ಮೂರು ದಶಕಗಳಿಗೂ ಹೆಚ್ಚು ಕಾಲ ಕೆಲಸ, ನಿವೃತ್ತಿ: ಟೈಪಿಸ್ಟ್ ಸೇವೆ ಕಾಯಂಗೆ ಹೈಕೋರ್ಟ್ ಆದೇಶ
ಬೆಂಗಳೂರು: ಮೂರು ದಶಕಗಳಿಗೂ ಹೆಚ್ಚು ಕಾಲ ದಿನಗೂಲಿ ನೌಕರಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬೆರಳಚ್ಚುಗಾರ್ತಿಯೊಬ್ಬರ ಸೇವೆಯನ್ನು ಕಾಯಂ ಮಾಡುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದ
ದಾಂಡೇಲಿ ನಗರಸಭೆಯಲ್ಲಿ ಟೈಪಿಸ್ಟ್ (ಬೆರಳಚ್ಚುಗಾರ್ತಿ) ಆಗಿ ಮೂರು ದಶಕಗಳಿಗೂ ಹೆಚ್ಚು ಕಾಲ ದಿನಗೂಲಿ ನೌಕರಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಗೀತಾ ರಾಮಪ್ಪ ತೇರದಾಳ (64) ಸಲ್ಲಿಸಿದ್ದ ಅವರ ಸೇವೆಯನ್ನ ಕಾಯಂಗೊಳಿಸಲು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ಆದೇಶಿಸಿದೆ.
ಈ ಸಂಬಂಧ ಗೀತಾ ರಾಮಪ್ಪ ತೇರದಾಳ (64) ಸಲ್ಲಿಸಿದ್ದ ರಿಟ್ ಮೇಲ್ಮನವಿಯನ್ನ ನ್ಯಾಯಪೀಠ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು ಇದೀಗ ತೀರ್ಪನ್ನ ಪ್ರಕಟಿಸಿದೆ. ‘ಅರ್ಜಿದಾರರು 10 ವರ್ಷ ಸೇವೆ ಪೂರ್ಣಗೊಳಿಸಿದ ದಿನಾಂಕದಿಂದ ಅನ್ವಯವಾಗುವಂತೆ ಅವರ ಸೇವೆಯನ್ನು ಕ್ರಮಬದ್ದಗೊಳಿಸಬೇಕು. 34 ವರ್ಷಗಳ ಸಂಪೂರ್ಣ ಸೇವೆಯನ್ನು ಪರಿಗಣಿಸಿ ಪಿಂಚಣಿ, ಗ್ರಾಚ್ಯುಟಿ ಹಾಗೂ ಇಳಿವಯಸ್ಸಿನ ಎಲ್ಲಾ ಸೌಲಭ್ಯಗಳನ್ನೂ ಮರು ಪರಿಗಣಿಸಿ ಮುಂದಿನ ಎಂಟು ವಾರಗಳ ಒಳಗೆ ಆದೇಶ ಹೊರಡಿಸಬೇಕು. ಈ ಆದೇಶ ಪಾಲನೆ ತಪ್ಪಿದರೆ ವೇತನದ ಬಾಕಿ ಮೊತ್ತಕ್ಕೆ ಶೇ. 50ರಷ್ಟು ಬಡ್ಡಿ ಪಾವತಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನ್ಯಾಯಪೀಠ ಸೂಚನೆ ನೀಡಿದೆ.
‘ಮೂರು ದಶಕಕ್ಕೂ ಹೆಚ್ಚು ಕಾಲ ಸರ್ಕಾರದ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸಿದವರನ್ನು ನಿವೃತ್ತಿಯ ಹೊಸ್ತಿಲಲ್ಲಿ ಕಾಯಂಗೊಳಿಸುವುದಕ್ಕೆ ನಿರಾಕರಿಸುವುದು ಶೋಷಣೆಗೆ ಸಮಾನ. ಈ ನಡೆ ಮಾದರಿ ಸರ್ಕಾರದ ಲಕ್ಷಣವಲ್ಲ’ ಎಂದು ನ್ಯಾಯಪೀಠ ಅತೃಪ್ತಿ ವ್ಯಕ್ತಪಡಿಸಿದೆ.
ಗೀತಾ ಅವರು ಉದ್ಯೋಗ ವಿನಿಮಯ ಕೇಂದ್ರದ ಮೂಲಕ ಪರಿಶಿಷ್ಟ ಜಾತಿಗೆ ಮೀಸಲಾದ ಖಾಲಿ ಹುದ್ದೆಗೆ 1988ರ ಜೂನ್ 8ರಂದು ದಾಂಡೇಲಿ ನಗರಸಭೆಯಲ್ಲಿ ದಿನಗೂಲಿ ಆಧಾರದಡಿ ನೇಮಕಗೊಂಡಿದ್ದರು. 24 ವರ್ಷಗಳ ಸೇವೆಯ ಬಳಿಕ ತಮ್ಮನ್ನು ಕಾಯಂಗೊಳಿಸುವಂತೆ ಮನವಿ ಸಲ್ಲಿಸಿದ್ದರು. ಆದರೆ ಕಾಯಂಗೊಳಿಸಿರಲಿಲ್ಲ. 34 ವರ್ಷಗಳ ಸೇವೆಯ ನಂತರ 2022ರ ಜೂನ್ ನಲ್ಲಿ ನಿವೃತ್ತರಾಗಿದ್ದರು.
ಕಾಯಂ ಮನವಿ ಪರಿಗಣಿಸದೇ ಇರುವುದನ್ನು ಪ್ರಶ್ನಿಸಿ ಗೀತಾ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಈ ಬಗ್ಗೆ ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠವು, ‘ಅರ್ಜಿದಾರರು ಈಗಾಗಲೇ ನಿವೃತ್ತಿ ವಯಸ್ಸು ತಲುಪಿರುವ ಕಾರಣ ಅವರ ಸೇವೆಯನ್ನು ಕ್ರಮ ಬದ್ಧಗೊಳಿಸಲು ಅವಕಾಶವಿಲ್ಲ. ನಿವೃತ್ತಿ ನಂತರ ಸೇವೆಯನ್ನು ಕ್ರಮಬದ್ಧಗೊಳಿಸುವ ಕೋರಿಕೆ ಅಸ್ತಿತ್ವದಲ್ಲಿ ಇಲ್ಲ’ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತ್ತು.
ನಂತರ ವಿಭಾಗೀಯ ಪೀಠಕ್ಕೆ ಮನವಿ ಸಲ್ಲಿಸಿದ್ದು ಈ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠವು, ‘ಅರ್ಜಿದಾರರು ಸರ್ಕಾರದ ನೇಮಕಾತಿ ಪ್ರಕ್ರಿಯೆ ಮುಖಾಂತರವೇ ನೇಮಕಗೊಂಡು ಟೈಪಿಸ್ಟ್ ಮತ್ತು ಕಂಪ್ಯೂಟರ್ ಆಪರೇಟರ್ ಸೇರಿದಂತೆ ವಿವಿಧ ಸ್ತರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇದೇ ಕಾರಣದಿಂದ ಅವರ ಸೇವೆಯನ್ನು ಕಾಯಂಗೊಳಿಸುವಂತೆ ಪುರಸಭೆಯಿಂದ ಶಿಫಾರಸು ಕೂಡಾ ಮಾಡಲಾಗಿದೆ’ ಎಂಬ ಅಂಶವನ್ನು ಉಲ್ಲೇಖಿಸಿತು.
ಉದ್ಯೋಗದ ಸಮಯದಲ್ಲಿ ಸಿಗಬೇಕಾದ ಪ್ರಯೋಜನಗಳನ್ನು ಕಾನೂನು ಬಾಹಿರವಾಗಿ ನಿರಾಕರಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ತಾತ್ಕಾಲಿಕ ಉದ್ಯೋಗದ ನೆಪದಲ್ಲಿ ಕಾರ್ಮಿಕರಿಂದ ಶಾಶ್ವತ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ. ಉದ್ಯೋಗಿಯ ದುರ್ಬಲತೆಯನ್ನು ಆಡಳಿತಾತ್ಮಕ ಅನುಕೂಲಕ್ಕೆ ಸಾಧನವನ್ನಾಗಿ ಪರಿವರ್ತಿಸಲಾಗದು. ಉದ್ಯೋಗಿ ನಿವೃತ್ತರಾಗಿದ್ದಾರೆ ಎಂಬ ಕಾರಣಕ್ಕೆ ಸೇವಾವಧಿಯಲ್ಲಿ ಉದ್ಬವಿಸಿದ್ದ ನ್ಯಾಯಸಮ್ಮತ ಹಕ್ಕುಗಳು ಅಥವಾ ಕಾಯಂಗೊಳಿಸುವ ಕೋರಿಕೆ ತನ್ನ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
