ಚುನಾವಣಾ ಆಯೋಗಕ್ಕಿದೆ ಫಾರಂ 6 ಪರಿಶೀಲಿಸುವ ಅಧಿಕಾರ- ಸುಪ್ರೀಂ ಕೋರ್ಟ್
ನವದೆಹಲಿ: ಎಸ್ಐಆರ್ ನಡೆಸುವ ಚುನಾವಣಾ ಆಯೋಗದ ನಿರ್ಧಾರದ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ಕುರಿತ ಅಂತಿಮ ವಿಚಾರಣೆಯನ್ನುಆರಂಭಿಸಿದ ಸುಪ್ರೀಂಕೋರ್ಟ್, ‘ಫಾರಂ 6ರಲ್ಲಿ (ತಾನು ಮತದಾರ ಎಂಬ ಬಗ್ಗೆ ವ್ಯಕ್ತಿಯು ನೋಂದಣಿ ಮಾಡಿಕೊಳ್ಳಲು ಭರ್ತಿ ಮಾಡಬೇಕಾದ ನಮೂನೆ) ನಮೂದು ಮಾಡಲಾದ ಮಾಹಿತಿಗಳು ಸರಿ ಇದೆಯೇ ಇಲ್ಲವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ ಮಾಲ್ಯಾ ಬಾಗ್ಚಿ ಅವರ ಪೀಠವು , ದೇಶದಲ್ಲಿ ಈ ಹಿಂದೆ ಎಂದೂ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ನಡೆಸಿಲ್ಲ ಎನ್ನುವ ಕಾರಣಕ್ಕಾಗಿ ವಿವಿಧ ರಾಜ್ಯಗಳಲ್ಲಿ ಚುನಾವಣಾ ಆಯೋಗವು ಎಸ್ಐಆರ್ ಪ್ರಕ್ರಿಯೆ ನಡೆಸಲು ಈಗ ತೆಗೆದುಕೊಂಡಿರುವ ನಿರ್ಧಾರದ ಸಾಂವಿಧಾನಿಕ ಸಿಂಧುತ್ವವನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿತು.
ಅರ್ಜಿಯೊಂದರ ಕುರಿತು ಪ್ರತಿಕ್ರಿಯಿಸಿದ ಪೀಠವು, ‘ವ್ಯಕ್ತಿ ಸಲ್ಲಿಸಿದ ಫಾರಂ 6 ಅನ್ನು ಸ್ವೀಕರಿಸುವುದಕ್ಕೆ ಮತ್ತು ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು, ನಿಮ್ಮ ಪ್ರಕಾರ ಚುನಾವಣಾ ಆಯೋಗವು ಅಂಚೆ ಕಚೇರಿಯೇ?’ ಎಂದು ಪ್ರಶ್ನಿಸಿತು
ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್, ‘ಪ್ರಾಥಮಿಕವಾಗಿ ಆಯೋಗದ ಕೆಲಸ ಅಂಚೆ ಕಚೇರಿಯದ್ದೇ ಹೌದು. ಆದರೆ, ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಅಲ್ಲವಷ್ಟೆ’ ಎಂದರು. ಇದಕ್ಕೆ ಉತ್ತರಿಸಿದ ಪೀಠ, ‘ನಮೂನೆಯಲ್ಲಿನ ಮಾಹಿತಿಗಳನ್ನು ಸರಿಪಡಿಸುವುದಕ್ಕೆ ಆಯೋಗಕ್ಕೆ ಸಾಂವಿಧಾನಿಕ ಹಕ್ಕು ಇದೆ’ ಎಂದಿತು. ಅಂತಿಮ ವಿಚಾರಣೆಯನ್ನು ಮುಂದೂಡಿಕೆ ಮಾಡಿತು.
ಹಾಗೆಯೇ ಇದೇ ವೇಳೆ ಮೂರು ರಾಜ್ಯಗಳ ಅರ್ಜಿ ವಿಚಾರಣೆಗೆ ನ್ಯಾಯಪೀಠ ದಿನಾಂಕ ನಿಗದಿ ಮಾಡಿತು. ತಮಿಳುನಾಡು ಮತ್ತು ಕೇರಳದಲ್ಲಿ ನಡೆಸುತ್ತಿರುವ ಎಸ್ಐಆರ್ ಬಗ್ಗೆ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಡಿಸೆಂಬರ್ 1 ಒಳಗೆ ಪ್ರತಿಕ್ರಿಯಿಸಿ ಎಂದು ಆಯೋಗಕ್ಕೆ ಪೀಠ ಸೂಚಿಸಿತು. ಮುಂದಿನ ವಿಚಾರಣೆ ಡಿ.4ಕ್ಕೆ ನಡೆಯಲಿದೆ. ಕೇರಳದ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
