23/04/2026

Law Guide Kannada

Online Guide

ಚೆಕ್ ಬೌನ್ಸ್ ಕೇಸ್: ಶಿಕ್ಷೆ ಅಂತಿಮ ನಂತರವೂ ರಾಜಿಯಾದರೆ ಕಾನೂನುಬದ್ಧ ಮಾನ್ಯತೆ ನೀಡಬೇಕು – ಹೈಕೋರ್ಟ್

ಮುಂಬೈ: ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಶಿಕ್ಷೆ ಅಂತಿಮಗೊಂಡ ನಂತರವೂ ಪಕ್ಷಗಳ ನಡುವೆ ರಾಜಿಯಾದರೆ ಒಪ್ಪಂದಕ್ಕೆ ಕಾನೂನುಬದ್ಧ ಮಾನ್ಯತೆ ನೀಡಬೇಕು ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.

ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಉರ್ಮಿಳಾ ಜೋಶಿ ಫಲ್ಕೆ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದ್ದು, ನೆಗೋಶಿಯಬಲ್ ಇನ್ಸ್ಟ್ರುಮೆಂಟ್ ಕಾಯ್ದೆಯ ಸೆಕ್ಷನ್ 138 ರಡಿ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಆರೋಪಿಗೆ ಶಿಕ್ಷೆ ಅಂತಿಮಗೊಂಡ ನಂತರವೂ ಪಕ್ಷಗಳು ಪರಸ್ಪರ ರಾಜಿ ಮಾಡಿಕೊಂಡರೆ, ಅದಕ್ಕೆ ಕಾನೂನುಬದ್ಧ ಮಾನ್ಯತೆ ನೀಡಬೇಕು ಎಂದಿದೆ. ಚೆಕ್ ಬೌನ್ಸ್ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ವಿಧಿಸಲಾದ ಶಿಕ್ಷೆಯನ್ನು ರದ್ದು ಪಡಿಸಿದ ಹೈಕೋರ್ಟ್ ನ್ಯಾಯಪೀಠ, ಎನ್.ಐ. ಆಕ್ಟ್ ನಡಿ ದಾಖಲಾದ ಪ್ರಕರಣವು ಯಾವುದೇ ಹಂತದಲ್ಲೂ, ಅಂದರೆ ಶಿಕ್ಷೆ ಅಂತಿಮವಾದ ನಂತರವೂ ಪಕ್ಷಕಾರರು ರಾಜಿ ಮಾಡಿಕೊಂಡರೆ, ಸೆಕ್ಷನ್ 147 ಅಡಿಯಲ್ಲಿ ಅದನ್ನು ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

ಇಂತಹ ಪ್ರಕರಣಗಳಲ್ಲಿ ಶಿಕ್ಷಾತ್ಮಕ ಅಂಶಕ್ಕಿಂತ ಪರಿಹಾರ ಅಂಶಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಆದ್ದರಿಂದ, ಪಕ್ಷಗಳು ವಿವಾದವನ್ನು ಬಗೆಹರಿಸಲು ಸಮ್ಮತಿಸಿದರೆ, ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಕಾಯಿದೆ ಅಡಿಯಲ್ಲಿ ಅಪರಾಧಗಳನ್ನು ರಾಜಿ ಮಾಡುವುದನ್ನು ನ್ಯಾಯಾಲಯಗಳು ಉತ್ತೇಜಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಅರ್ಜಿದಾರನು ಎನ್.ಐ. ಆಕ್ಟ್ ಸೆಕ್ಷನ್ 138 ಅಡಿಯಲ್ಲಿ ದಾಖಲಾದ ಎರಡು ಪ್ರಕರಣಗಳಲ್ಲಿ ಮೂಲ ಆರೋಪಿ ಆಗಿದ್ದನು. ಈ ಪ್ರಕರಣಗಳಲ್ಲಿ ಅವನ ವಿರುದ್ಧ ಶಿಕ್ಷೆ ವಿಧಿಸಲಾಗಿತ್ತು. ಅವನ ಮೇಲ್ಮನವಿಯೂ (appeal) ಹಾಗೂ ಪುನರ್ ಪರಿಶೀಲನೆಯೂ (revision) ತಿರಸ್ಕೃತವಾಗಿದ್ದವು. ಆದರೆ, ಈ ಪ್ರಕ್ರಿಯೆಗಳು ನಡೆಯುತ್ತಿದ್ದ ಸಮಯದಲ್ಲಿ ಪಕ್ಷಗಳ ನಡುವೆ ರಾಜಿ ಮಾತುಕತೆಗಳು ನಡೆದಿದ್ದು, ನಂತರ ಅಂತಿಮವಾಗಿ ಅವರು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ, ಶಿಕ್ಷೆ ಹಾಗೂ ದಂಡದ ಆದೇಶವನ್ನು ರದ್ದುಪಡಿಸಬೇಕು ಎಂದು ಹೈಕೋರ್ಟ್ ಮುಂದೆ ಮನವಿ ಮಾಡಿದ್ದರು.

ಪಕ್ಷಕಾರರ ನಡುವಿನ ರಾಜಿ ಒಪ್ಪಂದವನ್ನು ಪರಿಗಣಿಸಿ, ನ್ಯಾಯಾಲಯವು ಅರ್ಜಿಯನ್ನು ಪುರಸ್ಕರಿಸಿ, ಅರ್ಜಿದಾರನ ವಿರುದ್ಧ ವಿಧಿಸಲಾದ ಶಿಕ್ಷೆ ಮತ್ತು ದಂಡದ ಆದೇಶಗಳನ್ನು ರದ್ದುಪಡಿಸಿತು. “ಅರ್ಜಿದಾರನು ಎರಡೂ ಪ್ರಕರಣಗಳಲ್ಲಿ ನಿರ್ದೋಷಿ ಎಂದು ಘೋಷಿಸಲಾಗುತ್ತದೆ” ಎಂದು ನ್ಯಾಯಾಲಯ ಆದೇಶಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.