ಸರ್ಕಾರಿ ನೌಕರರೇ ಗಮನಿಸಿ: ಇನ್ಮುಂದೆ ಪ್ರಮೋಷನ್ ಪಡೆಯಬೇಕಿದ್ರೆ ತರಬೇತಿ ಕಡ್ಡಾಯ..!
ಬೆಂಗಳೂರು: ಕರ್ನಾಟಕ ಸರ್ಕಾರವು ನೌಕರರ ಆಡಳಿತಾತ್ಮಕ ಕೌಶಲ್ಯಗಳನ್ನು ಸುಧಾರಿಸಲು ಮತ್ತು ಬಡ್ತಿಗಳನ್ನು ಪಡೆಯಲು ಹೊಸ ನಿಯಮಗಳನ್ನು ರೂಪಿಸಿದ್ದು ಸರ್ಕಾರಿ ನೌಕರರು ಇನ್ಮುಂದೆ ಪ್ರಮೋಷನ್ ಪಡೆಯಬೇಕಾದರೆ ತರಬೇತಿ ಕಡ್ಡಾಯವಾಗಿದೆ.
ರಾಜ್ಯ ಸರ್ಕಾರದ ಗ್ರೂಪ್ ಎ, ಬಿ ಮತ್ತು ಸಿ ವೃಂದ ನೌಕರರ ಪದನ್ನೋತಿಗೆ ತರಬೇತಿ ಕಡ್ಡಾಯಗೊಳಿಸುವ ನಿಯಮಾವಳಿಗಳ ಕರಡು ಪ್ರಕಟಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈ ಕುರಿತು ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ.
ಇನ್ನು ಮುಂದೆ, ಎಲ್ಲಾ ಸರ್ಕಾರಿ ನೌಕರರು ಪ್ರತಿ ವರ್ಷ ಆನ್ ಲೈನ್ ತರಬೇತಿ ಕೋರ್ಸ್ಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಇದರ ಜೊತೆಗೆ, ಬಡ್ತಿ ಪಡೆಯುವ ಒಂದು ವರ್ಷದ ಮೊದಲು 15 ದಿನಗಳ ಆಫ್ ಲೈನ್ ತರಬೇತಿಯನ್ನು ಸಹ ಕಡ್ಡಾಯಗೊಳಿಸಲಾಗಿದೆ.
ಈ ಅಧಿಸೂಚನೆ ಬಗ್ಗೆ ರಾಜ್ಯ ಸರ್ಕಾರಿ ನೌಕರರು ತಮ್ಮ ಆಕ್ಷೇಪಣೆ ಯಾ ಸಲಹೆ ಹಾಗೂ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ. ಸಲಹೆ-ಸೂಚನೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನೌಕರರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.
ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ನಿಯಮಗಳು, 2025 ಪ್ರಕಾರ ಗ್ರೂಪ್ ಎ, ಬಿ ಮತ್ತು ಸಿ ವೃಂದದ ನೌಕರರ ಬಡ್ತಿಯ ಹಿಂದಿನ ವರ್ಷದಲ್ಲಿ ಕನಿಷ್ಠ 10 ದಿನಗಳ ಖುದ್ದು ತರಬೇತಿ ಕಡ್ಡಾಯವಾಗಿದೆ.ಗ್ರೂಪ್ ಸಿಯಲ್ಲಿ ಬರುವ ಚಾಲಕರು ಹಾಗೂ ಗ್ರೂಪ್ ಡಿ ನೌಕರರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಆನ್ಲೈನ್ ಕಲಿಕಾ ವೇದಿಕೆಯನ್ನು ಪ್ರತಿ ವರ್ಷ ಕನಿಷ್ಠ ಸಂಖ್ಯೆಯ ಅಂಕಗಳನ್ನು ಗಳಿಸಬೇಕು.
ಆಫ್ ಲೈನ್ ತರಬೇತಿಗೆ ಅರ್ಜಿ ಸಲ್ಲಿಸಿದ್ದರೆ ಅವರನ್ನು ಅವರ ವೃಂದ ಜೇಷ್ಠತೆ ಕ್ರಮದಲ್ಲಿ ತರಬೇತಿಗೆ ಕಳುಹಿಸಬೇಕೆಂದು ಆಯಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಈ ಕಡ್ಡಾಯ ತರಬೇತಿ ನಿಯಮಗಳನ್ನು ಟಿಎಂ ವಿಜಯ್ ಭಾಸ್ಕರ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಜಾರಿಗೊಳಿಸಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
