ಎಂದೂ ನಂದದ ನ್ಯಾಯದ ನಂದಾದೀಪ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ – ಪಾಂಡಿತ್ಯ, ಮಾನವೀಯತೆ ಮತ್ತು ಸಂವಿಧಾನದ ಸಮ್ಮಿಲನ
ಕೆಲವು ನ್ಯಾಯಾಧೀಶರು ಕೇವಲ ತೀರ್ಪುಗಳನ್ನು ಬರೆಯುತ್ತಾರೆ. ಆದರೆ ಕೆಲವರು ತಮ್ಮ ತೀರ್ಪುಗಳ ಮೂಲಕ ಸಮಾಜದ ಮನಸ್ಸನ್ನೇ ರೂಪಿಸುತ್ತಾರೆ. ಅಂತಹ ಅಪರೂಪದ ನ್ಯಾಯಮೂರ್ತಿಗಳ ಸಾಲಿನಲ್ಲಿ ಹೆಮ್ಮೆಯಿಂದ ಉಲ್ಲೇಖವಾಗುವ ಹೆಸರು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್. ಕೃಷ್ಣ ದೀಕ್ಷಿತ್ ಹೆಸರು ಕೇಳಿದಾಗ ಕೇವಲ ನ್ಯಾಯಾಧೀಶರೊಬ್ಬರ ಚಿತ್ರಣ ಮೂಡುವುದಿಲ್ಲ, ಅಪಾರ ಅಧ್ಯಯನಶೀಲ, ಸಂವಿಧಾನದ ಅಚಲ ಕಾವಲುಗಾರ, ಭಾರತೀಯ ಸಂಸ್ಕೃತಿಯ ಆರಾಧಕ, ಸಾಹಿತ್ಯದ ರಸಿಕ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಅಪರೂಪದ ಚಿಂತಕರೊಬ್ಬರ ವ್ಯಕ್ತಿತ್ವ ಕಣ್ಮುಂದೆ ಬರುತ್ತದೆ.
ನ್ಯಾ ಕೃಷ್ಣದೀಕ್ಷಿತ್ ಅವರ ಹಿನ್ನೆಲೆ
ಸಾಮಾನ್ಯ ಕೃಷಿ ಕುಟುಂಬದಲ್ಲಿ ಹುಟ್ಟಿದವರು ಕೃಷ್ಣ ದೀಕ್ಷಿತ್. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ 1964ರ ಜುಲೈ 20ರಂದು ಜನಿಸಿದರು. ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಮಾಸೂರಿನಲ್ಲಿ ಪಡೆದರು. ಕರ್ನಾಟಕ ಕಾಲೇಜ್ ಆಫ್ ಧಾರವಾಡದಲ್ಲಿ 1986ರಲ್ಲಿ ಬಿ.ಎಸ್ಸಿ ಪದವಿ ಪಡೆದರು. 1989ರಲ್ಲಿ ಧಾರವಾಡದ ಯೂನಿವರ್ಸಿಟಿ ಲಾ ಕಾಲೇಜ್’ನಿಂದ ಕಾನೂನು ಪದವೀಧರರಾಗಿ ಎರಡನೇ ರ‌್ಯಾಂಕ್ ಗಳಿಸಿದರು. ನಂತರ ರಾಜ್ಯ ವಕೀಲರ ಪರಿಷತ್‌ನಲ್ಲಿ 1989ರಲ್ಲಿ ನೋಂದಣಿ ಮಾಡಿಸಿದ ಅವರು ಬೆಂಗಳೂರಿನಲ್ಲಿ ಹಿರಿಯ ವಕೀಲ ಸುರೇಶ್ ಎಸ್.ಜೋಶಿ ಅವರ ಬಳಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಕರ್ನಾಟಕ ಮತ್ತು ಮದ್ರಾಸ್ ಹೈಕೋರ್ಟ್‌ಗಳಲ್ಲಿ ವಕೀಲಿಕೆ ನಡೆಸಿದರು. ಚುನಾವಣೆ, ಸೇವಾ ವಿಷಯಗಳು, ಭೂ ಸುಧಾರಣೆಗಳು ಹಾಗೂ ಬ್ಯಾಂಕಿಂಗ್ ಮುಂತಾದ ಕಾನೂನು ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದ ಅವರು ನ್ಯಾಯಮೂರ್ತಿಯಾಗಿ ನೇಮಕವಾಗುವ ಮುನ್ನ ಸರ್ಕಾರದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು.
ಪ್ರಮುಖ ಹುದ್ದೆಗಳು
1999ರಲ್ಲಿ ಭಾರತೀಯ ಚುನಾವಣಾ ಆಯೋಗದ ಹಿರಿಯ ಸ್ಥಾಯಿ ವಕೀಲರು, 1999ರಲ್ಲಿ ಕೇಂದ್ರ ಸರ್ಕಾರದ ಸ್ಥಾಯಿ ವಕೀಲರು ಮತ್ತು 2014ರಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಭಾರತದ ಸಹಾಯಕ ಸಾಲಿಸಿಟರ್ ಜನರಲ್ ಆಗಿದ್ದರು.
ವಿಶ್ವವಿದ್ಯಾಲಯ ಅನುದಾನ ಆಯೋಗ, ಭಾರತೀಯ ಸ್ಪರ್ಧಾ ಆಯೋಗ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ, ಮುಂಬೈನ ಭಾಭಾ ಪರಮಾಣು ಸಂಶೋಧನಾ ಕೇಂದ್ರ, ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆ, ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ನಂತಹ ಶಾಸನಬದ್ಧ ಸಂಸ್ಥೆಗಳ ಸ್ಥಾಯಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು.
ಜ್ಞಾನವೇ ಅವರ ಆಭರಣ
ಜ್ಞಾನಕ್ಕೆ ಪರ್ಯಾಯ ಹೆಸರು ಕೃಷ್ಣ ದೀಕ್ಷಿತ್ ಎನ್ನುವಂತಿದೆ ಇದಕ್ಕೆ ಕಾರಣ ಅವರು ಕಾನೂನಿನ ಪುಸ್ತಕಗಳನ್ನು ಮಾತ್ರವಲ್ಲ, ರಾಮಾಯಣ, ಮಹಾಭಾರತ, ಭಾಗವತ, ಉಪನಿಷತ್ತುಗಳು, ಭಗವದ್ಗೀತೆ, ಪುರಾಣಗಳು, ಕಾಳಿದಾಸ, ಬಸವಣ್ಣ, ಸರ್ವಜ್ಞ, ಶೇಕ್ಸ್‌ಪಿಯರ್ ಸೇರಿದಂತೆ ಭಾರತೀಯ ಮತ್ತು ಪಾಶ್ಚಾತ್ಯ ಸಾಹಿತ್ಯದ ಮೇಲೆ ಅವರು ಹೊಂದಿರುವ ಅಧ್ಯಯನದ ಹಿಡಿತ. ಇದು ನ್ಯಾಯಾಂಗ ವಲಯದಲ್ಲಿ ಅಪರೂಪದಲ್ಲಿ ಅಪರೂಪ ಎನಿಸಿ ವಿಶೇಷ ಗೌರವಕ್ಕೆ ಪಾತ್ರವಾಗಿದೆ.
ರಾಮಾಯಣ ಮತ್ತು ಮಹಾಭಾರತದ ಮೌಲ್ಯಗಳ ಪ್ರತಿಧ್ವನಿ
ಅವರ ನ್ಯಾಯ ಲೇಖನಗಳಲ್ಲಿ ರಾಮಾಯಣದ ಧರ್ಮನಿಷ್ಠೆ, ಮಹಾಭಾರತದ ನ್ಯಾಯದ ಅನ್ವೇಷಣೆ ಮತ್ತು ಭಗವದ್ಗೀತೆಯ ಕರ್ತವ್ಯ ಪ್ರಜ್ಞೆಯಂತಹ ಮೌಲ್ಯಗಳ ಪ್ರತಿಧ್ವನಿ ಕೇಳಿಸುತ್ತದೆ. ಅವರು ಈ ಗ್ರಂಥಗಳನ್ನು ಧಾರ್ಮಿಕ ದೃಷ್ಟಿಯಿಂದ ಮಾತ್ರವಲ್ಲ, ಭಾರತೀಯ ನಾಗರಿಕತೆಯ ನೈತಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮೂಲಗಳಾಗಿ ಉಲ್ಲೇಖಿಸಿರುವುದು ಗಮನಾರ್ಹ. ಧರ್ಮ, ನ್ಯಾಯ, ಕರ್ತವ್ಯ, ಕ್ಷಮೆ, ಹೊಣೆಗಾರಿಕೆ ಮತ್ತು ಮಾನವ ಘನತೆ ಎಂಬ ಮೌಲ್ಯಗಳನ್ನು ವಿವರಿಸುವ ಸಂದರ್ಭಗಳಲ್ಲಿ ಇಂತಹ ಉಲ್ಲೇಖಗಳು ಅವರ ತೀರ್ಪುಗಳಿಗೆ ವಿಶಿಷ್ಟ ಆಳವನ್ನು ನೀಡಿವೆ. ನ್ಯಾಯಮೂರ್ತಿಯಾಗಿ ಅವರು ನೀಡಿದ ಅನೇಕ ತೀರ್ಪುಗಳು ದೇಶದಾದ್ಯಂತ ಗಮನ ಸೆಳೆದಿವೆ. ಆದರೆ ಆ ಉಲ್ಲೇಖಗಳು ಕೇವಲ ಅಲಂಕಾರಕ್ಕಾಗಿ ಅಲ್ಲ, ನ್ಯಾಯದ ತತ್ವವನ್ನು ಹೆಚ್ಚು ಅರ್ಥಪೂರ್ಣವಾಗಿ ವಿವರಿಸುವ ಚಿಂತನೆಯ ಸಾಧನಗಳಾಗಿ ಬಳಸಲ್ಪಟ್ಟಿವೆ. ಸಂವಿಧಾನದ ಮೌಲ್ಯಗಳು ಮತ್ತು ಭಾರತೀಯ ಜ್ಞಾನ ಪರಂಪರೆಯ ನಡುವೆ ಸಂವಾದ ನಡೆಸುವ ಅಪರೂಪದ ಶೈಲಿಯನ್ನೇ ಅವರು ರೂಪಿಸಿದ್ದಾರೆ. ಕಾನೂನಿನ ಅಕ್ಷರವನ್ನು ಗೌರವಿಸುತ್ತಲೇ ಸಂವಿಧಾನದ ಮೌಲ್ಯಗಳು, ವೈಯಕ್ತಿಕ ಸ್ವಾತಂತ್ರ್ಯ, ಮಾನವ ಘನತೆ ಮತ್ತು ನ್ಯಾಯದ ತತ್ವಗಳಿಗೆ ಹೆಚ್ಚಿನ ಆದ್ಯತೆ ನೀಡಿದರು. ಅವರ ತೀರ್ಪುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶಗಳು
ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಒತ್ತು.
ಆಡಳಿತದ ಉತ್ತರದಾಯಿತ್ವವನ್ನು ನೆನಪಿಸುವ ದೃಢ ನಿಲುವು.
ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮಾನವ ಘನತೆಯ ರಕ್ಷಣೆ.
ನ್ಯಾಯ ವಿಳಂಬವಾಗಬಾರದು ಎಂಬ ಸ್ಪಷ್ಟ ಸಂದೇಶ.
ಕಾನೂನು ಮತ್ತು ಸಾಮಾಜಿಕ ಮೌಲ್ಯಗಳ ನಡುವಿನ ಸಮತೋಲನ.
ಪ್ರಮುಖ ತೀರ್ಪುಗಳು ಹಿಜಾಬ್, ಆನ್‌ಲೈನ್ ಗೇಮಿಂಗ್, ಟ್ವಿಟರ್, ನಾಡಗೀತೆ ವಿವಾದ, ಕಡ್ಡಾಯ ವೈದ್ಯಕೀಯ ಸೇವೆ, ಆದಾಯ ತೆರಿಗೆ ಮರುಪಾವತಿ, ಸೆಟ್ ಟಾಪ್ ಬಾಕ್ಸ್ ಮೇಲಿನ ಜಿಎಸ್‌ಟಿ, ಜಿಎಸ್‌ಟಿಯಿಂದ ವಿಶ್ವವಿದ್ಯಾಲಯಗಳಿಗೆ ವಿನಾಯಿತಿ, ಕಾರ್ಮಿಕರಿಗೆ ಕನಿಷ್ಠ ವೇತನ, ಜಲಾಶಯಗಳ ಸುತ್ತ ಗಣಿಗಾರಿಕೆ ನಿಷೇಧ, ಮೀಸಲು ಅರಣ್ಯಗಳನ್ನು ಮರು ಪಡೆಯುವುದು, ಚುನಾವಣಾ ಪ್ರಕ್ರಿಯೆಯಲ್ಲಿ ರೋಡ್ ಶೋ ನಡೆಸುವ ಹಕ್ಕು, ಅಪರಾಧಿಗಳ ಪೆರೋಲ್, ಫರ್ಲೋ, ಬ್ಯಾಂಕ್‌ಗಳನ್ನು ವಂಚಿಸಿ ಸಾಲ ಪಡೆಯುವುದು, ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಹಿಂಪಡೆಯುವುದು, ಭಾರತದ ಸಾಗರೋತ್ತರ ನಾಗರಿಕರ ಶೈಕ್ಷಣಿಕ ಹಕ್ಕುಗಳು, ವಿದೇಶಿಯರಿಗೆ ವೀಸಾ ನಿರಾಕರಿಸುವ ಕೇಂದ್ರ ಸರ್ಕಾರದ ಅಧಿಕಾರ, ಪಕ್ಷಗಾರರಿಗೆ ಮೇಲ್ಮನವಿ ಸಲ್ಲಿಸಬಹುದಾದ ಆದೇಶಗಳನ್ನು ತಿಳಿಸಲು ಅರೆ ನ್ಯಾಯಿಕ ಅಧಿಕಾರಿಗಳ ಕರ್ತವ್ಯ, ಪಿಂಚಣಿದಾರರ ಹಕ್ಕುಗಳು, ರಕ್ಷಣಾ ಸಿಬ್ಬಂದಿ ಸವಲತ್ತುಗಳು, ವಯಸ್ಸಾದ ಪೋಷಕರು, ಹೆಂಡತಿ ಮಕ್ಕಳನ್ನು ನಿರ್ವಹಿಸುವ ಕರ್ತವ್ಯ, ಗೈರುಹಾಜರಿ ಮಾಲೀಕರ ಸಾರ್ವಜನಿಕ ಆಸ್ತಿಗಳು ಮತ್ತು ಆಸ್ತಿಗಳನ್ನು ರಕ್ಷಿಸುವ ನ್ಯಾಯಾಲಯಗಳ ಕರ್ತವ್ಯ, ಹಾಲುಣಿಸುವ ತಾಯಂದಿರ ಸ್ತನ್ಯಪಾನ ಹಕ್ಕುಗಳು, ಹಿಂದೂ ಧಾರ್ಮಿಕ ಸಂಸ್ಥೆಗಳು, ಮಠಗಳು ಇತ್ಯಾದಿಗಳ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪ ಮಾಡದೇ ಇರುವುದು ಸೇರಿ ಹಲವಾರು ಮಹತ್ವದ ತೀರ್ಪುಗಳು.
ಕೃಷ್ಣ ದೀಕ್ಷಿತರ ಕನ್ನಡ ಪ್ರೇಮ – ಐತಿಹಾಸಿಕ ನಿಲುವು
ಮಾನವೀಯ ಮೌಲ್ಯಗಳು ಮತ್ತು ಭಾರತೀಯ ಸಂಸ್ಕೃತಿಯ ಮೇಲಿನ ಅಪಾರ ಅಭಿಮಾನ ಹೊಂದಿದ್ದ ಕೃಷ್ಣದೀಕ್ಷಿತ್ ಅವರು ಕನ್ನಡ ಭಾಷೆಯ ಬಗೆಗಿನ ತಮ್ಮ ಪ್ರೀತಿಯನ್ನು ನ್ಯಾಯಾಂಗದ ವೇದಿಕೆಯಲ್ಲಿಯೂ ಅರ್ಥಪೂರ್ಣವಾಗಿ ವ್ಯಕ್ತಪಡಿಸಿದರು.
2024ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದ ವೇಳೆ ಅವರು ಸಂಪೂರ್ಣವಾಗಿ ಕನ್ನಡದಲ್ಲೇ ಆದೇಶ ಹೊರಡಿಸಿದ್ದು ನ್ಯಾಯಾಂಗದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿ ಉಳಿಯಿತು. ಬಹುಭಾಷೆ, ಬಹುಸಂಸ್ಕೃತಿಗಳ ಭಾರತದಲ್ಲಿ ನ್ಯಾಯದ ಭಾಷೆ ಜನರ ಭಾಷೆಯಾಗಬೇಕು ಎಂಬ ಆಶಯಕ್ಕೆ ಅವರ ಈ ಹೆಜ್ಜೆ ಹೊಸ ಅರ್ಥ ನೀಡಿತು. ನ್ಯಾಯಾಲಯದ ಆದೇಶಗಳು ಜನ ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗಬೇಕು, ನ್ಯಾಯವು ಕೇವಲ ವಕೀಲರಿಗಷ್ಟೇ ಅಲ್ಲ, ಸಾಮಾನ್ಯ ನಾಗರಿಕರಿಗೂ ತಲುಪಬೇಕು ಎಂಬ ಅವರ ಚಿಂತನೆ ಈ ನಿರ್ಧಾರದ ಹಿಂದಿತ್ತು. ಜನರ ನಾಡಿ ಮಿಡಿತವನ್ನು ಅರಿತ ನ್ಯಾಯಮೂರ್ತಿಯಾಗಿ ಅವರು ಕನ್ನಡದಲ್ಲೇ ಆದೇಶ ಹೊರಡಿಸಿದಾಗ ಅದು ಕೇವಲ ಭಾಷೆಯ ಮೇಲಿನ ಪ್ರೀತಿಯಲ್ಲ, ಕನ್ನಡಿಗರ ಆತ್ಮಗೌರವಕ್ಕೂ ನೀಡಿದ ಗೌರವವಾಗಿತ್ತು. ಈ ಕ್ರಮ ರಾಜ್ಯದ ಕೋಟ್ಯಂತರ ಕನ್ನಡಿಗರ ಮನದಲ್ಲಿ ಸಂತಸ ಮೂಡಿಸಿತು. ನ್ಯಾಯದ ಬಾಗಿಲು ಜನರ ಭಾಷೆಯಲ್ಲಿ ತೆರೆಯಬಹುದು ಎಂಬ ವಿಶ್ವಾಸವನ್ನು ಅವರ ನಡೆ ಬಲಪಡಿಸಿತು. ಅವರ ಈ ಐತಿಹಾಸಿಕ ಹೆಜ್ಜೆ ಇತರ ನ್ಯಾಯಾಧೀಶರು ಹಾಗೂ ನ್ಯಾಯಾಲಯಗಳಿಗೂ ಪ್ರೇರಣೆಯಾಯಿತು. ರಾಜ್ಯದ ನ್ಯಾಯಾಂಗದಲ್ಲಿ ಕನ್ನಡದ ಬಳಕೆಯನ್ನು ಇನ್ನಷ್ಟು ವಿಸ್ತರಿಸುವ ಚರ್ಚೆಗೆ ಇದು ನಾಂದಿಯಾಯಿತು. ಮುಂದಿನ ದಿನಗಳಲ್ಲಿ ಹೆಚ್ಚಿನ ಆದೇಶಗಳು ಕನ್ನಡದಲ್ಲೇ ಹೊರಬರಬೇಕು ಎಂಬ ಆಶಯಕ್ಕೆ ಅವರ ನಿರ್ಧಾರ ದಾರಿದೀಪವಾಯಿತು. ಕನ್ನಡವನ್ನು ಕೇವಲ ಮಾತೃಭಾಷೆಯಾಗಿ ಅಲ್ಲ, ನ್ಯಾಯವನ್ನು ಜನರಿಗೆ ತಲುಪಿಸುವ ಶಕ್ತಿಯುತ ಮಾಧ್ಯಮವಾಗಿ ಕಂಡ ನ್ಯಾಯಮೂರ್ತಿ ಶ್ರೀ ಕೃಷ್ಣ ಎಸ್. ದೀಕ್ಷಿತ್ ಅವರ ಹೆಸರು ಕನ್ನಡ ನ್ಯಾಯಾಂಗದ ಇತಿಹಾಸದಲ್ಲಿ ಸದಾ ಗೌರವದಿಂದ ಸ್ಮರಿಸಲ್ಪಡುತ್ತಿದೆ. ನ್ಯಾಯ, ಜ್ಞಾನ, ಸಂಸ್ಕೃತಿ ಮತ್ತು ಕನ್ನಡದ ಮೇಲಿನ ಅವರ ಅಪಾರ ಅಭಿಮಾನ ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಿ ಉಳಿದಿದೆ.
ಪುಟ್ಟ ಕಂದಮ್ಮನಿಗಾಗಿ ಮಿಡಿದಿದ್ದ ನ್ಯಾಯಮೂರ್ತಿಗಳು
ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ವೇಳೆ ನ್ಯಾಯಮೂರ್ತಿ ಶ್ರೀ ಕೃಷ್ಣ ಎಸ್. ದೀಕ್ಷಿತ್ ಅವರು ಮಾನವೀಯತೆ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿದ ಅನೇಕ ತೀರ್ಪುಗಳ ಮೂಲಕ ಜನಮನ ಗೆದ್ದಿದ್ದಾರೆ. ಅಂತಹ ಅತ್ಯಂತ ಗಮನಾರ್ಹ ಪ್ರಕರಣಗಳಲ್ಲಿ ಒಂದು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸೆಗೆ ಸುಮಾರು ₹16 ಕೋಟಿ ವೆಚ್ಚವಾಗುತ್ತಿದ್ದ ಪ್ರಕರಣ.
ಆ ಪ್ರಕರಣದಲ್ಲಿ ಮಗುವಿನ ಜೀವ ಉಳಿಸಲು ವಿದೇಶದಿಂದ ತರಬೇಕಾದ ಅತ್ಯಂತ ದುಬಾರಿ ಔಷಧಿಯ ಅಗತ್ಯವಿತ್ತು. ಮಗುವಿನ ಕುಟುಂಬಕ್ಕೆ ಆ ವೆಚ್ಚವನ್ನು ಭರಿಸುವ ಸಾಮರ್ಥ್ಯ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಪ್ರಕರಣದ ವಿಚಾರಣೆ ವೇಳೆ ಕೇವಲ ಕಾನೂನಿನ ತಾಂತ್ರಿಕ ಅಂಶಗಳನ್ನಷ್ಟೇ ನೋಡದೆ, ಸಂವಿಧಾನದ 21ನೇ ವಿಧಿಯಲ್ಲಿರುವ ಜೀವಿಸುವ ಹಕ್ಕು ಎಂಬ ಮೂಲಭೂತ ಹಕ್ಕನ್ನು ಪ್ರಮುಖವಾಗಿ ಪರಿಗಣಿಸಿದರು. ಜೀವ ಉಳಿಸುವ ಚಿಕಿತ್ಸೆ ಹಣದ ಕೊರತೆಯಿಂದ ನಿರಾಕರಿಸಲಾಗಬಾರದು ಎಂಬ ಮಾನವೀಯ ದೃಷ್ಟಿಕೋನವನ್ನು ಅವರು ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಅವರು ರಾಜ್ಯ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಮಗುವಿನ ಚಿಕಿತ್ಸೆಗೆ ಅಗತ್ಯವಾದ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಸರ್ಕಾರವು ಕೇಂದ್ರ ಸರ್ಕಾರ ಸೇರಿದಂತೆ ಸಂಬಂಧಿತ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಮಗುವಿನ ಚಿಕಿತ್ಸೆಗೆ ಬೇಕಾದ ಎಲ್ಲ ನೆರವು ಒದಗಿಸಬೇಕು ಎಂದು ಸೂಚಿಸಿದರು. ಇಂತಹ ಪ್ರಕರಣಗಳಲ್ಲಿ ಸರ್ಕಾರವು ತನ್ನ ಕಲ್ಯಾಣ ರಾಜ್ಯದ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂಬುದನ್ನು ಅವರು ಒತ್ತಿ ಹೇಳಿದರು.
ಈ ಪ್ರಕರಣ ದೇಶಾದ್ಯಂತ ಗಮನ ಸೆಳೆಯಿತು. ನ್ಯಾಯಮೂರ್ತಿ ದೀಕ್ಷಿತ್ ಅವರ ಆದೇಶವು ಕೇವಲ ಒಂದು ಮಗುವಿನ ಚಿಕಿತ್ಸೆಯ ಕುರಿತ ತೀರ್ಪಾಗಿರಲಿಲ್ಲ, ಆರ್ಥಿಕ ಅಸಮಾನತೆಯಿಂದ ಯಾವುದೇ ಮಗುವಿನ ಜೀವ ಅಪಾಯಕ್ಕೆ ಸಿಲುಕಬಾರದು ಎಂಬ ಸಂದೇಶವನ್ನು ಸಮಾಜ ಮತ್ತು ಸರ್ಕಾರಕ್ಕೆ ನೀಡಿದ ಮಹತ್ವದ ತೀರ್ಪಾಗಿತ್ತು.
ಈ ತೀರ್ಪು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ನ್ಯಾಯದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಅವರ ತೀರ್ಪುಗಳಲ್ಲಿ ಕಾನೂನಿನ ಕಟ್ಟುನಿಟ್ಟಿನ ಜೊತೆಗೆ ಮಾನವೀಯ ಕಾಳಜಿ, ಕರುಣೆ ಮತ್ತು ಸಾಮಾಜಿಕ ಹೊಣೆಗಾರಿಕೆ ಸ್ಪಷ್ಟವಾಗಿ ಕಾಣಿಸುತ್ತವೆ. ಆದ್ದರಿಂದಲೇ ಅವರು ಕೇವಲ ನ್ಯಾಯಾಧೀಶರಾಗಿ ಮಾತ್ರವಲ್ಲ, ಮಾನವೀಯ ನ್ಯಾಯದ ಪ್ರತೀಕ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.
ನ್ಯಾಯದ ಜೊತೆಗೆ ಮಾನವೀಯತೆಯ ಸ್ಪರ್ಶ
ನ್ಯಾಯವೆಂದರೆ ಕೇವಲ ಕಾನೂನಿನ ಕಠಿಣ ಪದಗಳಲ್ಲ, ಅದರೊಳಗೆ ಮಾನವ ಬದುಕಿನ ನೋವು, ಆಸೆ, ಗೌರವ ಮತ್ತು ಹಕ್ಕುಗಳೂ ಅಡಗಿವೆ ಎಂಬುದನ್ನು ನ್ಯಾಯಮೂರ್ತಿ ದೀಕ್ಷಿತ್ ಅವರ ಹಲವು ತೀರ್ಪುಗಳ ಮೂಲ ನೆನಪಿಸಿದ್ದಾರೆ. ಅವರು ಕಾನೂನನ್ನು ಅಕ್ಷರಶಃ ಅನ್ವಯಿಸುವುದರ ಜೊತೆಗೆ, ಅದರ ಉದ್ದೇಶ ಮತ್ತು ಮಾನವೀಯ ಪರಿಣಾಮವನ್ನೂ ಪರಿಗಣಿಸುವ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದ್ದಾರೆ. ಅದಕ್ಕಾಗಿಯೇ ಅವರ ತೀರ್ಪುಗಳು ಅನೇಕ ಬಾರಿ ಕಾನೂನು ವಿದ್ಯಾರ್ಥಿಗಳು, ವಕೀಲರು ಮತ್ತು ನ್ಯಾಯಾಧೀಶರ ಅಧ್ಯಯನಕ್ಕೆ ವಿಷಯವಾಗಿವೆ.
ಸರಳತೆ ಮತ್ತು ಸೌಜನ್ಯದ ಪ್ರತಿರೂಪ
ಅಪಾರ ಪಾಂಡಿತ್ಯ ಹೊಂದಿದ್ದರೂ ಅಹಂಕಾರಕ್ಕೆ ಅವಕಾಶ ನೀಡದ ವ್ಯಕ್ತಿತ್ವ ಅವರದು. ನ್ಯಾಯಾಲಯದಲ್ಲಿ ವಕೀಲರ ವಾದಗಳನ್ನು ತಾಳ್ಮೆಯಿಂದ ಆಲಿಸುವುದು, ಕಿರಿಯ ವಕೀಲರನ್ನೂ ಗೌರವದಿಂದ ನಡೆಸಿಕೊಳ್ಳುವುದು ಮತ್ತು ನ್ಯಾಯಾಲಯದ ಘನತೆಯನ್ನು ಕಾಪಾಡುವುದು ಅವರ ಕಾರ್ಯ ಶೈಲಿಯ ವಿಶೇಷ ಲಕ್ಷಣಗಳಾಗಿವೆ.
ಯುವ ಕಾನೂನು ವಿದ್ಯಾರ್ಥಿಗಳಿಗೆ ಸ್ಫೂರ್ತಿ
ಅವರು ಹೇಳುವ ಪ್ರತಿಯೊಂದು ವಿಚಾರವೂ ಒಂದು ಪಾಠದಂತಿರುತ್ತದೆ. ಕಾನೂನು ಓದುವ ವಿದ್ಯಾರ್ಥಿಗಳು ಕೇವಲ ಕಾನೂನಿನ ಪುಸ್ತಕಗಳಲ್ಲ, ಇತಿಹಾಸ, ಸಾಹಿತ್ಯ, ತತ್ವಶಾಸ್ತ್ರ ಮತ್ತು ಸಮಾಜವನ್ನೂ ಅಧ್ಯಯನ ಮಾಡಬೇಕು ಎಂಬ ಸಂದೇಶವನ್ನು ಅವರ ಬದುಕು ನೀಡುತ್ತದೆ.
ಗೌರವ ಡಾಕ್ಟರೇಟ್ – ಸಮಾಜದ ಗೌರವ
ನ್ಯಾಯಾಂಗ, ಶಿಕ್ಷಣ ಮತ್ತು ಕಾನೂನು ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಒಡಿಶಾದ ಶಿಕ್ಷಣ ‘ಓ’ ಅನುಸಂಧಾನ (Sಔಂ) ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ. ಇದು ಅವರ ವೈಯಕ್ತಿಕ ಸಾಧನೆ ಮಾತ್ರವಲ್ಲ, ಕರ್ನಾಟಕದ ನ್ಯಾಯ ಪರಂಪರೆಗೆ ಸಂದ ಗೌರವವೂ ಆಗಿದೆ.
ನ್ಯಾಯದ ಬೆಳಕು ಎಂದೆಂದಿಗೂ ಬೆಳಗಲಿ
ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಜೀವನ ನಮಗೆ ಒಂದು ಮಹತ್ವದ ಸಂದೇಶವನ್ನು ನೀಡುತ್ತದೆ. ನ್ಯಾಯದ ಪರವಾಗಿ ಅಚಲವಾಗಿ ನಿಂತು, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದು, ಸಮಾಜಕ್ಕೆ ನ್ಯಾಯದ ಮೇಲಿನ ವಿಶ್ವಾಸವನ್ನು ಬಲಪಡಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಸೇವೆ ಸದಾ ಸ್ಮರಣೀಯ. ಅವರ ಜೀವನಯಾನವು ಕೇವಲ ಒಬ್ಬ ನ್ಯಾಯಾಧೀಶರ ಯಶೋಗಾಥೆಯಲ್ಲ, ಅದು ನ್ಯಾಯ, ಜ್ಞಾನ, ಮಾನವೀಯತೆ ಮತ್ತು ರಾಷ್ಟ್ರಸೇವೆಯ ಆದರ್ಶ ಪಥವಾಗಿದೆ. ಇಂತಹ ಮಹನೀಯರ ಸಾಧನೆಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿ ಬೆಳಗುತ್ತಲೇ ಇರುತ್ತವೆ. ಕಾನೂನು ಜ್ಞಾನದಿಂದ ಬಲಗೊಳ್ಳುತ್ತದೆ, ನ್ಯಾಯ ಮಾನವೀಯತೆಯಿಂದ ಪರಿಪೂರ್ಣಗೊಳ್ಳುತ್ತದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುತ್ತಾ, ಭಾರತೀಯ ಜ್ಞಾನಪರಂಪರೆಯ ಬೆಳಕನ್ನು ನ್ಯಾಯದ ದಾರಿಯಲ್ಲಿ ಹರಿಸಿದ ಕೃಷ್ಣ ದೀಕ್ಷಿತ್‌ರಂತಹ ನ್ಯಾಯಮೂರ್ತಿಗಳು ನ್ಯಾಯಾಂಗದ ನಿಜವಾದ ಆಸ್ತಿ. ಅವರ ತೀರ್ಪುಗಳು ಕೇವಲ ಕಾನೂನು ದಾಖಲೆಗಳಲ್ಲ, ಅವು ಚಿಂತನೆಗೆ ಆಹ್ವಾನ ನೀಡುವ ಬರಹಗಳು, ಮಾನವೀಯತೆಯನ್ನು ನೆನಪಿಸುವ ಸಂದೇಶಗಳು ಮತ್ತು ನ್ಯಾಯದ ಮೇಲಿನ ವಿಶ್ವಾಸವನ್ನು ಬಲಪಡಿಸುವ ದಾರಿದೀಪಗಳು. ಅವರ ನ್ಯಾಯಸೇವೆ, ಪಾಂಡಿತ್ಯ, ವಿನಯ ಮತ್ತು ಮಾನವೀಯ ಕಳಕಳಿ ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗುತ್ತದೆ. ಅಷ್ಟೇ ಅಲ್ಲ ಕರ್ನಾಟಕದ ಈ ಮೇರು ನ್ಯಾಯಮೂರ್ತಿಯ ಹೆಸರು ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಸದಾ ಗೌರವದಿಂದ ಸ್ಮರಿಸಲ್ಪಡುತ್ತದೆ.
ಇಂದು ಕೃಷ್ಣದೀಕ್ಷಿತ್ ಅವರ ಹುಟ್ಟುಹಬ್ಬ ಜೊತೆಗೆ ಸುಧೀರ್ಘ ನ್ಯಾಯಾಂಗ ಸೇವೆಯಿಂದ ನಿವೃತ್ತರಾಗುವ ಕಾಲಘಟ್ಟ. ಅವರು ಮುಂದಿನ ಜೀವನ ಸುಖಮಯವಾಗಿರಲಿ. ಅವರ ಮಾರ್ಗದರ್ಶನ ಸದಾ ಎಲ್ಲರಿಗೂ ಸಿಗುವಂತಾಗಲಿ. ತಾಯಿ ಚಾಮುಂಡೇಶ್ವರಿ ಅವರಿಗೆ ಆರೋಗ್ಯ ಆಯಸ್ಸು ಕರುಣಿಸಿ ಕಾಪಾಡಲಿ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
