23/04/2026

Law Guide Kannada

Online Guide

ಅನೈತಿಕ ಸಂಬಂಧದಿಂದ ವಿವಾಹಿತ ಮಹಿಳೆಗೆ ಮುಗುವಾದ್ರೆ ತಂದೆ ಯಾರು? ಅಚ್ಚರಿಯ ತೀರ್ಪು ಪ್ರಕಟಿಸಿದ ಸುಪ್ರೀಂ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಅನೈತಿಕ ಸಂಬಂಧದಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಇಂತಹ ಪ್ರಕರಣಗಳಿಂದ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಮದುವೆಯಾದ ಬಳಿಕವೂ ಕೆಲ ಪುರುಷ ಮತ್ತು ಮಹಿಳೆಯರು ಅನೈತಿಕ ಸಂಬಂಧಕ್ಕೆ ದಾಸರಾಗಿ ಗಂಡ ಹೆಂಡತಿಯ ಪವಿತ್ರ ಸಂಬಂಧಕ್ಕೆ ಕೊಳ್ಳಿ ಇಟ್ಟುಕೊಳ್ಳುವ ಪ್ರಸಂಗಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ. ಇಂತಹ ಘಟನೆಗಳು ಮಕ್ಕಳ ಜೀವನ ಭವಿಷ್ಯದ ಮೇಲೆ ಅಗಾದ ಪರಿಣಾಮವನ್ನೂ ಉಂಟುಮಾಡುತ್ತವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕುತೂಹಲಕಾರಿ ತೀರ್ಪೊಂದನ್ನು ಪ್ರಕಟಿಸಿದೆ.

ಮದುವೆಯಾದ ಸಂದರ್ಭದಲ್ಲಿ ವಿವಾಹಿತೆ ಅನೈತಿಕ ಸಂಬಂಧದಿಂದ ಗರ್ಭಿಣಿಯಾದರೆ, ಆ ಮಗುವಿನ ಅಪ್ಪ ಯಾರು ಎನ್ನುವ ಬಗ್ಗೆ ಮಹತ್ವದ ತೀರ್ಪನ್ನು ಪ್ರಕಟಿಸಿರುವ ಸುಪ್ರೀಂಕೋರ್ಟ್, ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112 ರ ಅಡಿಯಲ್ಲಿ, ಮಾನ್ಯ ವಿವಾಹದ ಸಮಯದಲ್ಲಿ ಜನಿಸಿದ ಮಗುವನ್ನು ಪತಿಯ ಕಾನೂನುಬದ್ಧ ಮಗು ಎಂದೇ ಊಹಿಸಲಾಗುತ್ತದೆ ಎಂದು ಹೇಳಿದೆ.

ವಿವಾಹಿತೆಯ ಕಾನೂನುಬದ್ಧ ಗಂಡ ಆ ಮಗುವಿನ ಅಪ್ಪ ಎನ್ನಿಸಿಕೊಳ್ಳುತ್ತಾನೆ. ಮಗುವಿನ ಜೈವಿಕ ಪಿತೃತ್ವಕ್ಕಿಂತ ಘನತೆಗೆ ಆದ್ಯತೆ ನೀಡುವುದು ಮುಖ್ಯವಾಗಿರುವ ಕಾರಣದಿಂದ ಮಗು ಹೇಗೆ ಹುಟ್ಟಿದ್ದರೂ ಆಕೆಯ ಕಾನೂನುಬದ್ಧ ಪತಿಯೇ ಆ ಮಗುವಿನ ಅಪ್ಪ ಆಗುತ್ತಾನೆ ಎಂದು ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದೆ.

ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112 ಅನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್, ಆ ಮಗುವಿನ ನಿಜವಾದ ತಂದೆ ಯಾರೇ ಇದ್ದರೂ, ಮಹಿಳೆಯ ಕಾನೂನುಬದ್ಧ ಪತಿಯೇ ಮಗುವಿನ ಅಪ್ಪ ಎನ್ನಿಸಿಕೊಳ್ಳುತ್ತಾನೆ. ಯಾವುದೇ ತಪ್ಪು ಮಾಡದ ಮಗುವನ್ನು ಕಳಂಕದಿಂದ ರಕ್ಷಿಸುವುದು ಮುಖ್ಯವಾಗುತ್ತದೆ. ಆದ್ದರಿಂದ ಮದುವೆಯಾದ ಬಳಿಕ ದಂಪತಿ ನಡುವೆ ದೈಹಿಕ ಸಂಬಂಧ ಇದ್ದರೆ, ಆ ಮಗು ಬೇರೆವರಿಗೆ ಹುಟ್ಟಿದರೂ ಮಹಿಳೆ ಕಾನೂನುಬದ್ಧ ಗಂಡನೇ ಆ ಮಗುವಿನ ಅಪ್ಪ ಆಗುತ್ತಾನೆ ಎಂದು ನ್ಯಾಯಪೀಠವು ತಿಳಿಸಿದೆ.

ಒಂದು ವೇಳೆ, ವಿವಾಹದ ಬಳಿಕ ದಂಪತಿ ನಡುವೆ ಗರ್ಭ ಧರಿಸುವ ರೀತಿಯಲ್ಲಿ ದೈಹಿಕ ಸಂಪರ್ಕ ನಡೆಯದೇ ಹೋದರೆ ಆ ಸಮಯದಲ್ಲಿ ಕಾನೂನು ರೀತ್ಯಾ ವಿಚಾರಣೆ ನಡೆಸಲು ಪತಿಗೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಪತ್ನಿ ವ್ಯಭಿಚಾರಿಣಿ ಎಂದೇ ಅಥವಾ ಮಗುವಿನ ಡಿಎನ್ಎ ಪರೀಕ್ಷೆಯನ್ನು ನಡೆಸುವ ಮೂಲಕ ಇದು ಸಾಧ್ಯವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಪಿತೃತ್ವವನ್ನು ನಿರಾಕರಿಸಲು ನ್ಯಾಯಾಲಯಗಳು ಡಿಎನ್ಎ ಪರೀಕ್ಷೆಗೆ ಇಂಥ ಪ್ರಕರಣಗಳಲ್ಲಿ ಆದೇಶಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದ್ದು , ಮಗುವಿನ ಭಾವನಾತ್ಮಕ, ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಕಾಪಾಡುವುದು, ಕುಟುಂಬದ ಖಾಸಗಿ ವಿಷಯಗಳನ್ನು ಮಗುವಿಗೆ ಕಳಂಕ ತರಲು ಬಳಸುವುದನ್ನು ತಡೆಯುವುದು ಈ ನಿಯಮದ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.