ಋತುಚಕ್ರ ರಜೆ ಆದೇಶಕ್ಕೆ ತಡೆ ನೀಡಲು ನಕಾರ: ವಿಸ್ತ್ರತ ವಿಚಾರಣೆ ಬಳಿಕ ಆದೇಶ ಎಂದ ಹೈಕೋರ್ಟ್
ಬೆಂಗಳೂರು: ರಾಜ್ಯದಲ್ಲಿ ಕಾಯಂ, ಗುತ್ತಿಗೆ ಮತ್ತು ಹೊರಗುತ್ತಿಗೆ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ ಒಂದು ವೇತನಸಹಿತ ಋತುಚಕ್ರ ರಜೆ ನೀಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಕಾರ್ಮಿಕ ಇಲಾಖೆ ನ.20ರಂದು ಹೊರಡಿಸಿರುವ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್ಗಳ ಸಂಘ ಮತ್ತು ಅವಿರತ ಎಎಫ್ ಎಲ್ ಕನೆಕ್ಟಿವಿಟಿ ಸಿಸ್ಟಮ್ಸ್ ಲಿ.ನ ಆಡಳಿತ ಮಂಡಳಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಇದು ಸಾರ್ವಜನಿಕವಾಗಿ ಮಹತ್ವ ಹೊಂದಿರುವ ವಿಷಯವಾಗಿದ್ದು, ಅಧಿಸೂಚನೆ ವಿರುದ್ಧದ ಅರ್ಜಿಗಳನ್ನು ವಿಸ್ತ್ರತವಾಗಿ ಆಲಿಸಬೇಕಾಗಿದೆ. ಆದ್ದರಿಂದ ಸದ್ಯಕ್ಕೆ ಈ ಸಂಬಂಧ ಯಾವುದೇ ಆದೇಶಗಳನ್ನು ಹೊರಡಿಸುವುದಿಲ್ಲ ಎಂದು ಹೇಳಿ ಅಧಿಸೂಚನೆಗೆ ತಡೆ ನೀಡಲು ನಿರಾಕರಿಸಿತು.
ಈ ವೇಳೇ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು. ನಾವು ಸರ್ಕಾರದ ಅಧಿಕಾರವನ್ನು ಪ್ರಶ್ನಿಸುತ್ತಿಲ್ಲ. ಆದರೆ, ಯಾವುದೇ ಶಾಸನದ ಬಲವಿಲ್ಲದೆ ಕಾರ್ಯಕಾರಿ ಆದೇಶ ಹೊರಡಿಸಿರುವುದು ಸರಿಯಲ್ಲ. ನ್ಯಾಯಾಲಯ ವಿಚಾರಣೆಗೆ ದಿನ ನಿಗದಿ ಮಾಡಿದರೆ ನಮ್ಮ ವಾದಗಳನ್ನು ವಿವರವಾಗಿ ಸಲ್ಲಿಸುತ್ತೇವೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇನ್ನು ಸರ್ಕಾರದ ಪರ ವಾದಿಸಿದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳು ಸರ್ಕಾರಕ್ಕೆ ಅವಕಾಶ ಈ ಅವಕಾಶ ಕಲ್ಪಿಸಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ಕೂಡ ಮುಟ್ಟಿನ ರಜೆ ಕುರಿತು ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅಧಿಸೂಚನೆಯು ದೇಶದಲ್ಲೇ ಒಂದು ಪ್ರಗತಿಪರ ಕ್ರಮವಾಗಿದೆ. ಈ ಬಗ್ಗೆ ಕಾನೂನು ಆಯೋಗ ಪರಿಶೀಲನೆ ನಡೆಸಿ ವರದಿ ನೀಡಿದೆ. ರಜೆ ನೀಡುವ ಬಗ್ಗೆ 72 ಆಕ್ಷೇಪಣೆಗಳು ಬಂದಿದ್ದು, ಅವೆಲ್ಲವನ್ನು ಆಲಿಸಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.
ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠವು, ಸರ್ಕಾರ ವಿವರವಾದ ಆಕ್ಷೇಪಣೆಗಳನ್ನು ಸಲ್ಲಿಸಿದೆ. ಅದಕ್ಕೆ ಅರ್ಜಿದಾರರು ಪ್ರತಿವಾದಗಳನ್ನು ಸಲ್ಲಿಸಲಿ. ಅಂತಿಮ ನಿರ್ಧಾರಕ್ಕೂ ಮೊದಲು ಉಭಯ ಪಕ್ಷಗಳ ವಾದ ಆಲಿಸಲಾಗುವುದು. ಇದೊಂದು ಮಹತ್ವದ ವಿಷಯವಾಗಿರುವುದರಿಂದ ಚಳಿಗಾಲದ ರಜೆಯ ನಂತರ ವಿಸ್ತ್ರತವಾಗಿ ವಿಚಾರಣೆ ನಡೆಸಲಾಗುವುದು ಎಂದು ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿಕೆ ಮಾಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
