23/04/2026

Law Guide Kannada

Online Guide

ಯೂಟ್ಯೂಬ್ ಚಾನೆಲ್ ಆರಂಭಕ್ಕೆ ಇನ್ಮುಂದೆ ‘ಲೈಸೆನ್ಸ್’ ಕಡ್ಡಾಯ

ಬೆಂಗಳೂರು : ರಾಜ್ಯದಲ್ಲಿ ಇನ್ಮುಂದೆ ಯಾರದರೂ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಬೇಕಾದರೆ ಇನ್ಮುಂದೆ ಪರವಾನಗಿ ಪಡೆಯಬೇಕಾಗುತ್ತದೆ. ಹೌದು ‘ಯೂಟ್ಯೂಬ್ ಚಾನೆಲ್’ ಆರಂಭಕ್ಕೆ ‘ಲೈಸೆನ್ಸ್’ ಕಡ್ಡಾಯಗೊಳಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.

ಈ ವಿಚಾರದ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿಕೆ ನೀಡಿದ್ದು, ಯೂ ಟ್ಯೂಬ್ ಚಾನಲ್ ಗಳ ಹಾವಳಿ ತಡೆಯಲು ಇವರಿಗೂ ಲೈಸೆನ್ಸ್ ಕಡ್ಡಾಯಗೊಳಿಸಬೇಕು ಎಂಬ ಬೇಡಿಕೆ ಬಂದಿದೆ. ಈ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಅನ್ನು ಉದ್ಘಾಟಿಸಿ, ಲೋಗೋ ಬಿಡುಗಡೆ ಮಾಡಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿಯಲು ನಮ್ಮ ಸರ್ಕಾರ ಸದಾ ಸಿದ್ಧವಾಗಿದೆ. ಎಂದಿಗೂ ಇದಕ್ಕೆ ಧಕ್ಕೆ ತರುವ ಕೆಲಸವನ್ನು ನಾನೂ ಮಾಡಿಲ್ಲ, ನಮ್ಮ ಸರ್ಕಾರವೂ ಮಾಡುವುದಿಲ್ಲ. ಬ್ಲಾಕ್ ಮೇಲ್ ಮತ್ತು ಕೀಳು ಮಟ್ಟದ ಪ್ರಾಕ್ಟೀಸ್ ಮಾಡುತ್ತಿರುವ ಯೂಟ್ಯೂಬ್ ಚಾನಲ್ ಗಳು ಸಮಾಜಕ್ಕೆ ಶಾಪ ಆಗಿವೆ. ಹೀಗಾಗಿ ಯು ಟ್ಯೂಬ್ ಚಾನಲ್ ಗಳ ಹಾವಳಿ ತಡೆಯಲು ಇವರಿಗೂ ಲೈಸೆನ್ಸ್ ಕಡ್ಡಾಯಗೊಳಿಸಬೇಕು ಎಂದು ಸಂಘವು ಮನವಿ ಮಾಡಿದ್ದು ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಹಾಗೆಯೇ ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಮಾಧ್ಯಮಗಳಿಗೂ ನನ್ನ ಬಗ್ಗೆ ಹೀಗೇ ಬರೆಯಿರಿ, ಹಾಗೇ ಬರೆಯಿರಿ ಎಂದು ಯಾವತ್ತೂ ಹೇಳಿಲ್ಲ. ನನ್ನ ಬಗ್ಗೆ ಸುಳ್ಳುಗಳನ್ನು ಸತತವಾಗಿ ತೋರಿಸುವಾಗಲೂ ಯಾಕೆ ಹೀಗೆ ತೋರಿಸ್ತೀರಿ? ಎಂದು ಯಾರಿಗೂ ಕೇಳಿಲ್ಲ. ನಿಮ್ಮಿಂದ ನನಗೆ ಏನೇನೂ ಅಪೇಕ್ಷೆ ಇಲ್ಲ. ಸಾಧ್ಯವಾದರೆ ಸತ್ಯ ತೋರಿಸಿ, ಸತ್ಯ ಬರೆಯಿರಿ. ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದೇ ದೊಡ್ಡ ವಿಷಯದಂತೆ ಮಾಧ್ಯಮಗಳಲ್ಲಿ ಚರ್ಚೆ ನಡೆಯಿತು. ಆ ಚರ್ಚೆಯಲ್ಲಿ ಜ್ಯೋತಿಷಿಗಳು, ಚಾನಲ್ ಗಳು ತೋರಿಸಿದ್ದೆಲ್ಲಾ ಅಪ್ಪಟ ಸುಳ್ಳಾಯ್ತು. ಮಾಧ್ಯಮದಲ್ಲಿ ಈ ರೀತಿ ಪ್ರಸಾರ ಮಾಡಿದರೇ ಜನ ನಂಬುತ್ತಾರೆಯೇ ಎಂಬುದರ ಬಗ್ಗೆ ಯೋಚಿಸಿ ಎಂದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.