23/04/2026

Law Guide Kannada

Online Guide

ಶೀಘ್ರ ನ್ಯಾಯ ಕೊಡುವಲ್ಲಿ ನ್ಯಾಯಾಂಗ ವ್ಯವಸ್ಥೆಯ ಅವಿಭಾಜ್ಯ ಅಂಗ ‘ನ್ಯಾಯಾಂಗ ನೌಕರರ’ ಪಾತ್ರ ದೊಡ್ಡದು-ನ್ಯಾ. ತ್ಯಾಗರಾಜ ಎನ್ ಇನವಳ್ಳಿ

ಮಂಗಳೂರು: ಜನರಿಗೆ ಶೀಘ್ರ ನ್ಯಾಯವನ್ನು ದೊರಕಿಸಿ ಕೊಡುವಲ್ಲಿ ನ್ಯಾಯಾಂಗ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ನ್ಯಾಯಾಂಗ ನೌಕರರ ಪಾತ್ರ ದೊಡ್ಡದು ಎಂದು ನ್ಯಾಯಮೂರ್ತಿ ತ್ಯಾಗರಾಜ ಎನ್ ಇನವಳ್ಳಿ ಅಭಿಮತ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿ 1997 ರಲ್ಲಿ ರಾಜ್ಯ ನ್ಯಾಯಾಂಗ ಸೇವೆಗೆ ಸೇರಿ ಬೆಳಗಾವಿಯಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಪದೋನ್ನತಿ ಹೊಂದಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ತ್ಯಾಗರಾಜ ಎನ್ ಇನವಳ್ಳಿ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಂಗ ನೌಕರರ ಪರವಾಗಿ ಗೌರವಿಸಲಾಯಿತು.

ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ನ್ಯಾಯಮೂರ್ತಿ ತ್ಯಾಗರಾಜ ಎನ್ ಇನವಳ್ಳಿ, ತಾವು ಮಂಗಳೂರಿನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ ದಿನಗಳನ್ನು ಸ್ಮರಿಸಿದರು. ಆ ಅವಧಿಯಲ್ಲಿ ಮಂಗಳೂರಿನ ನ್ಯಾಯಾಂಗ ನೌಕರರು ಶಿಸ್ತು, ನಿಯಮಗಳ ಆಳವಾದ ಗ್ರಹಿಕೆ, ವಿನಯಶೀಲ ವರ್ತನೆಯಿಂದ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದರು. ಈ ಪರಂಪರೆಯನ್ನು ಹಾಲಿ ನೌಕರರು ಮುಂದುವರಿಸಬೇಕು ಎಂದು ಕಿವಿಮಾತು ಹೇಳಿದರು.

ಆ ಅವಧಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬಹುತೇಕ ನೌಕರರು ನಿವೃತ್ತರಾಗಿದ್ದು ಕೆಲವರು ಸೇವೆಯಲ್ಲಿದ್ದಾರೆ. ಅಂಥವರ ಪೈಕಿ ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ಶಿರಸ್ತೇದಾರ್ ಶ್ರೀ ಪ್ರಕಾಶ್ ನಾಯಕ್, ಶ್ರೀ ರಾಜೇಶ್ ಎಂ. ಮುಂತಾದವರ ಸೇವೆಯನ್ನು ಗುರುತಿಸಿದರು. ನ್ಯಾಯಾಲಯದ ಆದೇಶಗಳನ್ನು ಪಾಲಿಸಿ, ಕಾರ್ಯಗತಗೊಳಿಸಿ ನ್ಯಾಯಕಾಂಕ್ಷಿಗಳಿಗೆ ಶೀಘ್ರ ನ್ಯಾಯ ದೊರಕಿಸಿ ಕೊಡುವಲ್ಲಿ ನ್ಯಾಯಾಂಗದ ಅವಿಭಾಜ್ಯ ಅಂಗವಾಗಿರುವ ನೌಕರರ ಪಾತ್ರ ಮಹತ್ವದ್ದು ಎಂದು ಬಣ್ಣಿಸಿದರು.

ಈ ವೇಳೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಂಗ ನೌಕರರ ಪತ್ತಿನ ಸಹಕಾರ ಸಂಘದ ವತಿಯಿಂದ ಮುದ್ರಿಸಲ್ಪಟ್ಟ 2026ನೇ ವರ್ಷದ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಲಾಯಿತು.

ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಜೇಶ್ ಎಂ ಅವರು ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್ ಹಾಗೂ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಹೆಚ್ ವಿ ರಾಘವೇಂದ್ರ, ದ.ಕ. ಜಿಲ್ಲಾ ನ್ಯಾಯಾಲಯದ ಪ್ರಭಾರ ಮುಖ್ಯ ಆಡಳಿತಾಧಿಕಾರಿ ಆಶಾ ಕೆ.ಪಿ. ಹಾಗೂ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.