ಅಪರಾಧಿಯ ಜೀವಾವಧಿ ಶಿಕ್ಷೆ ರದ್ದು: 13 ವರ್ಷ ಬಳಿಕ ವ್ಯಕ್ತಿಗೆ ಬಿಡುಗಡೆ ಭಾಗ್ಯ…!
ಬೆಂಗಳೂರು: ತನ್ನ ಸಹೋದರಿಯ ಗಂಡನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಗೆ ಇದೀಗ ಬಿಡುಗಡೆ ಭಾಗ್ಯ ಸಿಕ್ಕಿದೆ. ಹೌದು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಪಡಿಸಿರುವ ಹೈಕೋರ್ಟ್ ಆತನ ಬಿಡುಗಡೆಗೆ ನಿರ್ದೇಶನ ನೀಡಿದೆ.
ತನ್ನ ಸಹೋದರಿಯ ಗಂಡನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಯಾದಗಿರಿಯ ಚನ್ನಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಸುನಿಲ್ದತ್ ಯಾದವ್ ಮತ್ತು ರಾಮಚಂದ್ರ ಡಿ.ಹುದ್ದಾರ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
2011 ರಲ್ಲಿ ನಡೆದ ಕೊಲೆ ಸಂದರ್ಭದಲ್ಲಿ ಅಪ್ರಾಪ್ತನಾಗಿದ್ದರೂ ವಯಸ್ಕನೆಂದು ಪರಿಗಣಿಸಿ ವಿಚಾರಣೆ ನಡೆಸಿ ಜೀವಾವಧಿ ಶಿಕ್ಷೆ ವಿಧಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಪಡಿಸಿದ ನ್ಯಾಯಪೀಠವು 13 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ ನಂತರ ಇದೀಗ ಬಿಡುಗಡೆಗೆ ಸೂಚನೆ ನೀಡಿದೆ. ಅಲ್ಲದೆ, ಆರೋಪಿ ಮಾಡಿದ ಕೃತ್ಯಕ್ಕೆ ಶಿಕ್ಷೆ ವಿಧಿಸಿರುವುದು ಸರಿಯಾಗಿದ್ದರೂ, ಬಾಲಾಪರಾಧಿಯಾಗಿರುವುದರಿಂದ ಶಿಕ್ಷೆ ರದ್ದುಪಡಿಸುತ್ತಿದ್ದು, 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಬಾಲ ನ್ಯಾಯಮಂಡಳಿಗೆ ಸೂಚನೆ ನೀಡಿದೆ.
‘ಬಾಲಾಪರಾಧಿಯನ್ನು ವಯಸ್ಕನೆಂದು ತಪ್ಪಾಗಿ ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿರುವ ಸೆಷನ್ಸ್ ನ್ಯಾಯಾಲಯ ಕ್ರಮ ಕಾನೂನು ಬಾಹಿರ ಎಂದು ತಿಳಿಸಿದೆ. ಅರ್ಜಿದಾರರು ಕೊಲೆ ಆರೋಪದಲ್ಲಿಈಗಾಗಲೇ 13 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಆದ್ದರಿಂದ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ- 2000ರ ಸೆಕ್ಷನ್ 15ರಡಿ ಮತ್ತೆ ಬಾಲ ನ್ಯಾಯಮಂಡಳಿ ಹೊಸದಾಗಿ ವಿಚಾರಣೆ ನಡೆಸುವ ಅಗತ್ಯವಿಲ್ಲ. ಕರ್ನಾಟಕ ರಾಜ್ಯ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ನಿಯಮ 6ರ ಪ್ರಕಾರ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಮಂಡಳಿಗೆ ನಿರ್ದೇಶನ ನೀಡಿದೆ.
ಈ ಪ್ರಕರಣದಲ್ಲಿ ವಿಚಾರಣೆ ಆರಂಭದಿಂದಲೂ ದೋಷಪೂರಿತವಾಗಿದೆ. ಅಧಿಕಾರಿಗಳು ನಿಗದಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮೊದಲ ಹಂತದಲ್ಲಿ ಬಾಲಾಪರಾಧಿಗಳನ್ನು ಗುರುತಿಸಬೇಕು. ಅಪರಾಧಿಯ ವಯಸ್ಸಿನ ಕುರಿತು ಯಾವುದೇ ಸಂಶಯ ಎದುರಾದಾಗ ಮ್ಯಾಜಿಸ್ಪ್ರೇಟ್ ನ್ಯಾಯಾಲಯ ಬಂಧನಕ್ಕೆ ಆದೇಶಿಸುವಾಗ ಮತ್ತೊಮ್ಮೆ ಪರಿಶೀಲನೆಗೊಳಪಡಿಸಬೇಕು’ ಎಂದು ನ್ಯಾಯಪೀಠ ಸಲಹೆ ನೀಡಿದೆ
ಅರ್ಜಿದಾರ ಚನ್ನಪ್ಪ ಅವರ ಸಹೋದರಿಯನ್ನು ಭೀಮರಾಯ ಎಂಬುವರು ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದರು. ಇದರಿಂದ ಕೋಪಗೊಂಡಿದ್ದ 16 ವರ್ಷದ ಚೆನ್ನಪ್ಪ 2011 ರ ಏಪ್ರಿಲ್ನಲ್ಲಿ ಯಾದಗಿರಿ ಜಿಲ್ಲೆ ಹಳಿಸಗರದಲ್ಲಿ ಮತ್ತೊಬ್ಬ ಆರೋಪಿ ಸಾಯಿಬಣ್ಣ ಎಂಬುವರೊಂದಿಗೆ ಸೇರಿ ಭೀಮರಾಯನನ್ನು ಕೊಲೆ ಮಾಡಿದ್ದರು. ಘಟನೆಯಲ್ಲಿ ಮತ್ತೊಬ್ಬ ಆರೋಪಿಯಾಗಿದ್ದ ಸಾಯಿಬಣ್ಣ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ಮೃತಪಟ್ಟಿದ್ದರು. ಹೀಗಾಗಿ, ಸಾಯಿಬಣ್ಣ ವಿರುದ್ಧದ ಆರೋಪ ಕೈಬಿಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಯಾದಗಿರಿ ಸೆಷನ್ಸ್ ನ್ಯಾಯಾಲಯ, ಚನ್ನಪ್ಪನನ್ನು ವಯಸ್ಕನೆಂದು ಪರಿಗಣಿಸಿ 2018 ರಲ್ಲಿ ಜೀವಾವಧಿ ಶಿಕ್ಷೆ ಮತ್ತು 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿತ್ತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
