ಬುಕ್ ಮಾಡಿದ್ದು 1 ಲಕ್ಷ ಮೌಲ್ಯದ ಐಫೋನ್, ಬಂದಿದ್ದು ಆಯಿಲ್: ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಸಿಕ್ತು ಪರಿಹಾರ
ಮುಂಬೈ: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಶಾಪಿಂಗ್ ಗೀಳಿಗೆ ಬಿದ್ದು ಹಲವರು ಮೋಸ ಹೋಗಿರುವ ಪ್ರಕರಣಗಳು ನಮ್ಮ ಕಣ್ಣ ಮುಂದಿವೆ. ಅಂತೆಯೇ ಇಲ್ಲೊಬ್ಬರು ತಾವು ಬುಕ್ ಮಾಡಿದ್ದ 1ಲಕ್ಷ ರೂ. ಮೌಲ್ಯದ ಮೊಬೈಲ್ ಬದಲು ‘ಬಿಯರ್ಡ್ ಗ್ರೋತ್ ಆಯಿಲ್’ ಬಂದ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟುಲೇರಿ ಪರಿಹಾರವನ್ನ ಪಡೆದಿದ್ದಾರೆ.
ಹೌದು ಆನ್ ಲೈನ್ ನಲ್ಲಿ 1 ಲಕ್ಷಕ್ಕೂ ಅಧಿಕ ಮೊತ್ತ ಪಾವತಿಸಿ ಆಪಲ್ ಐಫೋನ್ ಆರ್ಡರ್ ಮಾಡಿದ್ದ ಗ್ರಾಹಕನಿಗೆ ಫೋನ್ ಬದಲಾಗಿ ‘ಬಿಯರ್ಡ್ ಗ್ರೋತ್ ಆಯಿಲ್’ ತಲುಪಿಸಿದ ಇ ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ ಮತ್ತು ಅದರ ಮಾರಾಟಗಾರ ಸಂಸ್ಥೆಗೆ ಮುಂಬೈನ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಗ್ರಾಹಕನಿಗೆ 1.11 ಲಕ್ಷ. ರೂ. ಹಣವನ್ನು ಬಡ್ಡಿ ಸಮೇತ ಮರುಪಾವತಿಸುವಂತೆ ಹಾಗೂ ಪರಿಹಾರವಾಗಿ 70,000 ಪಾವತಿಸುವಂತೆ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ:
2023ರ ಏಪ್ರಿಲ್ ನಲ್ಲಿ ಮುಂಬೈನ ಪೊವೈ ಮೂಲದ ವ್ಯಕ್ತಿಯೊಬ್ಬರು ಫ್ಲಿಪ್ಕಾರ್ಟ್ ಮೂಲಕ 1.11 ಲಕ್ಷ ಮೌಲ್ಯದ ಐಫೋನ್ 14 ಪ್ರೋ (iPhone 14 Pro) ಫೋನ್ ಆರ್ಡರ್ ಮಾಡಿದ್ದರು. ಆದರೆ ಆರ್ಡರ್ ಮಾಡಿದ್ದ ಚಾರ್ಜರ್ ಮತ್ತು ಮೊಬೈಲ್ ಕವರ್ ಸರಿಯಾಗಿ ತಲುಪಿತ್ತು. ಆದರೆ, ಮಾರನೇ ದಿನ ಬಂದ ಮುಖ್ಯ ಪಾರ್ಸೆಲ್ ನಲ್ಲಿ ಬಿಯರ್ಡ್ ಪ್ರೋತ್ ಆಯಿಲ್ ಬಾಟಲಿ ಬಂದಿತ್ತು ಆದರೆ ಮೊಬೈಲ್ ಮಾತ್ರ ಇರಲಿಲ್ಲ.
ಈ ವೇಳೆ ಶಾಕ್ ಆದ ವ್ಯಕ್ತಿ ತಕ್ಷಣವೇ ಪ್ಲಿಪ್ ಕಾರ್ಟ್ ಕಸ್ಟಮರ್ ಸಪೋರ್ಟ್ಗೆ ದೂರು ನೀಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು. ಆದರೆ ಸಂಸ್ಥೆ ಗ್ರಾಹಕನ ಸಮಸ್ಯೆಯನ್ನು ಬಗೆಹರಿಸದೆ, ಯಾವುದೇ ಹಣ ಮರುಪಾವತಿ ಅಥವಾ ಬದಲಿ ಫೋನ್ ನೀಡದೆ ಮೇಲಿಂದ ಮೇಲೆ ದೂರನ್ನು ‘ಪರಿಹರಿಸಲಾಗಿದೆ’ ಎಂದು ತೋರಿಸಿ ಮುಚ್ಚಿಹಾಕಿತ್ತು. ಇದರಿಂದ ಮೋಸ ಹೋದ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದು ಇದೀಗ ಅವರಿಗೆ ನ್ಯಾಯ ಸಿಕ್ಕಿದೆ.
ಪ್ರಕರಣದ ವಿಚಾರಣೆ ನಡೆಸಿದ ಮುಂಬೈ ಉಪನಗರ ಜಿಲ್ಲಾ ಗ್ರಾಹಕ ಆಯೋಗವು, ಗ್ರಾಹಕರ ದೂರುಗಳನ್ನು ಯಾವುದೇ ಪರಿಹಾರ ನೀಡದೆ ಪದೇ ಪದೇ ಮುಚ್ಚಿಹಾಕುವುದು “ಅನುಚಿತ ವ್ಯಾಪಾರ ಪ್ರಕ್ರಿಯೆ” ಮತ್ತು “ಸೇವೆಯಲ್ಲಿನ ಕೊರತೆ” ಎಂದು ಹೇಳಿದೆ.
ಗ್ರಾಹಕರಿಂದ ಹಣ ಪಡೆದು ಸರಕು ತಲುಪಿಸುವ ವೇದಿಕೆ ಒದಗಿಸಿದ ಮೇಲೆ ಪ್ಲಿಪ್ಕಾರ್ಟ್ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಫ್ಳಿಪ್ ಕಾರ್ಟ್ ಮತ್ತು ಮಾರಾಟಗಾರ ಸಂಸ್ಥೆಯಾದ ‘ಇಂಟರ್ನ್ಯಾಷನಲ್ ವ್ಯಾಲ್ಯೂ ರಿಟೇಲ್ ಪ್ರೈವೇಟ್ ಲಿಮಿಟೆಡ್’ ಜಂಟಿಯಾಗಿ ಈ ನಷ್ಟವನ್ನು ಭರಿಸಬೇಕು ಎಂದು ಜಿಲ್ಲಾ ಗ್ರಾಹಕ ಆಯೋಗವು ಆದೇಶಿಸಿತು.
ಮೊಬೈಲ್ ಬುಕ್ ಮಾಡುವಾಗ ಗ್ರಾಹಕ ಪಾವತಿಸಿದ್ದ 1,11,793 ಮೂಲ ಮೊತ್ತವನ್ನು 2023 ರ ಏಪ್ರಿಲ್ 22 ರಿಂದ ಅನ್ವಯವಾಗುವಂತೆ ಶೇಕಡಾ 9 ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಮರುಪಾವತಿಸಬೇಕು, ಇದರ ಜೊತೆಗೆ ಮಾನಸಿಕ ಕಿರುಕುಳ ನೀಡಿದ್ದಕ್ಕಾಗಿ 50,000 ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 20,000 ಸೇರಿದಂತೆ ಒಟ್ಟು 70,000 ಹಣವನ್ನು 45 ದಿನಗಳ ಒಳಗಾಗಿ ಪಾವತಿಸಬೇಕು ಎಂದು ಕೋರ್ಟ್ ಸೂಚಿಸಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
