23/04/2026

Law Guide Kannada

Online Guide

ತೀರ್ಪಿನ ದೋಷಕ್ಕೆ ಜಡ್ಜ್ ಗಳ ವಿರುದ್ದ ಶಿಸ್ತುಕ್ರಮ ಪ್ರಾರಂಭಿಸಬಾರದು-ಹೈಕೋರ್ಟ್ ಗಳಿಗೆ ಸುಪ್ರೀಂ ಎಚ್ಚರಿಕೆ

ನವದೆಹಲಿ: ತೀರ್ಪಿನಲ್ಲಿ ಕೇವಲ ದೋಷ ಇದೆ ಎಂಬ ಕಾರಣಕ್ಕೆ ನ್ಯಾಯಾಧೀಶರ ವಿರುದ್ಧ ಶಿಸ್ತು ಕ್ರಮಗಳನ್ನು ಪ್ರಾರಂಭಿಸಬಾರದು ಎಂದು ಹೈಕೋರ್ಟ್ ಗಳಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ಡಿವಾಲಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರಿದ್ದ ನ್ಯಾಯಪೀಠವು, 2014ರಲ್ಲಿ ಸೇವೆಯಿಂದ ವಜಾಗೊಂಡಿದ್ದ ನಿರ್ಭಯ್ ಸಿಂಗ್ ಸುಲಿಯಾ ಅವರ ಮೇಲ್ಮನವಿಯನ್ನು ಅನುಮೋದಿಸಿತು. ಇದೇ ವೇಳೆ ನ್ಯಾಯಾಧೀಶರೊಬ್ಬರು ನೀಡಿದ ತೀರ್ಪಿನಲ್ಲಿನ ಕೇವಲ ದೋಷ ಇದೆ ಎಂಬ ಕಾರಣಕ್ಕೆ ಆ ಜಡ್ಜ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, ನ್ಯಾಯಾಂಗ ಅಧಿಕಾರಿಯ ವಜಾ ಆದೇಶವನ್ನು ರದ್ದುಪಡಿಸಿದೆ. ತಪ್ಪು. ಅಥವಾ ದೋಷಪೂರ್ಣ ನ್ಯಾಯಾಂಗ ಆದೇಶಗಳನ್ನು ನೀಡಿದರೆಂಬ ಕಾರಣ ಮಾತ್ರಕ್ಕೆ ಜಿಲ್ಲಾ ನ್ಯಾಯಾಂಗದ ಸದಸ್ಯರ ವಿರುದ್ಧ ಶಿಸ್ತು ಕ್ರಮಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ನಿರ್ಭಯ್ ಸಿಂಗ್ ಸುಲಿಯಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ, ಭ್ರಷ್ಟಾಚಾರ ಹಾಗೂ ಮಧ್ಯಪ್ರದೇಶ ಎಕ್ಸೆಸ್ ಕಾಯ್ದೆಯಡಿಯಲ್ಲಿ ಜಾಮೀನು ಅರ್ಜಿಗಳನ್ನು ನಿರ್ಧರಿಸುವಾಗ “ದ್ವಂದ್ವ ಮಾನದಂಡ” ಅನುಸರಿಸಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.

ಮಧ್ಯಪ್ರದೇಶ ಎಕ್ಸೆಸ್ ಕಾಯ್ದೆಯ ಸೆಕ್ಷನ್ 34(2) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಜಾಮೀನು ಅರ್ಜಿಗಳನ್ನು ನಿರ್ಧರಿಸುವ ಸಂದರ್ಭದಲ್ಲಿ ದ್ವಂದ್ಯ ಮಾನದಂಡ ಅನುಸರಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಟ್ ಪ್ರಾರಂಭಿಸಿದ ಇಲಾಖಾ ತನಿಖೆಯ ನಂತರ ಈ ಕ್ರಮ ಕೈಗೊಳ್ಳಲಾಗಿತ್ತು. 50 ಬಲ್ಕ್ ಲೀಟರ್ ಗಿಂತ ಹೆಚ್ಚು ಮದ್ಯ ವಶಪಡಿಸಿಕೊಂಡಿದ್ದ ಕೆಲವು ಪ್ರಕರಣಗಳಲ್ಲಿ ಜಾಮೀನು ನೀಡಿದ್ದರೆ, ಅದೇ ರೀತಿಯ ಇನ್ನಿತರ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಪ್ರಮಾಣ 50 ಬಲ್ಕ್ ಲೀಟರ್ ಗಿಂತ ಹೆಚ್ಚು ಇರುವುದರಿಂದ ಜಾಮೀನು ನೀಡಲಾಗುವುದಿಲ್ಲ ಎಂದು ಹೇಳಿ ಜಾಮೀನು ನಿರಾಕರಿಸಿದ್ದಾರೆ ಎಂಬುದು ಆರೋಪವಾಗಿತ್ತು.

ಮುಖ್ಯ ತೀರ್ಪನ್ನು ಬರೆದ ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರು, ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಗಳನ್ನು ಪ್ರಾರಂಭಿಸುವಾಗ ಹೈಕೋರ್ಟ್ಗಳು ಅತ್ಯಂತ ಎಚ್ಚರಿಕೆಯಿಂದ ವರ್ತಿಸಬೇಕೆಂದು ಒತ್ತಿ ಹೇಳಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.