23/04/2026

Law Guide Kannada

Online Guide

ಮಸೂದೆಗಳನ್ನ ತಡೆಹಿಡಿಯುವ ರಾಜ್ಯಪಾಲರ ಅಧಿಕಾರದ ಮರುಪರಿಶೀಲನೆ ನ್ಯಾಯಾಂಗ ವ್ಯಾಪ್ತಿಗೆ ಬರುವುದಿಲ್ಲ – ಹಿರಿಯ ವಕೀಲ ಹರೀಶ್ ಸಾಳ್ವೆ

ನವದೆಹಲಿ: ವಿಧಾನಸಭೆಗಳಲ್ಲಿ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ಸಂಬಂಧಿಸಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗೆ ನ್ಯಾಯಾಲಯ ಗಡುವು ನಿಗದಿ ಮಾಡಬಹುದೇ ಎಂಬ ಬಗ್ಗೆ ರಾಷ್ಟ್ರಪತಿ ಸಲಹೆ ಕೇಳಿರುವ ಕುರಿತು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ವೇಳೆ ವಾದ ಮಂಡಿಸಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, ಮಸೂದೆಗಳನ್ನ ತಡೆಹಿಡಿಯುವ ರಾಜ್ಯಪಾಲರ ಅಧಿಕಾರವನ್ನು ಮರುಪರಿಶೀಲನೆಗೆ ಒಳಪಡಿಸಿವುದು ನ್ಯಾಯಾಂಗ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಭಿಪ್ರಾಯಿಸಿದ್ದಾರೆ.

ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ, ವಿಕ್ರಮನಾಥ್, ಪಿ.ಎಸ್.ನರಸಿಂಹ ಮತ್ತು ಎ.ಎಸ್.ಚಂದೂರ್ಕರ್ ಅವರು ಇದ್ದ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ ಮಹಾರಾಷ್ಟ್ರ ಸರ್ಕಾರ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, ವಿದಾನಸಭೆಯಲ್ಲಿ ಅಂಗೀಕಾರಗೊಂಡಿರುವ ಯಾವುದೇ ಮಸೂದೆಯನ್ನು ರಾಜ್ಯಪಾಲರು ತಡೆ ಹಿಡಿಯಬಹುದು. ಮಸೂದೆಗಳನ್ನು ತಡೆಹಿಡಿಯುವ ರಾಜ್ಯಪಾಲರಿಗೆ ಇರುವ ಅಧಿಕಾರವನ್ನು ಮರುಪರಿಶೀಲನೆಗೆ ಒಳಪಡಿಸುವುದು ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೇ, ನ್ಯಾಯಾಲಯವು ಯಾವುದೇ ಒಂದು ಶಾಸನಕ್ಕೆ ಅಂಕಿತ ಹಾಕುವಂತಿಲ್ಲ ಎಂದು ಪ್ರತಿಪಾದಿಸಿದರು.

‘ಮಸೂದೆಯೊಂದನ್ನು ತಡೆಹಿಡಿಯಲು ರಾಜ್ಯಪಾಲರಿಗೆ ಅಧಿಕಾರ ಇದೆ ಎಂಬುದನ್ನು ಒಪ್ಪಿಕೊಂಡ ಮೇಲೆ, ಸಾಂವಿಧಾನಿಕ ಹುದ್ದೆಯಲ್ಲಿರುವ ಅವರು ಹಣಕಾಸು ಮಸೂದೆಯನ್ನು ಕೂಡ ತಡೆಹಿಡಿಯಬಹುದಲ್ಲವೇ’ ಎಂಬ ಪ್ರಶ್ನೆ ಮುಂದಿಟ್ಟ ಪೀಠಕ್ಕೆ, ಸಾಳ್ವೆ ಈ ಉತ್ತರ ನೀಡಿದರು.

ಉತ್ತರ ಪ್ರದೇಶ ಹಾಗೂ ಒಡಿಶಾ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ವಾದ ಮಂಡಿಸಿದ್ದು, ತಮಗಿರುವ ಅಧಿಕಾರಗಳನ್ನು ಚಲಾಯಿಸುವ ಮತ್ತು ಕರ್ತವ್ಯಗಳನ್ನು ನಿಭಾಯಿಸುವ ಕುರಿತು ರಾಜ್ಯಪಾಲರು ಹಾಗೂ ರಾಷ್ಟ್ರಪತಿ ಯಾವುದೇ ನ್ಯಾಯಾಲಯಕ್ಕೆ ಉತ್ತರ ನೀಡಬೇಕಿಲ್ಲ. ಇದನ್ನು ಸಂವಿಧಾನದ 361ನೇ ವಿಧಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದರು.

ರಾಷ್ಟ್ರಪತಿ ಮತ್ತು ರಾಜ್ಯಪಾಲರು ತಮ್ಮ ಕಾರ್ಯನಿರ್ವಹಣೆಗೆ ಸಂಬಂಧಿಸಿ ಸಂಪೂರ್ಣ ಸ್ವಾಯತ್ತತೆ ಹೊಂದಿದ್ದಾರೆ. ಯಾವುದೇ ಮಸೂದೆಗೆ ಅಂಕಿತ ಹಾಕುವುದಕ್ಕೆ ಸಂಬಂಧಿಸಿ ಅವರು ತಮ್ಮ ಸಂಪೂರ್ಣ ವಿವೇಚನಾ ಅಧಿಕಾರ ಚಲಾಯಿಸುವ ಅಧಿಕಾರ ಹೊಂದಿದ್ದಾರೆ

ವಿದಾನಸಭೆಗಳಲ್ಲಿ ಅಂಗೀಕಾರಗೊಂಡ ಮಸೂದೆಗಳಿಗೆ ಅಂಕಿತ ಹಾಕುವುದಕ್ಕಾಗಿ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗೆ ನ್ಯಾಯಾಲಯಗಳು ಕಾಲಮಿತಿ ವಿಧಿಸುವಂತಿಲ್ಲ ಎಂಬುದು ಗೋವಾರ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿ ವಾದ

ಇನ್ನು ವಾದ ಮಂಡಿಸಿದ ಛತ್ತೀಸಗಡ ಸರ್ಕಾರ ಪರ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ಶಾಸನ ರಚನೆಗೆ ಸಂಬಂಧಿಸಿದ ಸಾಂವಿಧಾನಿಕ ಪ್ರಕ್ರಿಯೆಯಂತೆ ಮಸೂದೆಗೆ ರಾಜ್ಯಪಾಲರ ಅಂಕಿತ ಅಗತ್ಯ. ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕಿದ್ದಾರೆ ಎಂಬುದಾಗಿ ಪರಿಭಾವಿಸುವುದಕ್ಕೆ ಅವಕಾಶ ಇಲ್ಲ’ಪರಿಭಾವಿತ ಅಂಕಿತ’ ಎಂಬ ಪರಿಕಲ್ಪನೆ ಸಂವಿಧಾನದಲ್ಲಿ ಇಲ್ಲ. ಹಾಗಾಗಿ ವಿಧಾನಸಭೆಗಳಲ್ಲಿ ಅಂಗೀಕಾರಗೊಂಡಿರುವ ಮಸೂದೆಗಳಿಗೆ ‘ಪರಿಭಾವಿತ ಅಂಕಿತ’ ನೀಡುವ ಅಧಿಕಾರ ನ್ಯಾಯಾಲಯಗಳಿಗೆ ಇಲ್ಲ ಎಂದರು.

ಈ ವಿಚಾರ ಕುರಿತು ಏಪ್ರಿಲ್ 8ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದಲ್ಲಿ ಸಂವಿಧಾನದ 200ನೇ ವಿಧಿಯಲ್ಲಿ ಉಲ್ಲೇಖವಿರದ ಅಂಶವನ್ನು ಸೇರಿಸಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.