23/04/2026

Law Guide Kannada

Online Guide

ಸುಪ್ರೀಂ ಕೋರ್ಟ್ ಕಲಾಪದ ವೇಳೆ ವಕೀಲೆಯ ಹೊರಗಟ್ಟಿದ ಮಾರ್ಷಲ್ ಗಳು: ಕಾರಣವೇನು..?

ನವದೆಹಲಿ: ಸುಪ್ರೀಂಕೋರ್ಟ್ ಕಲಾಪ ನಡೆಯುತ್ತಿದ್ದ ವೇಳೆ ಕಲಾಪಕ್ಕೆ ಅಡ್ಡಿಪಡಿಸಿದ ವಕೀಲೆಯೊಬ್ಬರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕೊಠಡಿಯಿಂದ ಮಹಿಳಾ ಮಾರ್ಷಲ್ ಗಳು ಹೊರಗಟ್ಟಿದ ಘಟನೆ ನಡೆಯಿತು.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಎನ್.ಕೆ. ಸಿಂಗ್ ಅವರಿದ್ದ ಪೀಠದ ಮುಂದೆ ವಕೀಲೆಯು ಪಟ್ಟಿಯಿಂದ ಹೊರಗಿರುವ ವಿಷಯದ ಬಗ್ಗೆ ನಿರಂತರವಾಗಿ ಪ್ರಸ್ತಾಪಿಸಿದ್ದಾರೆ. ಈ ವೇಳೆ ಮಹಿಳಾ ಮಾರ್ಷಲ್ ಗಳು ವಕೀಲೆಯನ್ನು ಹೊರಗಟ್ಟಿದರು.

ಕಾರಣವೇನು…?
‘ಮುಂಬೈನಲ್ಲಿದ್ದಾಗ ದೆಹಲಿ ಅತಿಥಿ ಗೃಹವೊಂದರಲ್ಲಿ ನನ್ನ ಆಪ್ತ ಸ್ನೇಹಿತೆಯನ್ನು ಕೊಲೆ ಮಾಡಲಾಗಿದೆ. ಆರಂಭದಲ್ಲಿ ಎಫ್ ಐಆರ್ ದಾಖಲಿಸಲು ನಿರಾಕರಿಸಿದ ಪೊಲೀಸ್ ಅಧಿಕಾರಿಯನ್ನು ಈಗ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ನೇಮಿಸಲಾಗಿದೆ’ ಎಂದು ವಕೀಲೆಯು ಆರೋಪಿಸಿದ್ದರು.

ಈ ವೇಳೆ ಸೂಕ್ತ ಪ್ರಕ್ರಿಯೆ ಅನುಸರಿಸಿ ಸರಿಯಾದ ಅರ್ಜಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಸಲಹೆ ನೀಡಿದರು. ಆಗ, ವಕೀಲೆಯು, ‘ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ. ಮುಂದೆ ಹಾಗೆಯೇ ಮಾಡುತ್ತೇನೆ’ ಎಂದು ಹೇಳಿಯೂ ವಕೀಲೆ ಅಲ್ಲಿಯೇ ನಿಂತಿದ್ದರು.

ಬಳಿಕ ನ್ಯಾಯಪೀಠವು ಪ್ರಕರಣ ದಾಖಲಿಸಲು ಸಹಾಯ ಮಾಡುವಂತೆ ಅಲ್ಲಿ ಹಾಜರಿದ್ದ ವಕೀಲರಿಗೆ ತಿಳಿಸಿತು. ಆದರೆ, ಮುಂದಿನ ಪ್ರಕರಣದ ವಿಚಾರಣೆ ನಡೆದಾಗಲೂ ವಕೀಲೆಯು ತಮ್ಮ ವಾದವನ್ನು ಮುಂದುವರಿಸಿದ್ದು, ಈ ಸಮಯದಲ್ಲಿ ಅವರನ್ನು ಹೊರಗೆ ಕಳುಹಿಸಲು ಕೋರ್ಟ್ ಮಹಿಳಾ ಮಾರ್ಷಲ್ಗಳು ಮುಂದಾದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಕೀಲೆಯು, ‘ಅನುಚಿತವಾಗಿ ವರ್ತಿಸಬೇಡಿ, ನನ್ನನ್ನು ಮುಟ್ಟಬೇಡಿ’ ಎಂದು ಕೂಗಾಡಿದ್ದಾರೆ.

ಈ ವೇಳೆ ನ್ಯಾಯಮೂರ್ತಿ ಭುಯಾನ್, ಸಹ ವಕೀಲರು ಸಭ್ಯತೆ ಕಾಯ್ದುಕೊಳ್ಳುವಂತೆ ವಕೀಲೆಗೆ ಸಲಹೆ ನೀಡಿದರೂ ವಕೀಲೆಯು ತಮ್ಮ ಸುರಕ್ಷತೆ ಬಗ್ಗೆ ಈ ನ್ಯಾಯಾಲಯದ ಗಮನಕ್ಕೆ ತರಲು ಬಯಸುವುದಾಗಿ ತಿಳಿಸಿದರು.

ನ್ಯಾಯಾಲಯದ ಕಲಾಪಗಳ ಆನ್ಲೈನ್ ಪ್ರಸಾರವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಯಿತು. ಕೊನೆಗೆ, ವಕೀಲೆಯನ್ನು ನ್ಯಾಯಾಲಯದ ಕೊಠಡಿಯಿಂದ ಹೊರಗೆ ಹಾಕಲಾಯಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.