23/04/2026

Law Guide Kannada

Online Guide

ಇಲ್ಲದಿರುವುದು ಅಪಘಾತಕ್ಕೆ ಕಾರಣ ಎಂದು ಊಹಿಸಲು ಸಾಧ್ಯವಿಲ್ಲ: ಬಡ್ಡಿ ಸೇರಿಸಿ ದುಡ್ಡು ಕೊಡಿ – ಹೈಕೋರ್ಟ್ ಸೂಚನೆ

ಬೆಂಗಳೂರು: ಚಾಲನಾ ಪರವಾನಗಿ (ಡಿಎಲ್) ಇಲ್ಲದಿರುವುದು ಅಪಘಾತಕ್ಕೆ ಕಾರಣ ಎಂದು ಊಹಿಸಲು ಸಾಧ್ಯವಿಲ್ಲ. ವಿಮಾ ಕಂಪನಿಯು ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ಹೆಚ್ಚುವರಿಯಾಗಿ 2,79,000 ರೂಪಾಯಿ ಪರಿಹಾರವನ್ನು ಶೇ. 6 ರಷ್ಟು ಬಡ್ಡಿಯೊಂದಿಗೆ ನೀಡಬೇಕೆಂದು ಕರ್ನಾಟಕ ಹೈಕೋರ್ಟ್ ಆದೇಶಿಸಿ ತೀರ್ಪು ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ಪೀಠವು ಈ ಆದೇಶ ಹೊರಡಿಸಿದೆ. ಏಪ್ರಿಲ್ 25, 2018ರಂದು ತಿಪಟೂರು ತಾಲೂಕಿನ ಹೊನ್ನವಳ್ಳಿ ಗ್ರಾಮದ ರಂಜಿತ್ ಎಂಬುವವರಿಗೆ ಬೈಕ್ ಸವಾರನ ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಅಪಘಾತಕ್ಕೀಡಾಗಿ ರಂಜಿತ್ ಗೆ ಗಂಭೀರ ಗಾಯವಾಗಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ, ತಿಪಟೂರು ಅಪಘಾತ ನ್ಯಾಯಾಧಿಕರಣವು ವಾಹನದ ಮಾಲೀಕನಿಗೆ ಚಾಲನ ಪರವಾನಗಿ ಇಲ್ಲದ ಕಾರಣ 6,22,295 ರೂಪಾಯಿ ಪರಿಹಾರ ನೀಡುವಂತೆ ಆದೇಶ ಹೊರಡಿಸಿತ್ತು. ಆದರೆ, ಹೈಕೋರ್ಟ್ ಈ ಆದೇಶವನ್ನು ಮಾರ್ಪಡಿಸಿ, ರಂಜಿತ್ ಗೆ ಹೆಚ್ಚಿನ ಪರಿಹಾರವನ್ನು ನೀಡಲು ಆದೇಶಿಸಿದೆ.

ಘಟನೆ ನಡೆದ ದಿನದಲ್ಲಿ ರಂಜಿತ್ ಅವರ ಚಾಲನಾ ಪರವಾನಗಿ (DL) ಅವಧಿ ಮುಗಿದು ಎಂಟು ದಿನಗಳಾಗಿದ್ದವು. ನ್ಯಾಯಾಧಿಕರಣವು ಪರವಾನಗಿ ಅವಧಿ ಮುಗಿದಿದ್ದರಿಂದ ಬಸವರಾಜಪ್ಪ ಅವರೇ ಪರಿಹಾರ ನೀಡಬೇಕೆಂದು ತೀರ್ಪು ನೀಡಿತ್ತು. ಆದರೆ, ರಂಜಿತ್ ಅವರು ನ್ಯಾಯಾಧಿಕರಣ ನೀಡಿದ ಪರಿಹಾರ ಸಾಲದು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ಜೊತೆಗೆ, ಬಸವರಾಜಪ್ಪ ಅವರ ಕುಟುಂಬದವರು ಕೂಡ ನ್ಯಾಯಾಧಿಕರಣದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ಪೀಠವು, ಮೋಟಾರು ವಾಹನ ಕಾಯ್ದೆಯ ಅನ್ವಯ, ಚಾಲನಾ ಪರವಾನಗಿಯ ಅವಧಿ ಮುಗಿದರೂ, ಅದನ್ನು ನವೀಕರಿಸಲು 30 ದಿನಗಳ ಗಡುವು ಇರುತ್ತದೆ ಎಂದು ಅಭಿಪ್ರಾಯಪಟ್ಟಿತು. ಈ ನಿಯಮದ ಪ್ರಕಾರ, ರಂಜಿತ್ ಅವರ ಪರವಾನಗಿ ಅವಧಿ ಮುಗಿದು ಎಂಟು ದಿನಗಳಾಗಿದ್ದರೂ, ಅದು ಇನ್ನೂ 30 ದಿನಗಳ ಒಳಗೆ ಬರುತ್ತದೆ. ಆದ್ದರಿಂದ, ಅಪಘಾತದ ಸಮಯದಲ್ಲಿ ಅವರು ಪರವಾನಗಿ ಹೊಂದಿಲ್ಲ ಎಂಬ ನ್ಯಾಯಾಧಿಕರಣದ ತೀರ್ಪು ಸರಿಯಲ್ಲ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿತು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದಾಯ ಅಂದಾಜು ಪಟ್ಟಿಯ ಪ್ರಕಾರ, ರಂಜಿತ್ ಅವರು ಕೃಷಿ ಕಾರ್ಮಿಕರಾಗಿದ್ದು, ತಿಂಗಳಿಗೆ 12,500 ರೂಪಾಯಿ ಸಂಪಾದನೆ ಮಾಡುತ್ತಿದ್ದರು ಎಂಬುದನ್ನು ಗಮನಿಸಿದ ನ್ಯಾಯಪೀಠವು ಇದರ ಆಧಾರದ ಮೇಲೆ, ವಿಮಾ ಕಂಪನಿಯು ರಂಜಿತ್ ಗೆ ಹೆಚ್ಚುವರಿಯಾಗಿ 2,79,000 ರೂಪಾಯಿ ಪರಿಹಾರವನ್ನು ಶೇ. 6 ರಷ್ಟು ಬಡ್ಡಿಯೊಂದಿಗೆ ನೀಡಬೇಕೆಂದು ಆದೇಶ ಹೊರಡಿಸಿತು. ಬಸವರಾಜಪ್ಪ ಅವರ ಕುಟುಂಬವು ಈಗಾಗಲೇ ಠೇವಣಿ ಇರಿಸಿದ್ದ ಪರಿಹಾರದ ಮೊತ್ತವನ್ನು ಅವರಿಗೆ ಹಿಂದಿರುಗಿಸುವಂತೆ ನ್ಯಾಯಾಲಯ ಆದೇಶಿಸಿತು.

ಇದಲ್ಲದೆ, ಕೇವಲ ಚಾಲನಾ ಪರವಾನಗಿ ಇಲ್ಲದಿರುವುದು ಅಪಘಾತಕ್ಕೆ ಕಾರಣ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ನ ‘ಸುಧೀರ್ ಕುಮಾರ್ ರಾಣಾ ವರ್ಸಸ್ ಸುರೇಂದ್ರ ಸಿಂಗ್ ಮತ್ತು ಇತರರು’ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠವು, ಡಿಎಲ್ ಇಲ್ಲದಿರುವುದು ಅಪಘಾತಕ್ಕೆ ಕಾರಣ ಎಂದು ಊಹಿಸಲು ಸಾಧ್ಯವಿಲ್ಲ. ಅಪಘಾತಕ್ಕೆ ನಿರ್ಲಕ್ಷ್ಯವೇ ಕಾರಣ ಎಂಬುದನ್ನು ಪ್ರತ್ಯೇಕವಾಗಿ ಸಾಬೀತುಪಡಿಸಬೇಕಾಗುತ್ತದೆ ಎಂದು ಹೇಳಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.