕಿ ಒಬ್ಬರ ಜತೆಗೆ ಈ ಹಿಂದೆ ಸಂಬಂಧದಲ್ಲಿ ಇದ್ದರೂ, ಆಕೆಯ ಒಪ್ಪಿಗೆಯಿಲ್ಲದೆ ಬಲವಂತವಾಗಿ ಸಂಭೋಗಿಸಿದರೆ ಅದು ಅತ್ಯಾಚಾರಕ್ಕೆ ಸಮನಾಗುತ್ತದೆ’ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ.
ಈ ಮೂವರು ಅಪರಾಧಿಗಳು 2014ರ ನವೆಂಬರ್ನಲ್ಲಿ ಸಂತ್ರಸ್ತೆಯ ಮನೆಗೆ ನುಗ್ಗಿ, ಆಕೆಯ ಜೊತೆಗಿದ್ದವನ ಮೇಲೆ ಹಲ್ಲೆ ನಡೆಸಿ ಬಳಿಕ ಮಹಿಳೆಯನ್ನು ಬಲವಂತವಾಗಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ