23/04/2026

Law Guide Kannada

Online Guide

ಪತಿಯನ್ನು ಹೀಯಾಳಿಸುವುದು, ಹೆತ್ತವರನ್ನ ಬಿಟ್ಟು ಬರಲು ಒತ್ತಾಯಿಸಿವುದು ಕ್ರೌರ್ಯಕ್ಕೆ ಸಮ – ಹೈಕೋರ್ಟ್

ರಾಯಪುರ: ಪತಿಯನ್ನು ಪತ್ನಿಯು ‘ಸಾಕು ಇಲಿ’ ಎಂದು ಹೀಯಾಳಿಸುವುದು ಹೆತ್ತವರನ್ನು ಬಿಟ್ಟು ಬರುವಂತೆ ಒತ್ತಾಯಿಸುವುದು ಕ್ರೌರ್ಯಕ್ಕೆ ಸಮ ಎಂದು ಅಭಿಪ್ರಾಯಪಟ್ಟಿರುವ ಛತ್ತೀಸ್ಗಢ ಹೈಕೋರ್ಟ್ ವಿಚ್ಚೇದನ ಮಂಜೂರು ಮಾಡಿ ಆದೇಶಿಸಿದೆ.

ಪತ್ನಿಯು ತೊರೆದು ಪ್ರತ್ಯೇಕವಾಗಿ ವಾಸಿಸುತ್ತಿರುವುದನ್ನು ಉಲ್ಲೇಖಿಸಿ ವಿಚ್ಛೇದನವನ್ನು ನೀಡುವಂತೆ ಕೋರಿ ಪತಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಚ್ಚೇದನ ಮಂಜೂರು ಮಾಡಿದೆ. ದೂರಿನಲ್ಲಿ ಪತಿಯು ತನ್ನ ಹೆಂಡತಿ ನಿರಂತರವಾಗಿ ತನ್ನ ಹೆತ್ತವರನ್ನು ತ್ಯಜಿಸಿ ಪ್ರತ್ಯೇಕವಾಗಿ ವಾಸಿಸುವಂತೆ ಒತ್ತಡ ಹೇರುತ್ತಿದ್ದಳು ಎಂದು ಆರೋಪಿಸಿದ್ದರು.

ಪತಿಯು ತನ್ನ ಹೆತ್ತವರ ಜೊತೆಗೆ ವಾಸವಾಗಿದ್ದು, ಅವರಿಗೆ ವಿಧೇಯನಾಗಿರುವುದಕ್ಕೆ ಪತ್ನಿಯು ತಮ್ಮನ್ನು ಹೀಯಾಳಿಸುತ್ತಾರೆ, ಮೌಖಿಕ ನಿಂದನೆಗೆ ಒಳಪಡಿಸುತ್ತಾರೆ. ನಿರ್ದಿಷ್ಟವಾಗಿ “ಪಾಲ್ಲೂ ಚೂಹಾ” (ಸಾಕಿದ ಇಲಿ) ಎಂದು ಸಂಬೋಧಿಸುತ್ತಾರೆ ಎಂದು ಆರೋಪಿಸಿದ್ದರು. ಹಾಗೂ ತನ್ನ ತಾಯಿಯ ಸಮ್ಮುಖದಲ್ಲಿಯೇ ಪತಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದರು ಎಂಬುದಕ್ಕೆ ಪತಿಯು ನ್ಯಾಯಾಲಯಕ್ಕೆ ಸಾಕ್ಷ್ಯ ಒದಗಿದ್ದರು.

2010ರ ಆಗಸ್ಟ್ ನಲ್ಲಿ ಪತ್ನಿ ತನ್ನ ವೈವಾಹಿಕ ಮನೆಯನ್ನು ತೊರೆದು ಹೋಗಿ ಮತ್ತೆ ಆಕೆ ಆ ಮನೆಗೆ ವಾಪಸ್ ಬಂದಿಲ್ಲ. ಇದರಿಂದ ಎರಡು ವರ್ಷಗಳಿಗೂ ಹೆಚ್ಚು ಕಾಲ ಪತ್ನಿ ತನ್ನ ಪತಿಯಿಂದ ದೂರವಿದ್ದರು.

ಪತ್ನಿಯು ತಿಂಗಳಿಗೆ 46,941 ರೂ.ಗಳನ್ನು ಗಳಿಸುತ್ತಿದ್ದರೂ ಕೂಡ ಆಕೆ ಪತಿಯ ವಿರುದ್ದ ಪ್ರತಿ ತಿಂಗಳು ರೂ. 35,000/-ಗಳ ಜೀವನಾಂಶ ನೀಡುವಂತೆ ಹಾಗೂ ನಿರ್ಲಕ್ಷ್ಯವನ್ನು ಪ್ರತಿಪಾದಿಸುವ ಮೂಲಕ ಮತ್ತು ದಾಂಪತ್ಯ ಹಕ್ಕುಗಳ ಪುನರ್ ಪ್ರಾಪ್ತಿ ಒತ್ತಾಯಿಸಿ ಪರಿಹಾರ ಕೋರಿದ್ದಳು. ಹಿಂದೂ ವಿವಾಹ ಕಾಯ್ದೆ, 1955 ರ ಕಲಂ.13(1)(ia) ಮತ್ತು (i)(b) ಅನ್ನು ಉಲ್ಲೇಖಿಸುವ ಮೂಲಕ, ಸಮರ್ಥನೀಯ ಕಾರಣವಿಲ್ಲದೆ, ಸಂಗಾತಿಯು ತನ್ನ ಹೆತ್ತವರಿಂದ ಬೇರ್ಪಡಿಸುವುದು ಮಾನಸಿಕ ಕ್ರೌರ್ಯಕ್ಕೆ ಕಾರಣವಾಗುತ್ತದೆ. ಪತ್ನಿಯು ತನ್ನ ಗಂಡನನ್ನು ‘ಸಾಕು ಇಲಿ’ ಎಂದು ಹೀಯಾಳಿಸುವುದು ಮತ್ತು ತನ್ನ ಹೆತ್ತವರನ್ನು ಬಿಟ್ಟು ಬರುವಂತೆ ಪತಿಯನ್ನು ಒತ್ತಾಯಿಸುವುದು ಕ್ರೌರ್ಯಕ್ಕೆ ಸಮ ಎಂಬುದನ್ನು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತು.

ಪತಿಯು ತನ್ನ ಹೆತ್ತವರನ್ನು ಬಿಟ್ಟು ಬರುವಂತೆ ಪತ್ನಿಯು ಷರತ್ತು ಬದ್ಧವಾಗಿ ಹೇಳುವ ಪಠ್ಯ ಸಂದೇಶಗಳು ಈ ಕ್ರೌರ್ಯದ ಸ್ಪಷ್ಟ ತಪ್ಪೋಪ್ಪಿಗೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಎರಡು ವರ್ಷಗಳಿಗೂ ಹೆಚ್ಚು ಕಾಲ ಯುಕ್ತ ಕಾರಣವಿಲ್ಲದೆ ವೈವಾಹಿಕ ಮನೆಗೆ ಮರಳಲು ಪತ್ನಿಯು ನಿರಂತರವಾಗಿ ನಿರಾಕರಿಸಿದ್ದು, ಪ್ರತ್ಯೇಕ ವಾಸಿಸುತ್ತಿರುವುದಕ್ಕೆ ಶಾಸನಬದ್ಧ ಮಿತಿಯನ್ನು ಪೂರೈಸಿದೆ ಎಂದು ತಿಳಿಸಿದ ನ್ಯಾಯಪೀಠ, ಪತ್ನಿಯ ಮೇಲ್ಮನವಿಯನ್ನು ವಜಾಗೊಳಿಸಿ ಮತ್ತು ಕೌಟುಂಬಿಕ ನ್ಯಾಯಾಲಯದ ವಿಚ್ಛೇದನದ ತೀರ್ಪನ್ನು ದೃಢಪಡಿಸಿತು.

ಸದರಿ ಪ್ರಕರಣದಲ್ಲಿ ಪತ್ನಿ ಗಂಡನಿಗಿಂತ ಹೆಚ್ಚಿನ ಸಂಬಳವನ್ನು ಗಳಿಸುತ್ತಿದ್ದಾರೆ ಎಂಬುದನ್ನು ಗಮನಿಸಿ, ಪತಿಗೆ 5 ಲಕ್ಷ ರೂ.ಗಳ ಶಾಶ್ವತ ಜೀವನಾಂಶವನ್ನು ಪಾವತಿಸಲು ಆದೇಶ ಹೊರಡಿಸಿತು. ಈ ಮೊತ್ತವನ್ನು ಅವರ ಅಪ್ರಾಪ್ತ ಮಗುವಿನ ಪಾಲನೆಯನ್ನು ಪರಿಗಣಿಸಿ ನಿರ್ಧರಿಸಲಾಗಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.