ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಹೊಸ ನಿಯಮ ಜಾರಿ: ಈ ರೂಲ್ಸ್ ಪಾಲಿಸದಿದ್ರೆ ಆಸ್ತಿ ವರ್ಗಾವಣೆ ನೋಂದಣಿಯೇ ಆಗಲ್ಲ!
ಬೆಂಗಳೂರು: ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದ್ದು ನಿಯಮ ಪಾಲಿಸದೇ ಇದ್ದರೆ, ಪರಭಾರೆ, ಆಸ್ತಿ ವರ್ಗಾವಣೆ ನೋಂದಣಿಯೇ ಆಗುವುದಿಲ್ಲ.
ಹೌದು, ರಾಜ್ಯದಲ್ಲಿ ₹30 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಸ್ಥಿರಾಸ್ತಿ ನೋಂದಣಿಗೆ ಖರೀದಿದಾರರು ಮತ್ತು ಮಾರಾಟಗಾರರ ಪೂರ್ಣ ವಿವರಗಳು, ಪಾನ್ ಸಂಖ್ಯೆ ಕಡ್ಡಾಯ. ಈ ವಿವರಗಳನ್ನು ಸಲ್ಲಿಸದಿದ್ದರೆ ಆಸ್ತಿ ನೋಂದಣಿ ಆಗುವುದಿಲ್ಲ. ಈ ಕುರಿತು ಮುದ್ರಾಂಕ ಆಯುಕ್ತರು ಮೇ 16 ರಂದು ರಾಜ್ಯದ ಎಲ್ಲಾ ಜಿಲ್ಲಾ ನೋಂದಣಾಧಿಕಾರಿಗಳು ಮತ್ತು ಉಪ ನೊಂದನಾಧಿಕಾರಿ ಕಚೇರಿಗಳಿಗೆ ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ರೂ. 30 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿ ನೋಂದಣಿಯ ವೇಳೆ ಮಾರಾಟಗಾರರು ಮತ್ತು ಖರೀದಿದಾರರು ತಮ್ಮ ಪಾನ್ (PAN) ವಿವರವನ್ನು ಸಲ್ಲಿಸುವುದನ್ನು ಕಡ್ಡಾಯವಾಗಿದೆ. 30 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ, ನೋಂದಣಿಗೆ ಸಂಬಂಧಿಸಿದಂತೆ ಮಾರಾಟಗಾರರು ಮತ್ತು ಖರೀದಿದಾರರ ವಿವರಗಳನ್ನು ಆರ್ಥಿಕ ವರ್ಷದ ಅಂತ್ಯಕ್ಕೆ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಆಸ್ತಿ ನೋಂದಣಿ ವೇಳೆ ಸಲ್ಲಿಸಬೇಕಾಗಿರುವ ದಾಖಲೆಗಳು ಮತ್ತು ಸ್ವಯಂ ಘೋಷಣಾ ಪತ್ರದ ವಿವರಗಳನ್ನು ಸುತ್ತೋಲೆ ಒಳಗೊಂಡಿದೆ. ಈ ಎಲ್ಲಾ ವಿವರ ಮತ್ತು ಮಾಹಿತಿಗಳನ್ನು ಸಲ್ಲಿಸಿದರೆ ಮಾತ್ರ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡು ದಸ್ತಾವೇಜನ್ನು ಹಸ್ತಾಂತರಿಸಬೇಕು. ಇಲ್ಲದಿದ್ದರೆ ದಸ್ತಾವೇಜು ನೀಡಬಾರದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಮಾರಾಟಗಾರರು ಮತ್ತು ಖರೀದಿದಾರರು ಈ ಮಾಹಿತಿಗಳನ್ನು ಸಲ್ಲಿಸಲು ಪ್ರತ್ಯೇಕ ನಮೂನೆಯನ್ನು ರೂಪಿಸಿದ್ದು. ಅದರಲ್ಲಿ ಮಾರಾಟದ ಕುರಿತ ಎಲ್ಲ ವಿವರಗಳನ್ನು ಸಲ್ಲಿಸಬೇಕು. ಆ ಬಳಿಕ ನಿಗದಿತ ನಮೂನೆಗೆ ಸಹಿ ಮಾಡಿ ಸ್ಕ್ಯಾನ್ ಮಾಡಬೇಕು. ಅದನ್ನು ಕಾವೇರಿ-2 ತಂತ್ರಾಂಶಕ್ಕೆ ಅಪ್ಲೋಡ್ ಮಾಡಬೇಕು.
ಇಡೀ ಆರ್ಥಿಕ ವರ್ಷದಲ್ಲಿ ನೋಂದಣಿಯಾದ ಆಸ್ತಿ ವಹಿವಾಟು ಮಾರಾಟ ಮತ್ತು ಖರೀದಿದಾರರ ವಿವರವನ್ನು 61ಎ ನಮೂನೆಯಲ್ಲಿ ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ.
ಸಲ್ಲಿಸಬೇಕಾದ ವಿವರಗಳು ಹೀಗಿವೆ
ಹೆಸರು, ತಂದೆ/ತಾಯಿಯ ಹೆಸರು, ಹಣ ವರ್ಗಾವಣೆಯ ವಿವರ, ಪಾನ್ ಸಂಖ್ಯೆ, ಆಧಾರ್ ಸಂಖ್ಯೆ, ಪೂರ್ಣ ವಿಳಾಸ, ಸಂಪರ್ಕ ಸಂಖ್ಯೆ ಮತ್ತು ಪರ್ಯಾಯ ಸಂಪರ್ಕ ಸಂಖ್ಯೆ ಮತ್ತು, ನಮೂನೆ 60 ವಿವರವನ್ನ ಸಲ್ಲಿಸಬೇಕು.
ಆಸ್ತಿ ಖರೀದಿ ವಿವರವನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವುದು ಬಹಳ ಹಿಂದಿನಿಂದಲೇ ಜಾರಿಯಲ್ಲಿತ್ತು. ಆದರೆ ಇಲಾಖೆಯ ಅಧಿಕಾರಿಗಳು ಈ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುತ್ತಿರಲಿಲ್ಲ.
ಈ ಬಗ್ಗೆ ಆದಾಯ ತೆರಿಗೆ ಇಲಾಖೆಯಿಂದ ಆಕ್ಷೇಪ ಪತ್ರಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ವಿವರ ಸಲ್ಲಿಕೆಯನ್ನು ಕಟ್ಟುನಿಟ್ಟಾಗಿ ಮತ್ತು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಆದಾಯ ತೆರಿಗೆ ವಂಚನೆ ಪ್ರಕರಣಗಳಿಗೂ ಇದರಿಂದ ತೆರೆ ಬೀಳಲಿದೆ ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
