ವ್ಯಕ್ತಿ ಸಾವನ್ನಪ್ಪಿದ ಬಳಿಕ ಆತನ ಸಾಲಕ್ಕೆ ಮಕ್ಕಳು ಹೊಣೆಯಾಗುತ್ತಾರೆಯೇ..? ಇಲ್ಲಿದೆ ನೋಡಿ ಮಾಹಿತಿ..
ಬೆಂಗಳೂರು: ಯಾವುದೇ ವ್ಯಕ್ತಿ ಸಾವನ್ನಪ್ಪಿದ ನಂತರ ಅವರ ಆಸ್ತಿ ಮತ್ತು ಸಾಲಗಳ ವಿಷಯದಲ್ಲಿ ಅನೇಕ ಸಂದೇಹಗಳು ಉದ್ಭವಿಸುತ್ತವೆ. ವ್ಯಕ್ತಿ ಸಾವನ್ನಪ್ಪಿದ ಬಳಿಕ ಆತನು ಮಾಡಿರುವ ಸಾಲ ಮಕ್ಕಳ ಮೇಲೆ ಬರುತ್ತದೆಯೇ? ಮಕ್ಕಳು ಆ ಸಾಲಕ್ಕೆ ಹೊಣೆಗಾರರಾಗುತ್ತಾರೆಯೇ..? ಎಂಬೆಲ್ಲಾ ಪ್ರಶ್ನೆಗಳು ಉದ್ಬವಿಸುತ್ತವೆ.
ಹೀಗಾಗಿ ಇಂತಹ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ…
ಮೃತ ವ್ಯಕ್ತಿಯ ಸಾಲಕ್ಕೆ ಮಕ್ಕಳು ಅಥವಾ ಕುಟುಂಬದವರು ಹೊಣೆಯಾಗುತ್ತಾರೆಯೇ ಎಂಬುದನ್ನು ಕಾನೂನು ಯಾವ ರೀತಿ ನಿರ್ಧರಿಸುತ್ತದೆ ಎಂಬುದನ್ನ ಇಲ್ಲಿ ವಿವರಿಸಲಾಗಿದೆ.
ಸಾಲವು ಎರಡು ವಿಧಗಳಾಗಿರುತ್ತದೆ. ಒಂದು ಸುರಕ್ಷಿತ ಸಾಲ. ಇದು ಭದ್ರತಾ ಆಸ್ತಿಯೊಂದಿಗೆ ಜೋಡಿಸಲ್ಪಟ್ಟಿದೆ. ಉದಾಹರಣೆಗೆ, ಹೋಮ್ ಲೋನ್, ಕಾರ್ ಲೋನ್, ಚಿನ್ನದ ಸಾಲ ಇತ್ಯಾದಿ.
ಎರಡನೇಯದ್ದು ಅಸುರಕ್ಷಿತ ಸಾಲ . ಇದು ಯಾವುದೇ ಆಸ್ತಿ ಭದ್ರತೆಯನ್ನು ಹೊಂದಿಲ್ಲ. ಉದಾಹರಣೆಗೆ, ವೈಯಕ್ತಿಕ ಸಾಲಗಳು, ಕ್ರೆಡಿಟ್ ಕಾರ್ಡ್ ಬಾಕಿಗಳು, ಶಿಕ್ಷಣ ಸಾಲಗಳು.
ಸುರಕ್ಷಿತ ಸಾಲದ ಸಂದರ್ಭದಲ್ಲಿ ಸಾಲಗಾರನ ಮರಣದ ನಂತರ, ಬ್ಯಾಂಕುಗಳು ಅವರ ಅಸ್ತಿಯನ್ನು (ಭೂಮಿ, ಮನೆ, ಚಿನ್ನ, ಇತ್ಯಾದಿ) ಮಾರಾಟ ಮಾಡಿ ಸಾಲವನ್ನು ವಸೂಲಿ ಮಾಡುತ್ತವೆ. ಆಸ್ತಿಯ ಮೌಲ್ಯ ಸಾಲದ ಮೊತ್ತಕ್ಕಿಂತ ಹೆಚ್ಚಿದ್ದರೆ, ಉಳಿದ ಹಣವನ್ನು ವಾರಸುದಾರರಿಗೆ ನೀಡಲಾಗುತ್ತದೆ. ಆದರೆ, ಆಸ್ತಿಯ ಮೌಲ್ಯ ಸಾಲಕ್ಕಿಂತ ಕಡಿಮೆಯಿದ್ದರೆ, ಉಳಿದ ಮೊತ್ತವನ್ನು ಸಾಮಾನ್ಯವಾಗಿ ರದ್ದುಗೊಳಿಸಲಾಗುತ್ತದೆ.
ಉದಾಹರಣೆಗೆ ಹೇಳುವುದಾದರೆ ವ್ಯಕ್ತಿಯು ₹1 ಲಕ್ಷ ಸಾಲ ತೆಗೆದುಕೊಂಡಿದ್ದರೆ ಮತ್ತು ಮರಣ ಸಮಯದಲ್ಲಿ ₹2 ಲಕ್ಷ ಮೌಲ್ಯದ ಆಸ್ತಿ ಬಿಟ್ಟಿದ್ದರೆ, ಬ್ಯಾಂಕು ₹1 ಲಕ್ಷ ವಸೂಲಿ ಮಾಡುತ್ತದೆ. ಆಸ್ತಿಯ ಮೌಲ್ಯ ₹75,000 ಮಾತ್ರ ಇದ್ದರೆ, ಬ್ಯಾಂಕು ಆ ಮೊತ್ತವನ್ನು ಮಾತ್ರ ಪಡೆದು, ಉಳಿದ ₹25,000 ರದ್ದು ಮಾಡುತ್ತದೆ.
ಇನ್ನು ಅಸುರಕ್ಷಿತ ಸಾಲದ ಸಂದರ್ಭದಲ್ಲಿ ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ಬಾಕಿ, ಅಥವಾ ಶಿಕ್ಷಣ ಸಾಲದಂತಹ ಅಸುರಕ್ಷಿತ ಸಾಲಗಳಿಗೆ ಯಾವುದೇ ಆಸ್ತಿ ಭದ್ರತೆ ಇರುವುದಿಲ್ಲ. ಹೀಗಾಗಿ, ಸಾಲಗಾರನ ಮರಣದ ನಂತರ, ಬ್ಯಾಂಕುಗಳು ಸಾಲವನ್ನು ವಾರಸುದಾರರಿಂದ ವಸೂಲಿ ಮಾಡಲು ಸಾಧ್ಯವಿಲ್ಲ.
ಯಾವಾಗ ವಾರಸುದಾರರು ಸಾಲಕ್ಕೆ ಹೊಣೆಯಾಗುತ್ತಾರೆ?
1. ಗ್ಯಾರಂಟರ್ ಅಥವಾ ಸಹ-ಸಾಲಗಾರರಾಗಿದ್ದರೆ: ಮೃತ ವ್ಯಕ್ತಿಯ ಕುಟುಂಬದವರು ಸಾಲದ ಒಪ್ಪಂದದಲ್ಲಿ ಗ್ಯಾರಂಟರ್ ಅಥವಾ ಕೋ-ಬಾರೋವರ್ ಆಗಿ ಸಹಿ ಹಾಕಿದ್ದರೆ, ಅವರು ಸಾಲವನ್ನು ತೀರಿಸಲು ಬಾಧ್ಯರಾಗುತ್ತಾರೆ. ಇಲ್ಲದಿದ್ದರೆ, ಅವರ ಮೇಲೆ ಯಾವುದೇ ಕಾನೂನುಬದ್ಧ ಒತ್ತಡವಿಲ್ಲ.
2. ಕ್ರೆಡಿಟ್ ಕಾರ್ಡ್ ಸಹ-ಹೊಂದಾಣಿಕೆದಾರರಾಗಿದ್ದರೆ: ಕುಟುಂಬದ ಸದಸ್ಯರು ಕ್ರೆಡಿಟ್ ಕಾರ್ಡ್ ಅಡಿಷನಲ್ ಕಾರ್ಡ್ ಹೋಲ್ಡರ್ ಆಗಿದ್ದರೆ, ಅವರು ಬಾಕಿ ಮೊತ್ತವನ್ನು ತೀರಿಸಬೇಕಾಗಬಹುದು.
ಬ್ಯಾಂಕುಗಳು ಒತ್ತಡ ಹೇರಿದರೆ ಏನು ಮಾಡಬೇಕು?
ಕೆಲವು ಬ್ಯಾಂಕುಗಳು ಕಾನೂನು ತಜ್ಞರಿಲ್ಲದ ಕುಟುಂಬದವರಿಗೆ ಸಾಲ ತೀರಿಸಲು ಒತ್ತಡ ಹಾಕಬಹುದು. ಅಂತಹ ಸಂದರ್ಭಗಳಲ್ಲಿ ಸಾಲದ ಒಪ್ಪಂದವನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ನೀವು ಗ್ಯಾರಂಟರ್ ಅಥವಾ ಸಹ-ಸಾಲಗಾರರಲ್ಲ ಎಂದು ಸ್ಪಷ್ಟಪಡಿಸಿ. ಅಗತ್ಯವಿದ್ದರೆ ವಕೀಲರ ಸಹಾಯ ಪಡೆಯಿರಿ.
ಸಾಮಾನ್ಯವಾಗಿ, ಮೃತ ವ್ಯಕ್ತಿಯ ಸಾಲಕ್ಕೆ ಮಕ್ಕಳು ಅಥವಾ ಕುಟುಂಬದವರು ಹೊಣೆಯಾಗುವುದಿಲ್ಲ. ಆದರೆ, ಅವರು ಸಾಲದ ಒಪ್ಪಂದದಲ್ಲಿ ಭಾಗಿಯಾಗಿದ್ದರೆ ಮಾತ್ರ ಹೊಣೆಬದ್ಧತೆ ಉಂಟಾಗುತ್ತದೆ. ಆದ್ದರಿಂದ, ಯಾವುದೇ ಸಾಲ ಒಪ್ಪಂದಕ್ಕೆ ಸಹಿ ಮಾಡುವ ಮೊದಲು ಎಚ್ಚರಿಕೆಯಿಂದ ಓದಿ, ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
