23/04/2026

Law Guide Kannada

Online Guide

ವಿಪಕ್ಷದ ಅಭ್ಯರ್ಥಿ ಬಗ್ಗೆ ಟೀಕೆಗೆ ನಿವೃತ್ತ ನ್ಯಾಯಾಧೀಶರ ಆಕ್ಷೇಪ: ಅಮಿತ್ ಶಾ ಬೆಂಬಲಕ್ಕೆ ನಿಂತ 56 ಜಡ್ಜ್ಗಳು

ನವದೆಹಲಿ: ಜಗದೀಪ್ ಧನಕರ್ ಅವರ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಸೆಪ್ಟಂಬರ್ 9 ರಂದು ಚುನಾವಣೆ ನಡೆಯಲಿದ್ದು, ವಿರೋಧ ಪಕ್ಷದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಕಣಕ್ಕಿಳಿದಿದ್ದಾರೆ. ಈ ಮಧ್ಯೆ ಬಿ. ಸುದರ್ಶನ್ ರೆಡ್ಡಿ ಅವರು ‘ನಕ್ಸಲಿಸಂ ಅನ್ನು ಬೆಂಬಲಿಸಲು ಸುಪ್ರೀಂ ಕೋರ್ಟ್ ಅನ್ನು ಬಳಸಿಕೊಂಡಿದ್ದರು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ 18 ನಿವೃತ್ತ ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸಿದ್ದು ಇದು ಸುಪ್ರೀಂ ಕೋರ್ಟ್ಗೆ ಮಾಡಿದ ಅವಮಾನ ಎಂದು ಕರೆದಿದ್ದರು.

ಅಲ್ಲದೆ ಸುದರ್ಶನ್ ರೆಡ್ಡಿ ವಿರುದ್ಧ ನೀಡಿದ ಅಮಿತ್ ಶಾ ಅವರ ಹೇಳಿಕೆ ದುರದೃಷ್ಟಕರ ಮತ್ತು ಪೂರ್ವಗ್ರಹ ಪೀಡಿತ ಎಂದು ಟೀಕಿಸಿದ್ದರು. ಆದರೆ ಇದಕ್ಕೆ ವಿರುದ್ಧವಾಗಿ ಇದೀಗ 56 ನಿವೃತ್ತ ನ್ಯಾಯಮೂರ್ತಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಸೆಪ್ಟೆಂಬರ್ 9ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ವಿರುದ್ಧ ಇಂಡಿಯ ಬ್ಲಾಕ್ನ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಸ್ಪರ್ಧಿಸಲಿದ್ದಾರೆ.

ಅಮಿತ್ ಶಾ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ 18 ನಿವೃತ್ತ ನ್ಯಾಯಮೂರ್ತಿಗಳ ನಡೆಗೆ ಆಕ್ಷೇಫ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ನ ಇಬ್ಬರು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಪಿ. ಸದಾಶಿವಂ ಮತ್ತು ರಂಜನ್ ಗೊಗೊಯ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ, ದೆಹಲಿ, ಬಾಂಬೆ, ಕೇರಳ ಹೈಕೋರ್ಟ್ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಮುಂತಾದ 50 ನ್ಯಾಯಮೂರ್ತಿಗಳು ಈ ಹಿಂದಿನ 18 ನ್ಯಾಯಮೂರ್ತಿಗಳ ಹೇಳಿಕೆಗಳು ನ್ಯಾಯಾಂಗ ಸ್ವಾತಂತ್ರ್ಯದ ಭಾಷೆಯ ಅಡಿಯಲ್ಲಿ ರಾಜಕೀಯ ಪಕ್ಷಪಾತವನ್ನು ಮರೆಮಾಚುವ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ.

ರಾಜಕೀಯ ಅಭ್ಯರ್ಥಿಯ ಟೀಕೆಯಿಂದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವುದಿಲ್ಲ

ಅಮಿತ್ ಶಾ ಆರೋಪ ವಿರೋಧ ಮಾಡಿದ್ದ ಆ 18 ನ್ಯಾಯಮೂರ್ತಿಗಳ ತಂಡದ ಹೇಳಿಕೆಯನ್ನು ಟೀಕಿಸಿರುವ 56 ನಿವೃತ್ತ ನ್ಯಾಯಮೂರ್ತಿಗಳು, “ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲಿರುವ ಸುದರ್ಶನ್ ರೆಡ್ಡಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರೂ ಅವರು ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದಾರೆ. ಹೀಗಿದ್ದಾಗ ಅವರು ಬೇರೆ ಸ್ಪರ್ಧಿಗಳಂತೆ ರಾಜಕೀಯ ದಾಳಿಗಳನ್ನು, ಬೇರೆಯವರ ಟೀಕೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ತಮ್ಮ ಉಮೇದುವಾರಿಕೆಯನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಇದರಲ್ಲಿ ನ್ಯಾಯಾಂಗವನ್ನು ಎಳೆದುತರುವುದು ಸರಿಯಲ್ಲ. ರಾಜಕೀಯ ಅಭ್ಯರ್ಥಿಯ ಟೀಕೆಯಿಂದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವುದಿಲ್ಲ” ಎಂದು 50ಕ್ಕೂ ಹೆಚ್ಚು ನ್ಯಾಯಮೂರ್ತಿಗಳು ತಮ್ಮ ಪತ್ರದಲ್ಲಿ ಅಭಿಪ್ರಾಯ ತಿಳಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.