23/04/2026

Law Guide Kannada

Online Guide

ಅರ್ಜಿ ತುಂಬಿಸಿಲ್ಲ ಅಂತಾ ಪರಿಹಾರ ನಿರಾಕರಿಸಿದ ವಿಮಾ ಕಂಪನಿ: ಮಹತ್ವದ ತೀರ್ಪು ಕೊಟ್ಟು ನ್ಯಾಯ ಒದಗಿಸಿದ ರಾಷ್ಟ್ರೀಯ ಗ್ರಾಹಕ ಆಯೋಗ

ಬೆಂಗಳೂರು: ಅರ್ಜಿ ಸಂಪೂರ್ಣವಾಗಿ ತುಂಬಿಸಿಲ್ಲ ಅಂತಾ ವಿಮಾ ಕಂಪನಿ ಪರಿಹಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಿದ್ದ ವಿಮಾ ಪಾಲಿಸಿದಾರರಿಗೆ ರಾಷ್ಟ್ರೀಯ ಗ್ರಾಹಕ ಆಯೋಗ: ಮಹತ್ವದ ನ್ಯಾಯ ಒದಗಿಸಿ ಮಹತ್ವದ ತೀರ್ಪು ನೀಡಿದೆ.

ಹೌದುಮ ವಿಮಾ ಪಾಲಿಸಿದಾರರು ಅರ್ಜಿ ಸಲ್ಲಿಸುವಾಗ ಕಾಲಂನ್ನು ಸಂಪೂರ್ಣವಾಗಿ ತುಂಬಿಸಿಲ್ಲ ಎಂಬ ಕಾರಣಕ್ಕೆ ಪರಿಹಾರ ನಿರಾಕರಿಸುವಂತಿಲ್ಲ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಚೋಟಿ ದೇವಿ ವಿರುದ್ಧ ಭಾರತಿ ಅಕ್ಷಾ ಲೈಫ್ ಇನ್ಸೂರೆನ್ಸ್ ಕಂ. ಲಿ.” ಪ್ರಕರಣದಲ್ಲಿ ಡಾ.ಇಂದ್ರಜಿತ್ ಸಿಂಗ್ ಮತ್ತು ಡಾ. ಸುಧೀರ್ ಕುಮಾರ್ ಜೈನ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.

ಏನಿದು ಪ್ರಕರಣ..
ಚೋಟಿ ದೇವಿ ಅವರ ಮಗ ಡಿಸೆಂಬರ್ 12, 2015ರಲ್ಲಿ 125 ಲಕ್ಷ (20 ವರ್ಷಗಳು, ಪ್ರೀಮಿಯಂ 110,900) ಜೀವ ವಿಮಾ ಪಾಲಿಸಿ ಖರೀದಿಸಿದ್ದರು. ಜನವರಿ 2017 ರಲ್ಲಿ ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ವಿಮಾ ಪ್ರಸ್ತಾವನೆ ನಮೂನೆಯಲ್ಲಿ ಅಸ್ತಿತ್ವದಲ್ಲಿರುವ 157 ಮರೆಮಾಚಲಾಗಿದೆ ಎಂದು ಆರೋಪಿಸಿ ಭಾರತಿ ಅಕ್ಷಾ ಪರಿಹಾರ ನಿರಾಕರಿಸಿತ್ತು. ಇನ್ಯಾವುದಾದರೂ ವಿಮಾ ಪಾಲಿಸಿಗಳಿವೆಯೇ ಎನ್ನುವ ಕಾಲಂನಲ್ಲಿ ಮಾಹಿತಿಯನ್ನು ನೀಡದೆ ಮರೆ ಮಾಚಲಾಗಿದೆ ಎಂದು ಆರೋಪಿಸಿ ಭಾರತಿ ಅಕ್ಕಾ ಕಂಪೆನಿ ಪರಿಹಾರ ನಿರಾಕರಿಸಿತ್ತು.

ಅರ್ಜಿಯನ್ನು ಪೂರ್ತಿಯಾಗಿ ತುಂಬಿಸಿಲ್ಲ ಮತ್ತು ಅರ್ಜಿದಾರರು ಸ್ಪಷ್ಟ ಹಾಗೂ ಸಮರ್ಪಕ ಮಾಹಿತಿ ನೀಡಿಲ್ಲ ಎಂಬ ಕಾರಣಕ್ಕೆ ವಿಮಾ ಪರಿಹಾರವನ್ನು ನೀಡಲು ಭಾರತಿ ಅಕ್ಕಾ ಲೈಫ್ ಇನ್ಸೂರೆನ್ಸ್ ಕಂಪೆನಿ ನಿರಾಕರಿಸಿತ್ತು. ಈ ನಿರ್ಧಾರವನ್ನು ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವೂ ಅನುಮೋದಿಸಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಚೋಟಿ ದೇವಿ ರಾಷ್ಟ್ರೀಯ ಆಯೋಗದ ಮೆಟ್ಟಿಲೇರಿದ್ದರು.

ಅರ್ಜಿಯನ್ನು ವಿಮೆ ಪಡೆದ ವ್ಯಕ್ತಿ ಖುದ್ದು ಭರ್ತಿ ಮಾಡಿಲ್ಲ. ಕಂಪೆನಿಯ ಪ್ರತಿನಿಧಿ ಅಥವಾ ಅಧಿಕಾರಿ ಇಂಗ್ಲಿಷ್ ನಲ್ಲಿ, ಡಿಜಿಟಲ್ ರೂಪದಲ್ಲಿ ಭರ್ತಿ ಮಾಡಿದ್ದರು. ವಿಮೆದಾರರು ‘ಇನ್ನಾವುದೇ ಪಾಲಿಸಿ ಹೊಂದಿದ್ದಾರೆಯೇ ಎಂಬ ಬಾಕ್ಸ್ನಲ್ಲಿ ಮಾಹಿತಿ ತುಂಬಿಸದೆ ಖಾಲಿ ಬಿಡಲಾಗಿತ್ತು. ಸ್ವತಃ ಭಾರತಿ ಅಕ್ಕಾ ಕಂಪೆನಿಯೇ ಚೋಟಾ ದೇವಿಯವರಿಗೆ ಪಾಲಿಸಿ ನೀಡಿದ್ದರಿಂದ ಆ ಮಾಹಿತಿ ಕಂಪೆನಿಗೆ ಮೊದಲೇ ಗೊತ್ತಿತ್ತು ಎಂದು ಚೋಟಾ ದೇವಿಯ ಕುಟುಂಬ ಸದಸ್ಯರು ವಾದಿಸಿದರು.

ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠವು, ಮೇಲ್ಮನವಿದಾರರ ವಾದದಲ್ಲಿ ಹುರುಳಿರುವುದು ಕಂಡುಬಂದಿದೆ. ವಿಮಾ ಅರ್ಜಿಯಲ್ಲಿ ಕಾಲಂ ತುಂಬಿಸದೆ ಖಾಲಿ ಬಿಡಲಾಗಿದೆ. ಆದರೆ, ಅದು ತಪ್ಪು ಮಾಹಿತಿಗೆ ಸಮನಾಗದು. ವಿಮಾ ಕಂಪೆನಿಗೆ ಮಾಹಿತಿಯೇ ಮುಖ್ಯವಾಗಿದ್ದರೆ ಪಾಲಿಸಿ ನೀಡುವ ಮೊದಲೇ ಆ ಬಿಟ್ಟ ಸ್ಥಳವನ್ನು ತುಂಬಿಸುವಂತೆ ಸೂಚಿಸಬೇಕಿತ್ತು ಎಂದು ನ್ಯಾಯಪೀಠ ಹೇಳಿದೆ.

ವಾದ ಆಲಿಸಿದ ಎನ್ ಸಿಡಿಆರ್ಸಿ ಕಾಲಮ್ ಖಾಲಿ ಬಿಟ್ಟಿರುವುದು ಮಾಹಿತಿ ಮರೆಮಾಚುವ ಉದ್ದೇಶದಿಂದಲ್ಲ. ಅರ್ಜಿಯನ್ನು ಟೈಪ್ ಮಾಡಿ ಭರ್ತಿ ಮಾಡಲಾಗಿದೆ. ಇದು ಕಂಪೆನಿಯ ಪ್ರತಿನಿಧಿ ಅಥವಾ ಅಧಿಕಾರಿ ಭರ್ತಿ ಮಾಡಿದ್ದಾರೆಯೇ ವಿನಾ ಮೃತರಾಗಿರುವ ವಿಮಾದಾರರಲ್ಲ ಎಂದಿತು. ಇದೇ ವೇಳೆ, ರಾಜ್ಯ ಆಯೋಗದ ಆದೇಶ ರದ್ದುಗೊಳಿಸಿದ ರಾಷ್ಟ್ರೀಯ ಆಯೋಗ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ದಿನದಿಂದ ಅನ್ವಯವಾಗುವಂತೆ ವಾರ್ಷಿಕ ಶೇ 9ರಷ್ಟು ಬಡ್ಡಿಯೊಂದಿಗೆ 45 ದಿನಗಳಲ್ಲಿ ವಿಮಾ ಮೊತ್ತ ಪಾವತಿಸುವಂತೆ ವಿಮಾ ಕಂಪನಿಗೆ ನಿರ್ದೇಶನ ನೀಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.