IPS ಅಧಿಕಾರಿ ಅಲೋಕ್ ಕುಮಾರ್ ವಿರುದ್ದ ಇಲಾಖೆ ತನಿಖೆ ರದ್ದು ಆದೇಶಕ್ಕೆ ತಡೆಗೆ ಹೈಕೋರ್ಟ್ ನಕಾರ
ಬೆಂಗಳೂರು: 2019ರಲ್ಲಿ ಟೆಲಿಫೋನ್ ಕದ್ದಾಲಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧ ಇಲಾಖಾವಾರು ತನಿಖೆ ರದ್ದುಗೊಳಿಸಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ(ಸಿಎಟಿ) ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಐಪಿಎಸ್ ಅಲೋಕ್ ಕುಮಾರ್ ವಿರುದ್ಧ 2019ರಲ್ಲಿ ಟೆಲಿಫೋನ್ ಕದ್ದಾಲಿಕೆ ನಡೆಸಿದ ಆರೋಪ ಕೇಳಿ ಬಂದಿತ್ತು. ಈ ಆರೋಪ ಕುರಿತು ತನಿಖೆ ನಡೆಸಿದ್ದ ಸಿಬಿಐ, ಅಲೋಕ್ ಕುಮಾರ್ ವಿರುದ್ಧ ಬಿ ರಿಪೋರ್ಟ್ ಸಲ್ಲಿಸಿತ್ತು. ಜೊತೆಗೆ ಹೆಚ್ಚುವರಿ ಅಂತಿಮ ವರದಿ ಪಟ್ಟಿ ಸಲ್ಲಿಸಿದ್ದು ಇಲಾಖೆಯಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿತ್ತು. ಈ ವರದಿ ಅನ್ವಯ ರಾಜ್ಯ ಸರ್ಕಾರ ಇಲಾಖಾವಾರು ತನಿಖೆಗೆ ಆದೇಶಿಸಿ ಅರ್ಜಿದಾರರಿಗೆ ಸಿಗಬೇಕಾದ ಬಡ್ತಿ ಸೇರಿದಂತೆ ಇತರೆ ಸೌಲಭ್ಯಗಳಿಗೆ ತಡೆ ನೀಡಿತ್ತು.
ಇದನ್ನು ಪ್ರಶ್ನಿಸಿ ಕೆಎಟಿ ಮೊರೆ ಹೋಗಿದ್ದ ಅರ್ಜಿದಾರ ಆಲೋಕ್ ಕುಮಾರ್ ಅವರು ತಮ್ಮ ವಿರುದ್ದ ಇಲಾಖಾವಾರು ತನಿಖೆ ಕೈಗೊಳ್ಳುವಂತೆ ಸಿಬಿಐ ಸಲ್ಲಿಸಿರುವ ವರದಿ ಮತ್ತು ತಮ್ಮ ವಿರುದ್ಧದ ಇಲಾಖಾವಾರು ತನಿಖೆಗೆ ಆದೇಶಿಸಿರುವ ಸರ್ಕಾರದ ಕ್ರಮ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ ಕೆ ಶ್ರೀವಾಸ್ತವ ಮತ್ತು ಸಂತೋಷ್ ಮೆಹ್ರಾ ಅವರ ಪೀಠವು ವಿಭಿನ್ನ ತೀರ್ಪು ನೀಡಿತ್ತು. ಬಳಿಕ ಪ್ರಕರಣವನ್ನು ಮೂರನೇ ನ್ಯಾಯಾಧೀಶರಿಗೆ ವರ್ಗಾವಣೆ ಮಾಡಲಾಗಿತ್ತು. ಸಿಎಟಿಯ ಅಧ್ಯಕ್ಷರಾದ ನ್ಯಾಯಮೂರ್ತಿ ರಂಜಿತ್ ವಸಂತರಾವ್ ಮೊರೆ ಅವರ ಪೀಠವು ಇಲಾಖಾವಾರು ತನಿಖೆ ಆದೇಶ ರದ್ದುಗೊಳಿಸಿತ್ತು. ಅಲ್ಲದೆ, ಅರ್ಜಿದಾರ ಅಲೋಕ್ ಕುಮಾರ್ಗೆ ಗೆ ಸಲ್ಲಬೇಕಾದ ಎಲ್ಲ ರೀತಿಯ ಸವಲತ್ತುಗಳನ್ನು ಲಭ್ಯವಾಗುವಂತೆ ಮಾಡಬೇಕು ಎಂದು ಆದೇಶಿಸಿತ್ತು.
ಸಿಎಟಿ ಆದೇಶ ಪ್ರಶ್ನಿಸಿ ಸರ್ಕಾರ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್ ಪ್ರಸಾದ್ ಮತ್ತು ಟಿ ಎಂ ನದಾಫ್ ಅವರ ವಿಭಾಗೀಯ ಪೀಠವು, ಸಿಎಟಿ ಆದೇಶಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿಕೆ ಮಾಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
