23/04/2026

Law Guide Kannada

Online Guide

ನ್ಯಾಯಾಂಗ ಸೇವೆಗಳ ಪರೀಕ್ಷೆಗೆ 3 ವರ್ಷ ವಕೀಲಿಕೆ ಕಡ್ಡಾಯ: ಅಭಿಪ್ರಾಯ ತಿಳಿಸಿ  – ಸುಪ್ರೀಂ ಕೋರ್ಟ್

ನವದೆಹಲಿ: ನ್ಯಾಯಾಂಗ ಸೇವೆಗಳ ಪರೀಕ್ಷೆಗೆ ಪ್ರವೇಶ ಪಡೆಯಲು ಕನಿಷ್ಠ ಮೂರು ವರ್ಷಗಳ ಕಾನೂನು ಅಭ್ಯಾಸ (ವಕೀಲಿಕೆ) ಕಡ್ಡಾಯಗೊಳಿಸಿದ್ದ ಸುಪ್ರೀಂಕೋರ್ಟ್ ಇದೀಗ ಈ ಕುರಿತು ಅಭಿಪ್ರಾಯ ಕೇಳಿದದೆ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ ಮಾಲ್ಯ ಬಾಗ್ಚಿ ಮತ್ತು ವಿಜಯ್ ಬಿಷ್ಟೋಯಿ ಅವರ ಪೀಠವು, ನ್ಯಾಯಾಂಗ ಸೇವೆಗಳ ಪರೀಕ್ಷೆಗೆ ಪ್ರವೇಶ ಪಡೆಯಲು ಕನಿಷ್ಠ ಮೂರು ವರ್ಷಗಳ ಕಾನೂನು ಅಭ್ಯಾಸ (ವಕೀಲಿಕೆ) ಕಡ್ಡಾಯದ ಬಗ್ಗೆ ನಾಲ್ಕು ವಾರಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಎಂದು ಹೈಕೋರ್ಟ್ ಗಳು, ರಾಷ್ಟ್ರೀಯ ಕಾನೂನು ವಿಶ್ವ ವಿದ್ಯಾಲಯಗಳು ಮತ್ತು ಇತರೆ ಕಾನೂನು ಶಾಲೆಗಳಿಗೆ(ಲಾ ಸ್ಕೂಲ್) ಸೂಚಿಸಿದೆ.

ಕಾನೂನು ಪದವಿ ಪಡೆದು ಹೊರಬಂದ ತಕ್ಷಣವೇ ನ್ಯಾಯಾಂಗ ಸೇವೆಗಳ ಪರೀಕ್ಷೆಗೆ ಪ್ರವೇಶ ಪಡೆಯುವುದನ್ನು ಕಳೆದ ವರ್ಷ ಮೇ 20ರಂದು ಅಂದಿನ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಪೀಠವು ನಿರ್ಬಂಧಿಸಿ ಕನಿಷ್ಠ ಮೂರು ವರ್ಷಗಳ ವಕೀಲಿಕೆಯ ಮಾನದಂಡವನ್ನು ಕಡ್ಡಾಯಗೊಳಿಸಿತ್ತು.

ಈ ನಡುವೆ ಹೊಸ ಮಾನದಂಡದಿಂದ ಅಂಗವಿಕಲ ಪದವೀಧರರಿಗೆ ವಿನಾಯಿತಿ ಕೋರಿ ಭೂಮಿಕಾ ಟ್ರಸ್ಟ್ ಅರ್ಜಿ ಸಲ್ಲಿಸಿತ್ತು. ಅಂಗವಿಕಲ ಪದವೀಧರರನ್ನು ಕೆಲ ವಕೀಲರು ವಕೀಲಿಕೆ ಅಭ್ಯಾಸಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಹೀಗಾಗಿ ವಿನಾಯಿತಿ ಅಗತ್ಯವಿದೆ ಎಂದು ಕೋರಿದ್ದ ಸಂಸ್ಥೆ, ಮಧ್ಯಪ್ರದೇಶದಲ್ಲಿ ಈ ವಿನಾಯಿತಿ ಇರುವುದನ್ನು ಗಮನಕ್ಕೆ ತಂದಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ಈ ರೀತಿಯ ವಿನಾಯಿತಿ ಸೇವೆಗೆ ಸೇರಿದ ಸಂದರ್ಭದಲ್ಲಿ ಕೀಳರಿಮೆ ಭಾವನೆ ಉಂಟುಮಾಡಬಹುದು. ಎಲ್ಲ ರಾಜ್ಯಗಳಲ್ಲೂ ಸಮಾನ ಮಾನದಂಡ ಇರುವುದು ಒಳಿತು’ ಎಂದು ಪೀಠ ಅಭಿಪ್ರಾಯಪಟ್ಟಿದೆ.

‘ಮೂರು ವರ್ಷಗಳ ವಕೀಲಿಕೆ ಕಡ್ಡಾಯ ವಿಚಾರದಲ್ಲಿ ಕೆಲ ಯುವ ವಿದ್ಯಾರ್ಥಿಗಳು ಬೇಸರಗೊಂಡಿದ್ದಾರೆ ಮತ್ತು ಸ್ಟೈರ್ಯ ಕಳೆದುಕೊಂಡಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಹೀಗಾಗಿ ಕಾನೂನು ಶಾಲೆಗಳು ಮತ್ತು ಎಲ್ಲ ಹೈಕೋರ್ಟ್ಗಳಿಂದ ನಾಲ್ಕು ವಾರಗಳ ಒಳಗೆ ಅಭಿಪ್ರಾಯ ಬಯಸಿದ್ದೇವೆ. ಯಾವುದೇ ಮಾರ್ಪಾಡು ಮಾಡುವ ಅಗತ್ಯಬಿದ್ದರೆ, ಎಲ್ಲರಿಗೂ ಅನ್ವಯಿಸುತ್ತೇವೆ’ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.