23/04/2026

Law Guide Kannada

Online Guide

ಗುತ್ತಿಗೆ ನೌಕರರಿಗೆ ಶಾಕ್: ‘ಸರ್ಕಾರಿ ನೌಕರರಂತೆ ಸಮಾನ ಹಕ್ಕಿಲ್ಲ’ ಎಂದು ತೀರ್ಪನಿತ್ತ ಸುಪ್ರೀಂ

ನವದೆಹಲಿ: ಸರ್ಕಾರಿ ಇಲಾಖೆಗಳಲ್ಲಿ ವರ್ಷಗಟ್ಟಲೆ ಕೆಲಸ ಮಾಡುತ್ತಾ ನೌಕರಿ ಖಾಯಂಗಾಗಿ ಕಾಯುತ್ತಿರುವ ಗುತ್ತಿಗೆ ನೌಕರರಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. “ಗುತ್ತಿಗೆ ನೌಕರರಿಗೆ ಸರ್ಕಾರಿ ಕೆಲಸದ ಹಕ್ಕಿಲ್ಲ. ಗುತ್ತಿಗೆ ನೌಕರರು ಖಾಯಂ ಸರ್ಕಾರಿ ನೌಕರರಂತೆ ಸಮಾನ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ,” ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಹಸನುದ್ದೀನ್ ಅಮಾನುಲ್ಲಾ ಮತ್ತು ವಿಪುಲ್ ಎಂ. ಪಂಚೋಲಿ ಅವರಿದ್ದ ನ್ಯಾಯಪೀಠವು ಆಂಧ್ರಪ್ರದೇಶದ ನೈರ್ಮಲ್ಯ ಕಾರ್ಮಿಕರ ಪ್ರಕರಣವೊಂದರ ವಿಚಾರಣೆ ವೇಳೆ ಈ ಅಭಿಪ್ರಾಯಪಟ್ಟಿದೆ.

ಏಜೆನ್ಸಿ ಅಥವಾ ಗುತ್ತಿಗೆದಾರರ ಮೂಲಕ ನೇಮಕಗೊಂಡ ನೌಕರರು ಮತ್ತು ನೇರ ನೇಮಕಾತಿ ಮೂಲಕ ಬಂದ ಸರ್ಕಾರಿ ನೌಕರರು ಒಂದೇ ಅಲ್ಲ. ಗುತ್ತಿಗೆ ನೌಕರರು ನಿಯಮಿತ ಉದ್ಯೋಗಿಗಳಂತೆ ಸಂಬಳ, ಭತ್ಯೆ ಅಥವಾ ಸಮಾನ ಹಕ್ಕುಗಳನ್ನು ಕೇಳಲು ಬರುವುದಿಲ್ಲ. ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

“ಗುತ್ತಿಗೆ ನೌಕರರಿಗೂ ಸಮಾನ ವೇತನ ನೀಡಿ” ಎಂದು 2018ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್, ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಈಗ ರದ್ದುಗೊಳಿಸಿದೆ. ಹಾಗೆಯೇ “ಸರ್ಕಾರಿ ಉದ್ಯೋಗ ಎಂಬುದು ಸಾರ್ವಜನಿಕ ಆಸ್ತಿ,” ಎಂದು ನ್ಯಾಯಪೀಠ ಹೇಳಿದೆ.

ದೇಶದ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುವ ಹಕ್ಕಿದೆ. ಆದರೆ ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳುವಾಗ ಯಾವುದೇ ಪಾರದರ್ಶಕ ಪರೀಕ್ಷೆ ಅಥವಾ ಮೀಸಲಾತಿ ನಿಯಮ ಪಾಲಿಸಿರುವುದಿಲ್ಲ. ಅದನ್ನು ಗುತ್ತಿಗೆದಾರರು ತಮಗೆ ಇಷ್ಟ ಬಂದಂತೆ ನೇಮಕ ಮಾಡಿಕೊಂಡಿರುತ್ತಾರೆ. ಹೀಗಾಗಿ ಅವರನ್ನು ಏಕಾಏಕಿ ‘ಸರ್ಕಾರಿ ನೌಕರ’ ಎಂದು ಪರಿಗಣಿಸಲು ಆಗಲ್ಲ.“ನಿಯಮಿತ ನೇಮಕಾತಿಗಳಲ್ಲಿ ಪರೀಕ್ಷೆ, ಮೆರಿಟ್ ಮತ್ತು ಮೀಸಲಾತಿ ಇರುತ್ತದೆ. ಆದರೆ ಗುತ್ತಿಗೆ ನೇಮಕಾತಿ ಗುತ್ತಿಗೆದಾರನ ವಿವೇಚನೆಗೆ ಬಿಟ್ಟಿದ್ದು. ಹೀಗಾಗಿ ಗುತ್ತಿಗೆದಾರರ ಮೂಲಕ ಕೆಲಸಕ್ಕೆ ಸೇರಿ, ನಂತರ ನಮ್ಮನ್ನು ಕಾಯಂ ಮಾಡಿ ಅಥವಾ ಸಮಾನ ವೇತನ ಕೊಡಿ ಎಂದು ಕೇಳುವುದು
ಸಂವಿಧಾನದ ಪ್ರಕಾರ ಸರಿಯಲ್ಲ,” ಎಂದು ಪೀಠ ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.