ಅಕ್ರಮವಾಗಿ ಮತಾಂತರವಾಗಿ ಮದುವೆಯಾದ್ರೆ ಅದು ಕಾನೂನಿನಡಿ ಮಾನ್ಯವಲ್ಲ – ಹೈಕೋರ್ಟ್
ಪ್ರಯಾಗರಾಜ್: ಅಕ್ರಮವಾಗಿ ಮತಾಂತರವಾಗಿ ಮದುವೆಯಾದರೆ ಅದು ಕಾನೂನಿನಡಿ ಮಾನ್ಯವಲ್ಲ. ಅವರನ್ನು ವಿವಾಹಿತರೆಂದು ಪರಿಗಣಿಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಖಾಸಿಮ್ ಅವರು ತಮ್ಮ ಪತ್ನಿ ಜೈನಾಬ್ ಪರ್ವೀನ್ ಅಲಿಯಾಸ್ ಚಂದ್ರಕಾಂತ ಅವರೊಂದಿಗೆ ನಡೆಸುತ್ತಿರುವ ವೈವಾಹಿಕ ಜೀವನದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಸೌರಭ್ ಶ್ರೀವಾಸ್ತವ ಅವರಿದ್ದ ಏಕಸದಸ್ಯ ಪೀಠವು ಮುಹಮ್ಮದ್ ಬಿನ್ ಖಾಸಿಮ್ ಅಲಿಯಾಸ್ ಅಕ್ಟರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿ, ಅಕ್ರಮ ಮತಾಂತರದ ಆಧಾರದ ಮೇಲೆ ನಡೆದ ವಿವಾಹವು ಕಾನೂನಿನ ದೃಷ್ಟಿಯಲ್ಲಿ ಅಮಾನ್ಯವಾಗುತ್ತದೆ. ಅಂತಹ ದಂಪತಿಗಳನ್ನು ವಿವಾಹಿತರಾಗಿ ಪರಿಗಣಿಸಲಾಗುವುದಿಲ್ಲ ಎಂದು ತೀರ್ಪು ನೀಡಿತು.
ಅರ್ಜಿದಾರರ ಪರ ವಕೀಲರು, 2025ರ ಫೆಬ್ರವರಿ 22ರಂದು ಚಂದ್ರಕಾಂತ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಖಾನ್ನಾಹೆ ಅಲಿಯಾ ಅರಿಫಿಯಾ ಸಂಸ್ಥೆಯಿಂದ ಪ್ರಮಾಣಪತ್ರ ನೀಡಲಾಗಿದೆ ಎಂದು ಸಲ್ಲಿಸಿದರು. ನಂತರ ಮೇ 26ರಂದು ಮುಸ್ಲಿಂ ಕಾನೂನಿನ ಪ್ರಕಾರ ಮದುವೆಯಾದರು ಮತ್ತು ಕ್ವಾಜಿಯಿಂದ ವಿವಾಹ ಪ್ರಮಾಣಪತ್ರ ಪಡೆದಿದ್ದಾರೆಂದು ವಾದ ಮಂಡಿಸಿದರು.
ಇದಕ್ಕೆ ಪ್ರತಿವಾದ ಮಂಡಿಸಿದ ಹೆಚ್ಚುವರಿ ಮುಖ್ಯ ಸ್ಥಾಯಿ ವಕೀಲರು, ನೀಡಲಾಗಿದೆ ಎಂದು ಹೇಳಲಾದ ಮತಾಂತರ ಪ್ರಮಾಣಪತ್ರ ನಕಲಿ ಹಾಗೂ ಕಲ್ಪಿತ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದರು. ಜಾಮಿಯಾ ಅರಿಫಿಯಾ ಸಂಸ್ಥೆಯ ಅಧಿಕಾರಿಗಳು ಕೂಡ ಆ ದಿನಾಂಕದಲ್ಲಿ ಯಾವುದೇ ಪ್ರಮಾಣಪತ್ರ ನೀಡಿಲ್ಲ ಎಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು.
ದಾಖಲೆಗಳ ಪರಿಶೀಲನೆ ಬಳಿಕ ನ್ಯಾಯಾಲಯವು, “ನಕಲಿ ದಾಖಲೆ ಆಧಾರದ ಮೇಲೆ ನಡೆದ ಮತಾಂತರವು ಕಾನೂನುಬಾಹಿರ. ಮತಾಂತರ ಕಾಯ್ದೆಯ ಅವಶ್ಯಕ ಅಂಶಗಳನ್ನು ಪೂರೈಸುವುದಿಲ್ಲ. ಆದ್ದರಿಂದ ಅಂತಹ ಮತಾಂತರದ ಆಧಾರದ ವಿವಾಹವು ಮುಸ್ಲಿಂ ಕಾನೂನಿನ ದೃಷ್ಟಿಯಲ್ಲಿ ಮಾನ್ಯವಾಗುವುದಿಲ್ಲ” ಎಂದು ನ್ಯಾಯಪೀಠ ನಿರ್ಧರಿಸಿತು.
ನ್ಯಾಯಾಲಯವು ಅರ್ಜಿದಾರರಿಗೆ ವಿಶೇಷ ವಿವಾಹ ಕಾಯ್ದೆಯಡಿ ಮದುವೆಯನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ಸೂಚಿಸಿದ್ದು, ಈ ಕಾಯ್ದೆಯಡಿಯಲ್ಲಿ ಮತಾಂತರದ ಅವಶ್ಯಕತೆ ಇಲ್ಲವೆಂದು ಸಹ ಹೇಳಿದೆ.
ವಿಶೇಷ ವಿವಾಹ ಕಾಯ್ದೆಯಡಿ ಪ್ರಮಾಣಪತ್ರ ದೊರಕುವವರೆಗೆ, ಎರಡನೇ ಅರ್ಜಿದಾರ (ಚಂದ್ರಕಾಂತ) ಅವರನ್ನು ಪ್ರಯಾಗರಾಜ್ ನ ಮಹಿಳಾ ರಕ್ಷಣಾ ಗೃಹದಲ್ಲಿ ಇರಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಪೋಷಕರೊಂದಿಗೆ ವಾಸಿಸಲು ಅವರು ನಿರಾಕರಿಸಿರುವ ಹಿನ್ನೆಲೆಯಲ್ಲಿ ಎರಡನೇ ಅರ್ಜಿದಾರ (ಚಂದ್ರಕಾಂತ) ರನ್ನು ಮಹಿಳಾ ರಕ್ಷಣಾ ಗೃಹದಲ್ಲಿ ಇರಿಸಲು ಸೂಚಿಸಲಾಗಿದೆ.
ಇದೇ ವೇಳೆ ನ್ಯಾಯಾಲಯವು ಅರ್ಜಿದಾರರ ಪರ ವಕೀಲರಿಗೆ 25,000 ರೂಪಾಯಿ ದಂಡ ವಿಧಿಸಿ, ಅದನ್ನು 15 ದಿನಗಳೊಳಗೆ ಮಧ್ಯಸ್ಥಿಕೆ ಮತ್ತು ರಾಜಿ ಕೇಂದ್ರದಲ್ಲಿ ಠೇವಣಿ ಇಡಲು ಸೂಚಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
