23/04/2026

Law Guide Kannada

Online Guide

ತಲಾಖ್ ಮಾನ್ಯಗೊಳಿಸಲು, ಮುಸ್ಲಿಂ ವಿವಾಹ ರದ್ದುಗೊಳಿಸಲು ಸಿವಿಲ್ ನ್ಯಾಯಾಧೀಶರಿಗೆ ಅಧಿಕಾರವಿಲ್ಲ- ಹೈಕೋರ್ಟ್

ಗುವಾಹಟಿ: ಮುಸ್ಲಿಂ ವಿವಾಹ ರದ್ದುಗೊಳಿಸಲು ಅಥವಾ ತಲಾಕ್ ಮಾನ್ಯಗೊಳಿಸಲು ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರಿಗೆ ಯಾವುದೇ ಅಧಿಕಾರವಿಲ್ಲ ಎಂದು ಗುವಾಹಟಿ ಹೈಕೋರ್ಟ್ ತೀರ್ಪು ನೀಡಿದೆ.

ತಲಾಕ್ ದೃಢೀಕರಣ ಕೋರಿ ಸಲ್ಲಿಸಿದ ದಾವೆಯ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಸಿವಿಲ್ ನ್ಯಾಯಾಧೀಶರು (ಕಿರಿಯ ವಿಭಾಗ) ಮುಸ್ಲಿಂ ವಿವಾಹವನ್ನು ರದ್ದುಗೊಳಿಸಲು ಅಧಿಕಾರ ಹೊಂದಿಲ್ಲ. ವಿವಾಹ ವಿಚ್ಚೇದನ ಸೇರಿದಂತೆ ದಾಂಪತ್ಯ ವಿವಾದಗಳು ನಿರ್ದಿಷ್ಟ ನ್ಯಾಯಾಧಿಕಾರ ಹೊಂದಿರುವ ನ್ಯಾಯಾಲಯಗಳ ಮೂಲಕವೇ ತೀರ್ಮಾನಗೊಳ್ಳಬೇಕು. “ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರು ನೀಡಿದ ಡಿಕ್ರಿಯನ್ನು ನ್ಯಾಯಾಧಿಕಾರದ ಕೊರತೆಯಿಂದ ಶೂನ್ಯ ಎಂದು ಪರಿಗಣಿಸಬಹುದು ಎಂದು ಒತ್ತಿ ಹೇಳಿದೆ.

ಪ್ರಕರಣದ ಹಿನ್ನೆಲೆ
2024ರಲ್ಲಿ ಹೈಲಾಕಂಡಿಯಲ್ಲಿ ಒಬ್ಬ ಮುಸ್ಲಿಂ ಪತಿ ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರ ಮುಂದೆ ದಾವೆ ಹೂಡಿ, ತನ್ನ ಪತ್ನಿಗೆ ತಲಾಖ್ ಉಚ್ಚರಿಸಿದ ಪರಿಣಾಮವಾಗಿ ವಿವಾಹವು ರದ್ದಾಗಿದೆ ಎಂದು ಘೋಷಣೆ ನೀಡುವಂತೆ ಕೋರಿದ್ದರು. ಜೊತೆಗೆ, ಲಿಖಿತ ವಿಚ್ಛೇದನವನ್ನು ದೃಢೀಕರಿಸುವ ಡಿಕ್ರಿಯನ್ನು ನೀಡಬೇಕೆಂದು ಮನವಿ ಮಾಡಿದ್ದರು.

ಈ ಮಧ್ಯೆ 2025ರ ಮೇ ತಿಂಗಳಲ್ಲಿ ಕಿರಿಯ ಸಿವಿಲ್ ನ್ಯಾಯಾಲಯ ಪತಿಯ ಮನವಿಯನ್ನು ಅನುಮೋದಿಸಿದ್ದು, ಇದನ್ನು ಪ್ರಶ್ನಿಸಿ ಪತ್ನಿ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಕೆಳ ನ್ಯಾಯಾಲಯಕ್ಕೆ ವಿಚ್ಛೇದನ ನೀಡುವ ನ್ಯಾಯಾಧಿಕಾರವಿಲ್ಲ ಎಂದು ಹೇಳಿ, ಮೇಲ್ಮನವಿ ನ್ಯಾಯಾಲಯವು ಆ ಡಿಕ್ರಿಯನ್ನು ರದ್ದುಗೊಳಿಸಿತು.

ಈ ಮೇಲ್ಮನವಿ ಆದೇಶವನ್ನು ಪ್ರಶ್ನಿಸಿ, ಪತಿ ಗೌಹಾಟಿ ಹೈಕೋರ್ಟ್ ಮೆಟ್ಟಿಲೇರಿದ್ದರು, ತಾನು 1963ರ ಸ್ಪೆಸಿಫಿಕ್ ರಿಲೀಫ್ ಆಕ್ಟ್ನ ಸೆಕ್ಷನ್ 34 ಅಡಿಯಲ್ಲಿ ಕೇವಲ ಘೋಷಣಾತ್ಮಕ ಪರಿಹಾರವನ್ನು ಮಾತ್ರ ಬೇಡಿದ್ದೇನೆ. ವಿಚ್ಚೇದನ ಡಿಕ್ರಿಯನ್ನು ಬೇಡಿಲ್ಲ ಎಂದು ವಾದಿಸಿದರು.

ತನ್ನ ದಾವೆ ಕೇವಲ ಈಗಾಗಲೇ ಉಚ್ಚರಿಸಿದ ತಲಾಕ್ ಗೆ ಮಾನ್ಯತೆ ನೀಡುವ ಘೋಷಣಾತ್ಮಕ ಸ್ವಭಾವದ್ದೇ ಹೊರತು, ವಿಚ್ಛೇದನ ಡಿಕ್ಕಿಗಾಗಿ ಸಲ್ಲಿಸಿದ ಮನವಿ ಅಲ್ಲ ಎಂದು ವಾದಿಸಿದರು. ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರು ಸ್ಪೆಸಿಫಿಕ್ ರಿಲೀಫ್ ಆಕ್ಟ್ ಅಡಿಯಲ್ಲಿ ಇಂತಹ ಘೋಷಣೆ ನೀಡಲು ಅಧಿಕಾರ ಹೊಂದಿದ್ದಾರೆ ಎಂದು ಅವರ ವಕೀಲರು ವಾದಿಸಿ. ಕೆಳ ನ್ಯಾಯಾಲಯದ ನ್ಯಾಯಾಧಿಕಾರವನ್ನು ಪ್ರಶ್ನಿಸಿದ ಮೇಲ್ಮನವಿ ನ್ಯಾಯಾಲಯ ತಪ್ಪು ಮಾಡಿಕೊಂಡಿದೆ. ಘೋಷಣಾತ್ಮಕ ಪರಿಹಾರ ಮತ್ತು ದಾಂಪತ್ಯ ಸಂಬಂಧಿತ ಮೂಲಭೂತ ಪರಿಹಾರಗಳ ನಡುವಿನ ವ್ಯತ್ಯಾಸವನ್ನು ಉಲ್ಲೇಖಿಸಿ, ಪ್ರಾಥಮಿಕ ತೀರ್ಪನ್ನು ಉಳಿಸುವಂತೆ ಹೈಕೋರ್ಟ್ಗೆ ಪತಿ ಮನವಿ ಮಾಡಿದರು.

ಪತ್ನಿ ಪರ ವಾದ ಮಂಡಿಸಿದ ವಕೀಲರು, ಈ ದಾವೆ ವಾಸ್ತವವಾಗಿ ವಿಚ್ಚೇದನ ಡಿಕ್ರಿಯನ್ನೇ ಕೋರುತ್ತಿದ್ದು, ಅದು ಸಂಪೂರ್ಣವಾಗಿ ಕುಟುಂಬ ನ್ಯಾಯಾಲಯದ ಅಥವಾ ಕುಟುಂಬ ನ್ಯಾಯಾಲಯ ಇಲ್ಲದಿದ್ದಲ್ಲಿ ಮೂಲ ನ್ಯಾಯಾಧಿಕಾರ ಹೊಂದಿರುವ ಪ್ರಧಾನ ಸಿವಿಲ್ ನ್ಯಾಯಾಲಯವಾದ ಜಿಲ್ಲಾ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ ಎಂದು ವಾದಿಸಿದರು. 1984ರ ಫ್ಯಾಮಿಲಿ ಕೋರ್ಟ್ಸ್ ಆಕ್ಟ್ನ ಸೆಕ್ಷನ್ 7 ಮತ್ತು 8ರ ಪ್ರಕಾರ, ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರಿಗೆ ವಿಚ್ಛೇದನ ಅಥವಾ ತಲಾಕ್ ವಿಷಯಗಳನ್ನು ವಿಚಾರಣೆ ಮಾಡುವ ಯಾವುದೇ ಅಧಿಕಾರವಿಲ್ಲ ಎಂದು ಅವರು ಒತ್ತಿಹೇಳಿದರು.

ದಾವೆಯ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಕೋರ್ಟ್, ಪಿಟಿಷನರ್ ದಾವೆಯನ್ನು ಘೋಷಣಾತ್ಮಕ ಎಂದು ರೂಪಿಸಿದರೂ, ಬೇಡಿಕೆಯಾದ ಪರಿಹಾರವು ವಾಸ್ತವವಾಗಿ ವಿಚ್ಚೇದನ ಡಿಕ್ಕಿಗೆ ಸಮಾನವಾಗಿದೆ ಎಂದು ನಿರ್ಣಯಿಸಿತು. “ಕುಟುಂಬ ವಿವಾದಗಳು, ವಿವಾಹ ರದ್ದತಿ, ಹಿಂದೂ ವಿವಾಹ ಕಾಯ್ದೆ ಅಥವಾ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ವಿಚ್ಚೇದನ ಡಿಕ್ಕಿಗಳನ್ನು 1984ರ ಫ್ಯಾಮಿಲಿ ಕೋರ್ಟ್ಸ್ ಆಕ್ಟ್ನ ಸೆಕ್ಷನ್ 7 ಮತ್ತು 8ರ ಪ್ರಕಾರ ಕುಟುಂಬ ನ್ಯಾಯಾಲಯವೇ ವಿಚಾರಿಸಬೇಕು; ಕುಟುಂಬ ನ್ಯಾಯಾಲಯ ಇಲ್ಲದಿದ್ದಲ್ಲಿ ಜಿಲ್ಲಾ ನ್ಯಾಯಾಲಯ ಯಾ ಪ್ರಧಾನ ಸಿವಿಲ್ ನ್ಯಾಯಾಲಯ ಈ ವಿಷಯಗಳನ್ನು ಪರಿಶೀಲಿಸಬಹುದು ಎಂಬುದು ಸ್ಥಿರವಾದ ಕಾನೂನು” ಎಂದು ಕೋರ್ಟ್ ತಿಳಿಸಿದೆ.

ನ್ಯಾಯಾಧಿಕಾರದ ದೋಷವೇ ಡಿಕ್ರಿಯನ್ನು ಶೂನ್ಯಗೊಳಿಸಿರುವುದರಿಂದ, ಇತರ ವಿಷಯಗಳ ಮೌಲ್ಯಮಾಪನ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಕೋರ್ಟ್, ಮೇಲ್ಮನವಿ ನ್ಯಾಯಾಲಯದ ತೀರ್ಪನ್ನು ಸಮರ್ಥಿಸಿ, ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರಿಗೆ ವಿಚ್ಛೇದನ ನೀಡಲು ಅಥವಾ ತಲಾಕ್ ಮಾನ್ಯಗೊಳಿಸಲು ಯಾವುದೇ ಅಧಿಕಾರವಿಲ್ಲ ಎಂದು ದೃಢಪಡಿಸಿತು. ದಾಂಪತ್ಯ ವಿಚಾರಗಳನ್ನು ತೀರ್ಮಾನಿಸಲು ಸಕ್ಷಮ ನ್ಯಾಯಾಲಯವನ್ನು ಪಕ್ಷಗಳು ಸಂಪರ್ಕಿಸಬೇಕೆಂದು ಕೋರ್ಟ್ ಸೂಚನೆ ನೀಡಿತು

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.