06/03/2026

Law Guide Kannada

Online Guide

ಮಾಹಿತಿ ನೀಡದಿದ್ರೆ ಕೆಲಸದಿಂದಲೇ ಡಿಸ್ಮಿಸ್: ಸರ್ಕಾರಿ ಅಧಿಕಾರಿಗೆ ಹೈಕೋರ್ಟ್ ಖಡಕ್ ವಾರ್ನಿಂಗ್

ಬೆಂಗಳೂರು: ಸರಕಾರಿ ವಕೀಲರು ಕೋರಿದ ಮಾಹಿತಿ ನೀಡಲು ವಿಳಂಬ ಮಾಡಿದರೆ ಅಥವಾ ಮಾಹಿತಿ ನೀಡದಿದ್ದರೆ ಅಂತಹ ಸರಕಾರಿ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಿ ಸೇವೆಯಿಂದ ವಜಾಗೊಳಿಸಲು ಆದೇಶಿಸಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಖಡಕ್ ವಾರ್ನಿಂಗ್ ನೀಡಿದೆ.

ನಿವೃತ್ತ ಸರಕಾರಿ ಉದ್ಯೋಗಿಯಾಗಿರುವ ಚಿತ್ರದುರ್ಗದ ಹಿರಿಯ ನಾಗರಿಕ ವಿಶ್ವನಾಥನ್ ಎಂಬುವವರು ”ಸೇವಾವಧಿಯಲ್ಲಿ ಗಳಿಸಿದ್ದ ಹಣದಲ್ಲಿ ನಿರ್ಮಿಸಿರುವ ಮನೆ, ತಮ್ಮ ಮಗ ಮತ್ತು ಮಗಳ ಸ್ವಾಧೀನದಲ್ಲಿದೆ. ತಮ್ಮ ಸುಪರ್ದಿಗೆ ಒಪ್ಪಿಸಲು ಆದೇಶಿಸಬೇಕು ಎಂದು ಚಿತ್ರದುರ್ಗದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಉಪವಿಭಾಗಾಧಿಕಾರಿ ಮನೆ ಬಿಟ್ಟುಕೊಡಲು ವಿಶ್ವನಾಥ್ ಅವರ ಮಗಳು ಮತ್ತು ಮಗನಿಗೆ ನಿರ್ದೇಶಿಸಿ 2023ರ ಫೆ.22ರಂದು ಆದೇಶ ಹೊರಡಿಸಿದ್ದರು.

ಈ ಮಧ್ಯೆ ವಿಭಾಗಾಧಿಕಾರಿ ಆದೇಶ ಜಾರಿ ಕೋರಿ ಚಿತ್ರದುರ್ಗ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ಗೆ 2023ರ ಏಪ್ರಿಲ್ 5ರಂದು ಅರ್ಜಿದಾರ ವಿಶ್ವನಾಥನ್ ಅವರು ಮನವಿ ಸಲ್ಲಿಸಿದ್ದರು. ಅಷ್ಟಾದರೂ ಪ್ರಯೋಜನವಾಗದ್ದಕ್ಕೆ ಅರ್ಜಿದಾರ ವಿಶ್ವನಾಥನ್ ಹೈಕೋರ್ಟ್ನ ಮೆಟ್ಟಿಲೇರಿದ್ದರು.

ವಿಶ್ವನಾಥನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು, ಮಾಹಿತಿ ನೀಡದ ಸರ್ಕಾರಿ ಅಧಿಕಾರಿಗೆ ತರಾಟೆ ತೆಗೆದುಕೊಂಡಿತು.

ಹಲವು ಬಾರಿ ಕೋರಿದರೂ ಚಿತ್ರದುರ್ಗದ ತಹಸೀಲ್ದಾರ್ ಮಾಹಿತಿ ನೀಡುತ್ತಿಲ್ಲ ಎಂದು ಸರಕಾರಿ ವಕೀಲರು 2025ರ ಡಿ.8 ರಂದು ಹೈಕೋರ್ಟ್ ಗೆ ತಿಳಿಸಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್, ಚಿತ್ರದುರ್ಗದ ತಹಸೀಲ್ದಾರ್ ಗೆ 50 ಸಾವಿರ ರೂ. ದಂಡ ಸಹಿತ ವಾರೆಂಟ್ ಜಾರಿಗೊಳಿಸಿ ಡಿಸೆಂಬರ್ 16 ರಂದು ವಿಚಾರಣೆಗೆ ಖುದ್ದು ಹಾಜರಿಗೆ ನಿರ್ದೇಶಿಸಿತ್ತು. ಅದರಂತೆ ತಹಸೀಲ್ದಾರ್ ವಿಚಾರಣೆಗೆ ಹಾಜರಿದ್ದರು.

ಈ ವೇಳೆ ನ್ಯಾಯಮೂರ್ತಿಗಳು, ‘ಏನ್ರೀ ತಹಸೀಲ್ದಾರ್ ಏಕೆ ನೀವು ಸರಕಾರಿ ವಕೀಲರಿಗೆ ಮಾಹಿತಿ ನೀಡುತ್ತಿಲ್ಲ? ಎಂದು ಪ್ರಶ್ನಿಸಿದರು. ತಹಸೀಲ್ದಾರ್ ಉತ್ತರಿಸಿ, ”ಸ್ವಾಮಿ ಮಾಹಿತಿ ನೀಡಲಾಗಿದೆ” ಎಂದರು. ಇದಕ್ಕೆ ನ್ಯಾಯಮೂರ್ತಿಗಳು, ‘ಏಕೆ ಸುಳ್ಳು ಹೇಳುತ್ತಿರಿ? ಸರಕಾರಿ ವಕೀಲರು ಪದೇ ಪದೆ ತಿಳಿಸಿದ್ದರೂ ನೀವು ಮಾಹಿತಿ ನೀಡಿಲ್ಲ. ಅವರು ಯಾವಾಗ ಮಾಹಿತಿ ಕೇಳಿದರು? ನೀವು ಯಾವಾಗ ನೀಡಿದ್ದೀರಿ ಎಂಬ ಬಗ್ಗೆ ದಿನಾಂಕ, ಸಮಯ ಸಹಿತ ದಾಖಲೆ ಸಿಗುತ್ತವೆ. ಆ ಬಗ್ಗೆ ವಿಚಾರಣೆ ನಡೆಸಲು ಆದೇಶಿಸಬೇಕೇ? ವಿಚಾರಣೆಯಲ್ಲಿ ವಿಳಂಬವಾಗಿ ಮಾಹಿತಿ ನೀಡಿರುವುದು ದೃಢಪಟ್ಟರೆ, ನಿಮ್ಮನ್ನು ಸೇವೆಯಿಂದ ವಜಾಗೊಳಿಸಲು ಆದೇಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಆಗ ಸರಕಾರಿ ವಕೀಲರು, ಸದ್ಯ ಉಪ ವಿಭಾಗಾಧಿಕಾರಿಯ ಆದೇಶದಂತೆ ಕಳೆದ ಭಾನುವಾರ ಮನೆ ಅರ್ಜಿದಾರರ ಸ್ವಾಧೀನಾನುಭವಕ್ಕೆ ಒಪ್ಪಿಸಲಾಗಿದೆ, ಎಂದು ತಿಳಿಸಿ ಮೆಮೊ ಸಲ್ಲಿಸಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.