ತನಿಖೆಯಲ್ಲಿ ಗಂಭೀರ ಲೋಪ: ಪೊಲೀಸ್ ಅಧಿಕಾರಿಗಳಿಬ್ಬರು ಸಸ್ಪೆಂಡ್
ಮಂಗಳೂರು: ಅಕ್ರಮದ ಮಾಹಿತಿ ನೀಡಿ ಸಾಕ್ಷ್ಯ ಒದಗಿಸಿದರೂ ಸರಿಯಾಗಿ ತನಿಖೆ ಮಾಡದೇ ಲೋಪವೆಸಗಿದ ಆರೋಪದ ಮೇಲೆ ಪೊಲೀಸ್ ಅಧಿಕಾರಿಗಳಿಬ್ಬರನ್ನ ಅಮಾನತು ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದಾರೆ.
ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸೋಮಶೇಖರ್ ಜಿಸಿ ಮತ್ತು ಬರ್ಕೆ ಪೊಲೀಸ್ ಠಾಣೆಯ ಪಿಎಸ್ ಐ ಉಮೇಶ್ ಕುಮಾರ್ ಎಂ ಎನ್ ಅಮಾನತಾದವರು.
ವಿದೇಶದಲ್ಲಿ ಉದ್ಯೋಗಕ್ಕಾಗಿ ನೇಮಕಾತಿ ಮಾಡಿಸುವ ಅಕ್ರಮ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ಗಂಭೀರ ಲೋಪ ಎಸಗಿದ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅಮಾನತ್ತು ಆದೇಶವನ್ನು ಹೊರಡಿಸಿದ್ದಾರೆ.
ಹಿಂದಿನ ದೂರುಗಳು ಮತ್ತು ನಿರ್ದೇಶನಗಳನ್ನು ನೀಡಿದ್ದರೂ ಸಹ, ಮೆಸರ್ಸ್ ಹೈರ್ಗ್ಲೋ ಎಲಿಗಂಟ್ ಓವರ್ಸೀಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿಫಲರಾದ ಕಾರಣ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸೋಮಶೇಖರ್ ಜಿ.ಸಿ. ಅವರನ್ನು ಅಮಾನತುಗೊಳಿಸಲಾಗಿದೆ. ಪೊಲೀಸರ ನಿಷ್ಕ್ರಿಯತೆ ಮತ್ತು ಮೇಲ್ವಿಚಾರಣೆಯ ಕೊರತೆಯು ಆರೋಪಿಗಳು ಹಲವಾರು ಉದ್ಯೋಗ ಆಕಾಂಕ್ಷಿಗಳಿಗೆ 1.82 ಕೋಟಿ ರೂ.ಗಳಿಗೂ ಹೆಚ್ಚು ವಂಚನೆ ಮಾಡಲು ಅವಕಾಶ ನೀಡಿದಂತಾಗಿದೆ
ವಿದೇಶದಲ್ಲಿ ಉದ್ಯೋಗ ನೇಮಕಾತಿ ಹೆಸರಿನಲ್ಲಿ ವಂಚನೆ ನಡೆಸಿರುವ ಏಜೆನ್ಸಿಗಳ ಬಗ್ಗೆ ಸರ್ಕಾರದ ಸಂಸ್ಥೆಗಳು ಮತ್ತು ಸಂತ್ರಸ್ತರು ಸಾಕ್ಷ್ಯ ಸಹಿತ ಮುನ್ಸೂಚನೆ ನೀಡಿದ್ದರೂ, ಮಹತ್ವದ ಮಾಹಿತಿಯನ್ನು ನಿರ್ಲಕ್ಷ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಈ ಪೊಲೀಸ್ ಅಧಿಕಾರಿಗಳು ವಿಫಲರಾಗಿದ್ದರು. ಹೈರ್ ಗೋ ಎಲಿಗೆಂಟ್ ಓವರ್ ಸೀಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಬಗ್ಗೆ ಪೊಲೀಸರಿಗೆ ಸಾಕಷ್ಟು ದೂರುಗಳು ಬಂದಿದ್ದವು. ಅದೇ ರೀತಿ ಸಂಬಂಧ ಪಟ್ಟ ಇಲಾಖೆಯ ನಿರ್ದೇಶನವು ಇತ್ತು. ಇದರ ಹೊರತಾಗಿಯೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ ಮಂಗಳೂರು ಪೂರ್ವ ಠಾಣೆಯ ಇನ್ಸೆಕ್ಟರ್ ಸೋಮಶೇಖರ್ ಅವರ ನಿಷ್ಕ್ರಿಯತೆ ಮತ್ತು ಮೇಲ್ವಿಚಾರಣೆಯ ಕೊರತೆಯ ಕಾರಣದಿಂದ ಆರೋಪಿ ತನ್ನ ವಂಚನೆ ಮುಂದುವರೆಸಿದ್ದರು.
ಇದರ ಪರಿಣಾಮ ಹಲವು ಉದ್ಯೋಗಾಕಾಂಕ್ಷಿಗಳಿಂದ ಆರೋಪಿಗಳು ಒಂದು ಕೋಟಿ 82 ಲಕ್ಷ ರೂಪಾಯಿಗೂ ಅಧಿಕ ವಂಚನೆ ಮಾಡಲು ಅವಕಾಶವಾಗಿದೆ ಎಂದು ಪೊಲೀಸ್ ಆಯುಕ್ತರು ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಪಿಯ ಬಂಧನಕ್ಕೆ ವಿಫಲವಾಗಿರುವುದು, ಪ್ರಮುಖ ಸಾಕ್ಷಗಳನ್ನು ಸಂಗ್ರಹಿಸುವುದು, ಸಂತ್ರಸ್ತರು ಮತ್ತು ಸಾಕ್ಷಿಗಳು ನೀಡಿದ ಸಾಕ್ಷಗಳ ಪರಿಶೀಲನೆಯಲ್ಲಿ ಎಡವಟ್ಟು ಮಾಡಿರುವುದು ಹಾಗೂ ಹಣಕಾಸಿನ ಸುಳಿವುಗಳ ಮೇಲೆ ಕ್ರಮ ಕೈಗೊಳ್ಳಲು ವಿಫಲರಾಗಿರುವ ಆರೋಪ ಈ ಪೊಲೀಸ್ ಅಧಿಕಾರಿಗಳ ಮೇಲಿದೆ. ಈ ಎಲ್ಲ ಕಾರಣ ಪ್ರಕರಣದ ತನಿಖೆಗೆ ಹಿನ್ನಡೆ ಆಗಿದೆ. ಇಬ್ಬರೂ ಅಧಿಕಾರಿಗಳು ನಿರ್ಲಕ್ಷ, ಬೇಜಬ್ದಾರಿ ಮತ್ತು ಕರ್ತವ್ಯ ಉಲ್ಲಂಘನೆಯನ್ನು ಪ್ರದರ್ಶಿಸಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮಗಳನ್ನು ಆರಂಭಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
