ವಿಚಾರಣಾಧೀನ ವ್ಯಕ್ತಿಗೆ ದೀರ್ಘಕಾಲ ಜೈಲುವಾಸ ಒಪ್ಪಲಾಗದು: ಸುಪ್ರೀಂ ಕೋರ್ಟ್
ನವದೆಹಲಿ: ಇನ್ನೂ ವಿಚಾರಣೆ ಆರಂಭವಾಗದ ಅಥವಾ ವಿಚಾರಣೆಯಲ್ಲಿ ಸರಿಯಾದ ಪ್ರಗತಿಯಿಲ್ಲದ ಸಂದರ್ಭಗಳಲ್ಲಿ ವಿಚಾರಣಾಧೀನ ವ್ಯಕ್ತಿಯನ್ನು ದೀರ್ಘಕಾಲದವರೆಗೆ ಜೈಲಲ್ಲಿಡುವುದನ್ನು ಒಪ್ಪಲಾಗದು, ಇದು ಸಂವಿಧಾನದ 21ನೇ ವಿಧಿಯು ಪ್ರತಿಯೊಬ್ಬರಿಗೂ ನೀಡಿರುವ ತ್ವರಿತ ವಿಚಾರಣೆಯ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
27 ಸಾವಿರ ಕೋಟಿ ರೂ. ಮೊತ್ತದ ಬ್ಯಾಂಕ್ ವಂಚನೆಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಮೈಕ್ ಸಮೂಹದ ಮಾಜಿ ಅಧ್ಯಕ್ಷ ಅರವಿಂದ ಧಾಮ್ ಅವರಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಅಲೋಕ್ ಆರಾಧೆ ಅವರ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣ ಸಂಬಂಧ 2025ರ ಆಗಸ್ಟ್ 19ರಂದು ಧಾಮ್ ಅವರಿಗೆ ಜಾಮೀನು ನಿರಾಕರಿಸಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ನ್ಯಾಯಪೀಠವು ವಜಾಗೊಳಿಸಿತು. ಧಾಮ್ ಅವರನ್ನು 2024ರಲ್ಲಿ ಬಂಧಿಸಲಾಗಿತ್ತು ಎಂಬುದನ್ನು ಉಲ್ಲೇಖಿಸಿದ ಪೀಠ, ವಿಚಾರಣೆಪೂರ್ವ ಸುದೀರ್ಘ ಜೈಲುವಾಸವು ಶಿಕ್ಷೆಯ ಪರಿಣಾಮ ಉಂಟುಮಾಡುತ್ತದೆ. ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಸಾಕ್ಷ್ಯಗಳು ಈಗಾಗಲೇ ಪ್ರಾಸಿಕ್ಯೂಷನ್ ವಶದಲ್ಲಿವೆ. ಅಂತಹ ಸಂದರ್ಭದಲ್ಲಿ ಸುದೀರ್ಘ ಜೈಲುವಾಸವು ಸಂವಿಧಾನದ 21ನೇ ವಿಧಿಯು ಪ್ರತಿಯೊಬ್ಬರಿಗೂ ನೀಡಿರುವ ತ್ವರಿತ ವಿಚಾರಣೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿತು.
‘ಧಾಮ್ ಅವರು ಬಂಧನಕ್ಕೆ ಒಳಗಾಗುವ ಮುನ್ನವೇ ತನಿಖೆ ಎದುರಿಸಿ ತನಿಖಾಧಿಕಾರಿಗಳ ಜತೆ ಸಹಕರಿಸಿದ್ದಾರೆ. ಈ ಪ್ರಕರಣದಲ್ಲಿ 210 ಸಾಕ್ಷಿಗಳ ವಿಚಾರಣೆ ನಡೆಸಬೇಕಾಗಿದ್ದು ವಿಚಾರಣೆ ಸದ್ಯಕ್ಕಂತೂ ಪೂರ್ಣಗೊಳ್ಳುವ ಸಾಧ್ಯತೆಯಿಲ್ಲ. ಮೇಲ್ಮನವಿದಾರರು ಕಳೆದ 16 ತಿಂಗಳು 20 ದಿನಗಳಿಂದ ಜೈಲಿನಲ್ಲಿದ್ದಾರೆ. ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಗರಿಷ್ಠ ಏಳು ವರ್ಷ ಜೈಲು ವಿಧಿಸಬಹುದಾಗಿದೆ ಎಂದು ನ್ಯಾಯಪೀಠ ತಿಳಿಸಿತು
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
