Law Guide Kannada

ಉತ್ತಮ ಸಮಾಜಕ್ಕಾಗಿ - ಲಾಗೈಡ್

October 23, 2026

News

ಕಾನೂನು ವೃತ್ತಿ ನ್ಯಾಯದ ಪರ ನಿಲ್ಲುವ ಧೀಮಂತಿಕೆ: ಇದು ಧೈರ್ಯವಂತರಿಗೆ ಮಾತ್ರ ಸೀಮಿತ – CJI ಸೂರ್ಯ ಕಾಂತ್

ಬೆಂಗಳೂರು: ಕಾನೂನು ವೃತ್ತಿಯು ನ್ಯಾಯದ ಪರ ನಿಲ್ಲುವ ಧೀಮಂತಿಕೆಯಾಗಿದ್ದು, ಇದು ದುರ್ಬಲ ಮನಸ್ಸಿನವರಿಗಲ್ಲ ಧೈರ್ಯವಂತರಿಗೆ ಮಾತ್ರ ಸೀಮಿತವಾದುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಕಿವಿಮಾತು ಹೇಳಿದರು. ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) 34ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಜೆಐ ಸೂರ್ಯಕಾತ್ ಅವರು, ಕಾನೂನು ವೃತ್ತಿಗೆ ಅಪಾರವಾದ ಧೈರ್ಯ ಮತ್ತು ಬೌದ್ಧಿಕ ಸ್ವಾತಂತ್ರ್ಯ ಬೇಕಾಗುತ್ತದೆ. ಇದು ಕೇವಲ ಕಾಯ್ದೆ-ಕಾನೂನುಗಳ ಮೇಲಿನ ಪ್ರಾವೀಣ್ಯತೆ ಸಾಧಿಸಿದರೇ ಸಾಲದು, ನ್ಯಾಯದ ಪರವಾಗಿ ನಿಲ್ಲುವ ಧೀಮಂತಿಕೆ ಇರಬೇಕು. ಹೀಗಾಗಿ, ಕಾನೂನು ವೃತ್ತಿ ಧೈರ್ಯವಂತರಿಗೆ ಮಾತ್ರ ಸೀಮಿತವಾದುದು , ದುರ್ಬಲ ಮನಸ್ಸಿನವರಿಗಲ್ಲ ಎಂದು ಹೇಳಿದರು.. ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಂದ ಹೆಚ್ಚಿನ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿದ ಸಿಜೆಐ ಸೂರ್ಯಕಾಂತ್ ಅವರು, ನೀವು ಮುಂದಿನ ದಿನಗಳಲ್ಲಿ ಬೀರಲಿರುವ ಪ್ರಭಾವದ ಅರಿವು ನನಗಿದೆ. ನಿಮ್ಮೆಲ್ಲರಿಂದ ನನಗೆ ಅಪಾರ ನಿರೀಕ್ಷೆಗಳಿವೆ. ಇಲ್ಲಿ ನೀವು ಕಲಿತ ಪಠ್ಯಕ್ರಮವು ನಿಮ್ಮ ಸಹನಶಕ್ತಿಯ ಮಿತಿಯನ್ನೇ ಪರೀಕ್ಷಿಸಿದೆ. ಕಾನೂನು ವೃತ್ತಿಯಲ್ಲಿ ತೊಡಗಿಸಿಕೊಳ್ಳುವವರು ಧೈರ್ಯಶಾಲಿಗಳಾಗಿರಬೇಕು. ಕಾನೂನು ಸ್ಥಿರವಾದ ವಿಷಯವಲ್ಲ, ಅದು ನಿರಂತರವಾಗಿ ಬದಲಾಗುತ್ತಿರುತ್ತದೆ. ಕಾನೂನು ವೃತ್ತಿಯಲ್ಲಿ ತೊಡಗಿರುವವರ ಮೂಲಕ ಅದು ಜೀವಂತವಾಗಿರುತ್ತದೆ ಮತ್ತು ವಿಕಸನಗೊಳ್ಳುತ್ತದೆ ಎಂದರು. ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಜಗತ್ತಿನಾದ್ಯಂತ ಪ್ರಜಾಸತ್ತಾತ್ಮಕ ಸಂಸ್ಥೆಗಳು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಸಂವಿಧಾನವನ್ನು ರಕ್ಷಿಸುವ ವಿಶೇಷ ಜವಾಬ್ದಾರಿ ಯುವ ವಕೀಲರು ಮತ್ತು ನೀತಿ ನಿರೂಪಕರ ಮೇಲಿದೆ. ಸರ್ಕಾರವನ್ನು ಎಲ್ಲರೂ ಒಪ್ಪಿಕೊಳ್ಳುವ ವ್ಯವಸ್ಥೆಯೇ ಬಲಿಷ್ಠ ಪ್ರಜಾಪ್ರಭುತ್ವವಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರವನ್ನು ಪ್ರಶ್ನಿಸುವ ಸ್ವಾತಂತ್ರ್ಯವಿರುವ ವ್ಯವಸ್ಥೆಯೇ ನಿಜವಾದ ಬಲಿಷ್ಠ ಪ್ರಜಾಪ್ರಭುತ್ವ ಎಂದರು. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕೇಂದ್ರಗಳ ಮಾದರಿಯಲ್ಲಿ, ಕಾನೂನು ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆನಡೆಸುವ ಅಭ್ಯರ್ಥಿಗಳಿಗಾಗಿ ರಾಜ್ಯದಲ್ಲಿ ಪ್ರತ್ಯೇಕ ತರಬೇತಿ ಸಂಸ್ಥೆ ಸ್ಥಾಪಿಸಲಾಗುವುದು, ಎನ್ಎಲ್ಎಸ್ಐಯುನಲ್ಲಿ “ಸ್ಟಾರ್ಟ್ಅಪ್ ಕಾನೂನು ಚಿಕಿತ್ಸಾಲಯ” ಸ್ಥಾಪನೆಗೆ ರಾಜ್ಯ ಸರ್ಕಾರ ನೆರವು ನೀಡಲಿದೆ. ಈ ಕೇಂದ್ರದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ವಕೀಲರು ಯುವ ಉದ್ಯಮಿಗಳಿಗೆ ಉಚಿತ ಕಾನೂನು ಸಲಹೆ ನೀಡಲಿದ್ದಾರೆ ಎಂದರು. ಈ ವರ್ಷ ಎನ್ಎಲ್ಎಸ್ಐಯುನಿಂದ ಒಟ್ಟು 1,720 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಇವರಲ್ಲಿ ಆರು ಮಂದಿ ಪಿಎಚ್ಡಿ, 36 ಮಂದಿ ಮಾಸ್ಟರ್ ಆಫ್ ಪಬ್ಲಿಕ್ ಪಾಲಿಸಿ (ಎಂ.ಪಿ.ಪಿ.), 100 ಮಂದಿ ಮಾಸ್ಟರ್ ಆಫ್ ಲಾಸ್ (ಎಲ್ಎಲ್.ಎಂ.), 72 ಮಂದಿ ಮೂರು ವರ್ಷದ ಬ್ಯಾಚುಲರ್ ಆಫ್ ಲಾ (ಎಲ್ಎಲ್.ಬಿ. ಆನರ್ಸ್), 116 ಮಂದಿ ವಿದ್ಯಾರ್ಥಿಗಳು ಬ್ಯಾಚುಲರ್ ಆಫ್ ಆರ್ಟ್ಸ್ ಅಂಡ್ ಲಾಸ್ (ಬಿ.ಎ. ಎಲ್ಎಲ್.ಬಿ. ಆನರ್ಸ್) ಪಡೆದಿದ್ದಾರೆ. ವಿಶ್ವವಿದ್ಯಾಲಯದ ಆನ್ಲೈನ್ ಮತ್ತು ಹೈಬ್ರಿಡ್ ಕಾರ್ಯಕ್ರಮಗಳ ಮೂಲಕ 1,390 ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಿದ್ದಾರೆ. ಘಟಿಕೋತ್ಸವದಲ್ಲಿ ಒಟ್ಟು 24 ವಿದ್ಯಾರ್ಥಿಗಳಿಗೆ 50 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಎಚ್ ಎನ್ ವೆಂಕಟೇಶ್ ಗೌರವ ಸಂಪಾದಕರು ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಮೈಸೂರು

Supreme Court

30 ದಿನದೊಳಗೆ ಎಲ್ಲ ಪೊಲೀಸ್ ಠಾಣೆಗಳನ್ನು ಡಿಜಿಟಲೀಕರಣಗೊಳಿಸಿ- ಕಟ್ಟುನಿಟ್ಟಿನ ಗಡುವು ನೀಡಿದ ಸುಪ್ರೀಂ

ನವದೆಹಲಿ: ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಗಳು ಮತ್ತು ಇಂಟರ್ನೆಟ್ ಸಂಪರ್ಕವಿರದ ಪೊಲೀಸ್ ಠಾಣೆಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಹೀಗಾಗಿ ಎಲ್ಲಾ ಪೊಲೀಸ್ ಠಾಣೆಗಳನ್ನೂ 30 ದಿನದೊಳಗೆ ಮೂಲಭೂತ ಡಿಜಿಟಲೀಕರಣ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಬೇಕು ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲದೆ ಇದೇ ಗಡುವಿನೊಳಗೆ ಮಕ್ಕಳ ಕಲ್ಯಾಣ ಸಮಿತಿಗಳನ್ನೂ ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವಂತೆ ಸುಪ್ರೀಂಕೋರ್ಟ್ ತಿಳಿಸಿದೆ. 2011ರಲ್ಲಿ ಚೆನ್ನೈನಿಂದ ನಾಪತ್ತೆಯಾದ ತನ್ನ ಮಗಳನ್ನು ಪತ್ತೆಹಚ್ಚುವಂತೆ ಆಕೆಯ ತಂದೆ ಸಲ್ಲಿಸಿರುವ ಅರ್ಜಿ ಸಂಬಂಧ ಎಸ್. ಗಣೇಶ ವಿರುದ್ಧ ತಮಿಳುನಾಡು ಸರಕಾರ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ಈ ಖಡಕ್ ಆದೇಶ ನೀಡಿದೆ. ನಾಪತ್ತೆಯಾದ ವ್ಯಕ್ತಿಗಳ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸುವಂತೆ ನೀಡಿರುವ ನಿರ್ದೇಶನಗಳಿಗೆ ಈ ಪ್ರಕರಣ ಸಂಬಂಧಿಸಿದೆ. ಕಾಣೆಯಾದ ಮಹಿಳೆಯರು ಮತ್ತು ಮಕ್ಕಳ ಪತ್ತೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಕಾನೂನು ಜಾರಿ ವ್ಯವಸ್ಥೆಯ ಮೂಲಸೌಕರ್ಯದಲ್ಲಿ ವ್ಯವಸ್ಥಿತ ಸುಧಾರಣೆಗಳನ್ನು ತರಬೇಕೆಂದು ಈ ಪ್ರಕರಣದಲ್ಲಿ ಮನವಿ ಮಾಡಲಾಗಿದೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠವು, ತಡೆರಹಿತ ಡಿಜಿಟಲ್ ದಾಖಲೆ ನಿರ್ವಹಣೆ, ಪ್ರಥಮ ವರ್ತಮಾನ ವರದಿಗಳನ್ನು (ಎಫ್ಐಆರ್) ಕ್ಷಿಪ್ರವಾಗಿ ಅಪ್ ಲೋಡ್ ಮಾಡುವುದು ಮತ್ತು ಪೊಲೀಸ್ ದತ್ತಾಂಶವನ್ನು ಮಕ್ಕಳ ರಕ್ಷಣೆ ಹಾಗೂ ಕಳ್ಳಸಾಗಣೆ ವಿರೋಧಿ ಪೋರ್ಟಲ್ ಗಳೊಂದಿಗೆ ಜೋಡಿಸುವುದಕ್ಕೆ ನಿರ್ದೇಶನಗಳನ್ನು ನೀಡಿದೆ. ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳು, ಗೃಹ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಕಾರ್ಯದರ್ಶಿಗಳು ಈ ನಿರ್ದೇಶನಗಳ ಪಾಲನೆಯನ್ನು ನೇರವಾಗಿ ಮೇಲ್ವಿಚಾರಣೆ ಮಾಡಬೇಕು. ತಾಂತ್ರಿಕ ಅವಶ್ಯಕತೆಗಳನ್ನು ಪೂರೈಸಲು ಅಗತ್ಯ ಹಣವನ್ನು ತಕ್ಷಣವೇ ಮಂಜೂರು ಮಾಡಿ ಬಿಡುಗಡೆ ಮಾಡಬೇಕು ಎಂದು ನ್ಯಾಯಪೀಠವು ರಾಜ್ಯ ಸರಕಾರಗಳಿಗೆ ಸೂಚಿಸಿದೆ. ಪ್ರತಿ ಎಫ್ ಐಆರ್ ಅನ್ನು ಸ್ಥಳೀಯ ಕಂಪ್ಯೂಟರ್ ನಲ್ಲಿ ಕಡ್ಡಾಯವಾಗಿ ಅಪ್ ಲೋಡ್ ಮಾಡಬೇಕು. ಬಳಿಕ ಇಂಟರ್ನೆಟ್ ಮೂಲಕ ಸಂಬಂಧಿತ ರಾಜ್ಯ ಪೋರ್ಟಲ್ (ಇದ್ದರೆ) ಮತ್ತು ಅಪರಾಧ ಮತ್ತು ಅಪರಾಧಿಗಳ ಟ್ರ್ಯಾಕಿಂಗ್ ನೆಟ್ವರ್ಕ್ ಮತ್ತು ವ್ಯವಸ್ಥೆಗಳಿಗೆ (ಸಿಸಿಟಿಎನ್ಎಸ್) ರವಾನಿಸಬೇಕು. ಸಿಸಿಟಿಎನ್ಎಸ್ 2.0ಕ್ಕೆ ದತ್ತಾಂಶದ ಸುಗಮ ಹರಿವಿಗಾಗಿ ಎಲ್ಲ ರಾಷ್ಟ್ರೀಯ ಮತ್ತು ರಾಜ್ಯ ಪೋರ್ಟಲ್ ಗಳ ಏಕೀಕರಣವನ್ನು ಸಾಧಿಸುವಂತೆ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕಕ್ಕೂ (ಎನ್ಸಿಆರ್ಬಿ) ನ್ಯಾಯಪೀಠವು ನಿರ್ದೇಶಿಸಿದೆ. ಎಚ್ ಎನ್ ವೆಂಕಟೇಶ್ ಗೌರವ ಸಂಪಾದಕರು ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಮೈಸೂರು

High Court

ಮೂರು ದಶಕಗಳಿಗೂ ಹೆಚ್ಚು ಕಾಲ ಕೆಲಸ, ನಿವೃತ್ತಿ: ಟೈಪಿಸ್ಟ್ ಸೇವೆ ಕಾಯಂಗೆ ಹೈಕೋರ್ಟ್ ಆದೇಶ

ಬೆಂಗಳೂರು: ಮೂರು ದಶಕಗಳಿಗೂ ಹೆಚ್ಚು ಕಾಲ ದಿನಗೂಲಿ ನೌಕರಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬೆರಳಚ್ಚುಗಾರ್ತಿಯೊಬ್ಬರ ಸೇವೆಯನ್ನು ಕಾಯಂ ಮಾಡುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದ ದಾಂಡೇಲಿ ನಗರಸಭೆಯಲ್ಲಿ ಟೈಪಿಸ್ಟ್ (ಬೆರಳಚ್ಚುಗಾರ್ತಿ) ಆಗಿ ಮೂರು ದಶಕಗಳಿಗೂ ಹೆಚ್ಚು ಕಾಲ ದಿನಗೂಲಿ ನೌಕರಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಗೀತಾ ರಾಮಪ್ಪ ತೇರದಾಳ (64) ಸಲ್ಲಿಸಿದ್ದ ಅವರ ಸೇವೆಯನ್ನ ಕಾಯಂಗೊಳಿಸಲು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ಆದೇಶಿಸಿದೆ. ಈ ಸಂಬಂಧ ಗೀತಾ ರಾಮಪ್ಪ ತೇರದಾಳ (64) ಸಲ್ಲಿಸಿದ್ದ ರಿಟ್ ಮೇಲ್ಮನವಿಯನ್ನ ನ್ಯಾಯಪೀಠ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು ಇದೀಗ ತೀರ್ಪನ್ನ ಪ್ರಕಟಿಸಿದೆ. ‘ಅರ್ಜಿದಾರರು 10 ವರ್ಷ ಸೇವೆ ಪೂರ್ಣಗೊಳಿಸಿದ ದಿನಾಂಕದಿಂದ ಅನ್ವಯವಾಗುವಂತೆ ಅವರ ಸೇವೆಯನ್ನು ಕ್ರಮಬದ್ದಗೊಳಿಸಬೇಕು. 34 ವರ್ಷಗಳ ಸಂಪೂರ್ಣ ಸೇವೆಯನ್ನು ಪರಿಗಣಿಸಿ ಪಿಂಚಣಿ, ಗ್ರಾಚ್ಯುಟಿ ಹಾಗೂ ಇಳಿವಯಸ್ಸಿನ ಎಲ್ಲಾ ಸೌಲಭ್ಯಗಳನ್ನೂ ಮರು ಪರಿಗಣಿಸಿ ಮುಂದಿನ ಎಂಟು ವಾರಗಳ ಒಳಗೆ ಆದೇಶ ಹೊರಡಿಸಬೇಕು. ಈ ಆದೇಶ ಪಾಲನೆ ತಪ್ಪಿದರೆ ವೇತನದ ಬಾಕಿ ಮೊತ್ತಕ್ಕೆ ಶೇ. 50ರಷ್ಟು ಬಡ್ಡಿ ಪಾವತಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನ್ಯಾಯಪೀಠ ಸೂಚನೆ ನೀಡಿದೆ. ‘ಮೂರು ದಶಕಕ್ಕೂ ಹೆಚ್ಚು ಕಾಲ ಸರ್ಕಾರದ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸಿದವರನ್ನು ನಿವೃತ್ತಿಯ ಹೊಸ್ತಿಲಲ್ಲಿ ಕಾಯಂಗೊಳಿಸುವುದಕ್ಕೆ ನಿರಾಕರಿಸುವುದು ಶೋಷಣೆಗೆ ಸಮಾನ. ಈ ನಡೆ ಮಾದರಿ ಸರ್ಕಾರದ ಲಕ್ಷಣವಲ್ಲ’ ಎಂದು ನ್ಯಾಯಪೀಠ ಅತೃಪ್ತಿ ವ್ಯಕ್ತಪಡಿಸಿದೆ. ಗೀತಾ ಅವರು ಉದ್ಯೋಗ ವಿನಿಮಯ ಕೇಂದ್ರದ ಮೂಲಕ ಪರಿಶಿಷ್ಟ ಜಾತಿಗೆ ಮೀಸಲಾದ ಖಾಲಿ ಹುದ್ದೆಗೆ 1988ರ ಜೂನ್ 8ರಂದು ದಾಂಡೇಲಿ ನಗರಸಭೆಯಲ್ಲಿ ದಿನಗೂಲಿ ಆಧಾರದಡಿ ನೇಮಕಗೊಂಡಿದ್ದರು. 24 ವರ್ಷಗಳ ಸೇವೆಯ ಬಳಿಕ ತಮ್ಮನ್ನು ಕಾಯಂಗೊಳಿಸುವಂತೆ ಮನವಿ ಸಲ್ಲಿಸಿದ್ದರು. ಆದರೆ ಕಾಯಂಗೊಳಿಸಿರಲಿಲ್ಲ. 34 ವರ್ಷಗಳ ಸೇವೆಯ ನಂತರ 2022ರ ಜೂನ್ ನಲ್ಲಿ ನಿವೃತ್ತರಾಗಿದ್ದರು. ಕಾಯಂ ಮನವಿ ಪರಿಗಣಿಸದೇ ಇರುವುದನ್ನು ಪ್ರಶ್ನಿಸಿ ಗೀತಾ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಈ ಬಗ್ಗೆ ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠವು, ‘ಅರ್ಜಿದಾರರು ಈಗಾಗಲೇ ನಿವೃತ್ತಿ ವಯಸ್ಸು ತಲುಪಿರುವ ಕಾರಣ ಅವರ ಸೇವೆಯನ್ನು ಕ್ರಮ ಬದ್ಧಗೊಳಿಸಲು ಅವಕಾಶವಿಲ್ಲ. ನಿವೃತ್ತಿ ನಂತರ ಸೇವೆಯನ್ನು ಕ್ರಮಬದ್ಧಗೊಳಿಸುವ ಕೋರಿಕೆ ಅಸ್ತಿತ್ವದಲ್ಲಿ ಇಲ್ಲ’ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತ್ತು. ನಂತರ ವಿಭಾಗೀಯ ಪೀಠಕ್ಕೆ ಮನವಿ ಸಲ್ಲಿಸಿದ್ದು ಈ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠವು, ‘ಅರ್ಜಿದಾರರು ಸರ್ಕಾರದ ನೇಮಕಾತಿ ಪ್ರಕ್ರಿಯೆ ಮುಖಾಂತರವೇ ನೇಮಕಗೊಂಡು ಟೈಪಿಸ್ಟ್ ಮತ್ತು ಕಂಪ್ಯೂಟರ್ ಆಪರೇಟರ್ ಸೇರಿದಂತೆ ವಿವಿಧ ಸ್ತರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇದೇ ಕಾರಣದಿಂದ ಅವರ ಸೇವೆಯನ್ನು ಕಾಯಂಗೊಳಿಸುವಂತೆ ಪುರಸಭೆಯಿಂದ ಶಿಫಾರಸು ಕೂಡಾ ಮಾಡಲಾಗಿದೆ’ ಎಂಬ ಅಂಶವನ್ನು ಉಲ್ಲೇಖಿಸಿತು. ಉದ್ಯೋಗದ ಸಮಯದಲ್ಲಿ ಸಿಗಬೇಕಾದ ಪ್ರಯೋಜನಗಳನ್ನು ಕಾನೂನು ಬಾಹಿರವಾಗಿ ನಿರಾಕರಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ತಾತ್ಕಾಲಿಕ ಉದ್ಯೋಗದ ನೆಪದಲ್ಲಿ ಕಾರ್ಮಿಕರಿಂದ ಶಾಶ್ವತ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ. ಉದ್ಯೋಗಿಯ ದುರ್ಬಲತೆಯನ್ನು ಆಡಳಿತಾತ್ಮಕ ಅನುಕೂಲಕ್ಕೆ ಸಾಧನವನ್ನಾಗಿ ಪರಿವರ್ತಿಸಲಾಗದು. ಉದ್ಯೋಗಿ ನಿವೃತ್ತರಾಗಿದ್ದಾರೆ ಎಂಬ ಕಾರಣಕ್ಕೆ ಸೇವಾವಧಿಯಲ್ಲಿ ಉದ್ಬವಿಸಿದ್ದ ನ್ಯಾಯಸಮ್ಮತ ಹಕ್ಕುಗಳು ಅಥವಾ ಕಾಯಂಗೊಳಿಸುವ ಕೋರಿಕೆ ತನ್ನ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು. ಎಚ್ ಎನ್ ವೆಂಕಟೇಶ್ ಗೌರವ ಸಂಪಾದಕರು ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಮೈಸೂರು

Scroll to Top