ಹೆಚ್ಚು ಅಂಕ ಪಡೆದ ಮೀಸಲು ವರ್ಗದ ಅಭ್ಯರ್ಥಿಯೂ ಸಾಮಾನ್ಯ ವರ್ಗಕ್ಕೆ ಅರ್ಹರು – ಸುಪ್ರೀಂಕೋರ್ಟ್
ನವದೆಹಲಿ: ಮೀಸಲು ಪಡೆಯುವ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಕಟಾಫ್ ಗಿಂತಲೂ ಹೆಚ್ಚಿನ ಅಂಕ ಪಡೆದಿದ್ದರೆ, ಅವರನ್ನು ಸಾಮಾನ್ಯ ವರ್ಗದ ಉದ್ಯೋಗ ನೇಮಕಾತಿಗೂ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
2013ರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) 245 ಹುದ್ದೆಗಳ ನೇಮಕಾತಿ ಸಂಬಂಧ ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು, ಪ್ರವರ್ಗವಾರು ಮೀಸಲು ಕೋಟಾದ ಕಟ್-ಆಫ್ ಅಂಕಗಳಿಗಿಂತ ಹೆಚ್ಚಿನ ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಕಡ್ಡಾಯವಾಗಿ ಸಾಮಾನ್ಯ ಪ್ರವರ್ಗದಡಿ ಪರಿಗಣಿಸಬೇಕು ಎಂದು ಹೇಳಿದೆ.
‘ಸಾಮಾನ್ಯ ವರ್ಗದ ಕಟ್-ಆಫ್ ಅಂಕಗಳಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ಮೀಸಲು ವರ್ಗಕ್ಕೆ (ಎಸ್ಸಿ, ಎಸ್ಟಿ ಮತ್ತು ಒಬಿಸಿ) ಸೇರಿದ ಅಭ್ಯರ್ಥಿಯನ್ನು ಸಾಮಾನ್ಯ ಪ್ರವರ್ಗದಡಿ ಖಾಲಿ ಹುದ್ದೆಗೆ ಅರ್ಹತೆ ಪಡೆದಿದ್ದಾರೆ ಎಂದು ಪರಿಗಣಿಸಬೇಕು ಎಂಬುದು ಕಾನೂನಿನ ಸ್ಥಾಪಿತ ತತ್ವ’ ಎಂದು ಹೇಳಿದೆ.
ಮೀಸಲು ಪ್ರವರ್ಗದ ಅಭ್ಯರ್ಥಿ ಹೆಚ್ಚಿನ ಅಂಕಗಳನ್ನು ಪಡೆದಿದ್ದರೂ, ಆತನ ಬದಲು ಸಾಮಾನ್ಯ ವರ್ಗದ ಕೋಟಾದಡಿ ಸಾಮಾನ್ಯ ವರ್ಗದ ಅಭ್ಯರ್ಥಿಯನ್ನು ನೇಮಕ ಮಾಡಿಕೊಳ್ಳುವಂತೆ ಕೇರಳ ಹೈಕೋರ್ಟ್ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) ನಿರ್ದೇಶನ ನೀಡಿತ್ತು. 2013ರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) 245 ಹುದ್ದೆಗಳಿಗೆ ನೇಮಕಾತಿ ಮಾಡಿತ್ತು. ಈ ವೇಳೆ, ಮೀಸಲಾತಿಗೆ ಒಳಪಡದ 122 ಸೀಟುಗಳಿಗೆ ಸಾಮಾನ್ಯ ವರ್ಗ ಹಾಗೂ ಅಲ್ಪಸಂಖ್ಯಾತ ವರ್ಗದವರನ್ನು ನೇಮಿಸಿತ್ತು. ಇದನ್ನು ಪ್ರಶ್ನಿಸಿ, ಸಾಮಾನ್ಯ ವರ್ಗಕ್ಕೆ ಸೇರಿದ್ದ ಶ್ಯಾಮ್ ಕೃಷ್ಣ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠವು ಮೀಸಲು ವರ್ಗದ ಅಭ್ಯರ್ಥಿಯು ಯಾವುದೇ ರಿಯಾಯಿತಿಗಳನ್ನು (ವಯಸ್ಸು ಅಥವಾ ಶುಲ್ಕ ಸಡಿಲಿಕೆ) ಪಡೆಯದೆ ಸಾಮಾನ್ಯ ಪ್ರವರ್ಗದ ಅಭ್ಯರ್ಥಿಗಳಿಗಿಂತ ಹೆಚ್ಚಿನ ಸಾಧನೆ ಮಾಡಿದರೆ, ಅವರನ್ನು ಸಾಮಾನ್ಯ ವರ್ಗದ ಅಭ್ಯರ್ಥಿ ಎಂದೇ ಪರಿಗಣಿಸಬೇಕು ಎಂದು ಹೇಳಿದೆ.
‘ಮೀಸಲಾತಿ ರಹಿತ’ ಪ್ರವರ್ಗವು ಸಾಮಾನ್ಯ ಅಭ್ಯರ್ಥಿಗಳಿಗೆ ಇರುವ ‘ಕೋಟಾ’ ಅಲ್ಲ. ಬದಲಾಗಿ, ಅರ್ಹತೆಯ ಆಧಾರದ ಮೇಲೆ ಎಲ್ಲರಿಗೂ ಲಭ್ಯವಿರುವ ‘ಮುಕ್ತ’ ಪ್ರವರ್ಗ ಆಗಿದೆ ಎಂದು ತೀರ್ಪು ನೀಡಿದ ನ್ಯಾಯಮೂರ್ತಿ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
