06/03/2026

Law Guide Kannada

Online Guide

ಅಪ್ರಾಪ್ತ ವಯಸ್ಕರ ಮದುವೆ, ಕುಮ್ಮಕ್ಕು ಕೊಡುವ ಪೋಷಕರ ನಡೆ ಆತಂಕಕಾರಿ – ಹೈಕೋರ್ಟ್ ತೀವ್ರ ಕಳವಳ

ಬೆಂಗಳೂರು: ಅಪ್ರಾಪ್ತ ವಯಸ್ಕರನ್ನು ಮದುವೆ ಮಾಡಿದ ಪೋಷಕರ ನಡೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್ , ‘ಯಾರೇ ಆಗಲಿ ಕಾನೂನಿಗೆ ವಿರುದ್ಧವಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆ ಮಾಡಿಸುವ ಮತ್ತು ಅದಕ್ಕೆ ಕುಮ್ಮಕ್ಕು ಕೊಡುವ ಪೋಷಕರ ನಡೆ ಆತಂಕಕಾರಿ. ಇಂತಹ ಪೋಷಕರ ವಿರುದ್ದ ಕಠಿಣ ಕ್ರಮ ಅಗತ್ಯ ಎಂದು ಹೇಳಿದೆ.

ಈ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಪಶ್ಚಿಮ ಬಂಗಾಳದ ಶಾಶ್ವತ ವಿಳಾಸ ಹೊಂದಿರುವ ಆರೋಪಿ ಹಬೀರ್ಬ ಅಲಿಯಾಸ್ ಹಬೀಬ್ ಸಲ್ಲಿಸಿದ್ದ (28) ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಅಪ್ರಾಪ್ತ ಮಕ್ಕಳ ಮದುವೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ‘ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಈಗಾಗಲೇ ವಿವಾಹವಾಗಿದ್ದು, ಮದುವೆ ವೇಳೆ ಸಂತ್ರಸ್ತೆ ವಯಸ್ಸು 17 ವರ್ಷ 10 ತಿಂಗಳಾಗಿತ್ತು. ದೂರುದಾರಳೂ ಆದ ಪತ್ನಿ ಈಗ ಗರ್ಭಿಣಿ ಇದ್ದಾಳೆ. ಅಂತಿಮವಾಗಿ ಪರಸ್ಪರ ಒಪ್ಪಂದದ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲು ಆಕೆ ಇಚ್ಛಿಸಿದ್ದಾಳೆ. ಹೀಗಾಗಿ ಯುವಕನನ್ನು ಪೋಕ್ಸೊದಿಂದ ಮುಕ್ತಿಗೊಳಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಅರ್ಜಿದಾರರ ಪರ ವಕೀಲರ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಪ್ರಕರಣದಲ್ಲಿ ಸೆಟಲ್ಮೆಂಟ್ ಮಾಡಿಕೊಳ್ಳುತ್ತೇವೆ ಎಂಬ ಅರ್ಜಿದಾರರ ವಾದ ಒಪ್ಪತಕ್ಕದ್ದಲ್ಲ. ಈ ಪ್ರಕರಣದಲ್ಲಿ ಪೋಷಕರೇ ಮುಂದಾಗಿ ಮದುವೆ ಮಾಡಿಸಿದ್ದಾರೆ. ಅವರ ವಿರುದ್ದದ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಕಲಂ 9, 10 ಮತ್ತು 11 ರ ಅಡಿಯಲ್ಲಿ ಕಠಿಣ ಕ್ರಮಕ್ಕೆ ಆದೇಶಿಸಬೇಕು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಇಂತಹ ಪ್ರಕರಣಗಳಲ್ಲಿ ಸಲುಗೆ ತೋರುವುದು ತರವಲ್ಲ. ಈ ರೀತಿ ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆ ಮಾಡಿಸಿದರೆ ಅಸ್ತಿತ್ವದಲ್ಲಿರುವ ಬಾಲ್ಯ ವಿವಾಹ ನಿಷೇಧ ಕಾಯ್ದೆಗೆ ಬೆಲೆಯೇನು’ ಎಂದು ಪ್ರಶ್ನಿಸಿತು. ಅಲ್ಲದೆ ‘ಈ ಕುರಿತಂತೆ ವಿಶದವಾದ ತೀರ್ಪು ಪ್ರಕಟಿಸಲಾಗುವುದು’ ಎಂದು ಹೇಳಿತು.

ಸಂತ್ರಸ್ತೆಯೇ ಸೆಟಲ್ಮೆಂಟ್ ಮಾಡಿಕೊಳ್ಳುತ್ತೇವೆ ಎಂದು ಹೇಳುವುದು ಎಷ್ಟು ಸರಿ? ಈ ರೀತಿಯ ಪ್ರಕರಣಗಳಲ್ಲಿ ಪೋಷಕರನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ಆಡಳಿತಾಂಗ ಯಾವುದೇ ರಿಯಾಯತಿ ತೋರಬಾರದು ಎಂದು ನ್ಯಾ.ಎಂ.ನಾಗಪ್ರಸನ್ನ ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣೆ ಮುಂದೂಡಿಕೆ ಮಾಡಿದರು.

ಪ್ರಕರಣದ ಹಿನ್ನೆಲೆ
ಸಂತ್ರಸ್ತ ಬಾಲಕಿ ‘ಹೊಟ್ಟೆ ನೋವು’ ಎಂದು ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ವೈದ್ಯರು ಆಕೆ ಗರ್ಭಿಣಿ ಎಂಬುದನ್ನು ಬಹಿರಂಗಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಆರೋಪಿ ಯುವಕನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ-2023ರ ಕಲಂ 64, ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012) ಕಾಯ್ದೆಯ ಕಲಂ 5(ಜೆ) (ii) ಮತ್ತು 6 ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಗಳಿಗಾಗಿ ನಗರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು.

ಈ ಕುರಿತು ನಗರದ ಶೀಘ್ರ ವಿಲೇವಾರಿ ವಿಶೇಷ ನ್ಯಾಯಾಲಯದಲ್ಲಿನ ನ್ಯಾಯಿಕ ವಿಚಾರಣೆ ರದ್ದುಪಡಿಸಬೇಕು’ ಎಂದು ಕೋರಿ ಆರೋಪಿ ಈ ಅರ್ಜಿ ಸಲ್ಲಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.