ಮಕ್ಕಳ ಇಂಟರ್ನೆಟ್ ಬಳಕೆ ಮೂಲಭೂತ ಹಕ್ಕು: ಸಂಪೂರ್ಣ ನಿರ್ಬಂಧ ಸಲ್ಲದು – ಸುಪ್ರೀಂಕೋರ್ಟ್
ನವದೆಹಲಿ: ಮಕ್ಕಳಿಗೂ ಇಂಟರ್ನೆಟ್ ಬಳಸುವ ಮೂಲಭೂತ ಹಕ್ಕು ಇದೆ. ಮಕ್ಕಳ ಅಂತರ್ಜಾಲ ಬಳಕೆಗೆ ಸಂಪೂರ್ಣ ನಿರ್ಬಂಧ ವಿಧಿಸುವ ಬದಲು ಅವರ ಹಕ್ಕುಗಳಿಗೆ ಧಕ್ಕೆಯಾಗದಂತೆ ಸುರಕ್ಷತೆ ಖಾತರಿಪಡಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಆನ್ಲೈನ್ನಲ್ಲಿ ಮಕ್ಕಳ ಸುರಕ್ಷತೆ ಮುಖ್ಯವೇ ಹೊರತು, ಸಂಪೂರ್ಣವಾಗಿ ಇಂಟರ್ನೆಟ್ ಬಳಸುವುದರಿಂದ ಮಕ್ಕಳನ್ನು ದೂರವಿಡುವುದು ಅಸಂಬದ್ಧ ಮತ್ತು ಸರಿಯಲ್ಲ ಎಂದು ನ್ಯಾಯಮೂರ್ತಿ ಜೆ.ಬಿ. ಪಾರ್ದೀವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಸಂವಿಧಾನದ ವಿಧಿ 19(1)(ಎ) ಜೊತೆ ವಿಧಿ 21 ರ ಅಡಿಯಲ್ಲಿ ಇಂಟರ್ನೆಟ್ ಬಳಕೆಯು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿದೆ ಎಂದು ಹೇಳಲು ನಮಗೆ ಯಾವುದೇ ಹಿಂಜರಿಕೆಯಿಲ್ಲ. ವಯಸ್ಸಿನ ಹಂತ ಏನೇ ಇರಲಿ, ನಮ್ಮ ಮಕ್ಕಳೂ ಸಹ ಇದೇ ಹಕ್ಕನ್ನು ಅನುಭವಿಸುತ್ತಾರೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಮಕ್ಕಳ ಇಂಟರ್ ನೆಟ್ ಬಳಕೆಗೆ ವಯೋಮಾನ ಆಧಾರಿತ ನಿರ್ಬಂಧ ಹೇರುವುದಕ್ಕೆ ಆಕ್ಷೇಪಿಸಿರುವ ನ್ಯಾಯಪೀಠವು, ಮಕ್ಕಳಿಗೆ ಇಂಟರ್ನೆಟ್ ಬಳಕೆ ಸಂಪೂರ್ಣವಾಗಿ ನಿರಾಕರಿಸುವ ಬದಲು, ಅವರ ಹಕ್ಕುಗಳಿಗೆ ಧಕ್ಕೆಯಾಗದಂತೆ ಸುರಕ್ಷತೆ ಖಾತರಿಪಡಿಸಬೇಕು. ಆನ್ ಲೈನ್ ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸಲು ಕಠಿಣ ನಿಯಮಾವಳಿಗಳ ಚೌಕಟ್ಟು ರೂಪಿಸುವುದು ಅಗತ್ಯ ಎಂದು ಒತ್ತಿಹೇಳಿದೆ.
ಮಕ್ಕಳ ಸುರಕ್ಷತೆ ಮತ್ತು ಸ್ವಾತಂತ್ರ್ಯ ಪರಸ್ಪರ ವಿರುದ್ಧವಾದವುಗಳಲ್ಲ. ಆನ್ ಲೈನ್ ವೇದಿಕೆಗಳಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯದ ಚಿತ್ರಣಗಳನ್ನು ತ್ವರಿತವಾಗಿ ಪತ್ತೆಹಚ್ಚಿ ತೆಗೆದುಹಾಕುವ ವ್ಯವಸ್ಥೆಯನ್ನು ರೂಪಿಸುವುದು ಸೇರಿದಂತೆ, ಮಕ್ಕಳ ರಕ್ಷಣೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
ವಯೋಮಾನ ಆಧಾರಿತ ನಿರ್ಬಂಧಗಳು ಮಕ್ಕಳನ್ನು ನಿಯಂತ್ರಣವಿಲ್ಲದ ಹಾಗೂ ಹೆಚ್ಚು ಅಪಾಯಕಾರಿ ವೆಬ್ಸೈಟ್ ಗಳತ್ತ ತಳ್ಳುವ ಸಾಧ್ಯತೆಯಿದೆ. ಇಂತಹ ನಿರ್ಬಂಧಗಳು ಮಕ್ಕಳನ್ನು ಆನ್ಲೈನ್ ಅಪಾಯಗಳಿಂದ ಸಂಪೂರ್ಣವಾಗಿ ರಕ್ಷಿಸಲಾರವು ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.
ಆನ್ಲೈನ್ ನಲ್ಲಿ ಆಮಿಷಕ್ಕೆ ಒಳಗಾದ ಅಥವಾ ಬೆದರಿಕೆಗೆ ಗುರಿಯಾದ ಮಕ್ಕಳು, ಇಂಟರ್ನೆಟ್ ಬಳಕೆಯ ನಿರ್ಬಂಧಗಳನ್ನು ಉಲ್ಲಂಘಿಸಿದ್ದಕ್ಕಾಗಿ ಶಿಕ್ಷೆಯಾಗಬಹುದು ಎಂಬ ಭಯದಿಂದ ಪೋಷಕರಿಗೆ ಅಥವಾ ವಿಶ್ವಾಸಾರ್ಹ ವಯಸ್ಕರಿಗೆ ವಿಷಯ ತಿಳಿಸಲು ಹಿಂಜರಿಯಬಹುದು. ಮಕ್ಕಳಿಗೆ ಡಿಜಿಟಲ್ ಜಗತ್ತಿನ ಪ್ರವೇಶವನ್ನು ನಿರಾಕರಿಸುವುದಕ್ಕಿಂತ, ಆನ್ಲೈನ್ ಅಪಾಯಗಳಿಂದ ಅವರನ್ನು ರಕ್ಷಿಸುವ ಪರಿಣಾಮಕಾರಿ ವ್ಯವಸ್ಥೆ ರೂಪಿಸುವುದು ಮುಖ್ಯ ಎಂದು ನ್ಯಾಯಪೀಠ ತಿಳಿಸಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
