ಸಮ್ಮತಿ ವಿಚ್ಚೇದನಕ್ಕೆ ಅನುಮತಿ: ಬಾಕಿ ಇದ್ದ ಸಿವಿಲ್ ಮತ್ತು ಕ್ರಿಮಿನಲ್ ಕೇಸ್ ಗಳ ರದ್ದಿಗೆ ಅನುಚ್ಛೇದ 142ರ ಅಧಿಕಾರ ಬಳಿಸಿದ ಸುಪ್ರೀಂ
ನವದೆಹಲಿ: ಸಂವಿಧಾನದ ಅನುಚ್ಛೇದ 142ರಡಿ ತನ್ನ ವಿಶೇಷ ಅಧಿಕಾರವನ್ನು ಚಲಾಯಿಸಿದ ಸುಪ್ರೀಂ ಕೋರ್ಟ್, ದಂಪತಿಗಳ ನಡುವಿನ ಬಾಕಿ ಇರುವ ಎಲ್ಲಾ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ರದ್ದು ಪಡಿಸಿ, ಪರಸ್ಪರ ಸಮ್ಮತಿಯ ವಿಚ್ಛೇದನಕ್ಕೆ ಅನುಮತಿ ನೀಡಿ ಆದೇಶಿಸಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠವು ದಂಪತಿಗೆ ಪರಸ್ಪರ ಸಮ್ಮತಿಯ ವಿಚ್ಚೇದನಕ್ಕೆ ಅನುಮತಿ ನೀಡಿ, ಬಾಕಿ ಇದ್ದ 18 ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ರದ್ದುಪಡಿಸಲು ಅನುಚ್ಛೇದ 142ರ ಅಧಿಕಾರವನ್ನು ಬಳಸಿತು. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13B, ಅದರಲ್ಲಿರುವ ಮೂಲಭೂತ ಷರತ್ತುಗಳು ಪೂರ್ತಿಯಾಗಿದ್ದು, ದಂಪತಿಗಳು ತಮ್ಮ ಎಲ್ಲಾ ವಿವಾದಗಳು ಮತ್ತು ಹಕ್ಕು-ದಾವೆಗಳನ್ನು ಸಂಪೂರ್ಣ ಹಾಗೂ ಅಂತಿಮವಾಗಿ ಇತ್ಯರ್ಥಪಡಿಸಿಕೊಂಡಿದ್ದರೆ, ಪರಸ್ಪರ ಸಮ್ಮತಿಯ ವಿಚ್ಚೇದನದ ಡಿಕ್ರಿ ನೀಡುವ ಸುಪ್ರೀಂ ಕೋರ್ಟ್ ಅಧಿಕಾರಕ್ಕೆ ಯಾವುದೇ ನಿರ್ಬಂಧವನ್ನು ವಿಧಿಸುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
“ವಿವಾಹ ಸಂಬಂಧವು ಮರುಸ್ಥಾಪಿಸಲಾಗದಷ್ಟು ಹದಗೆಟ್ಟಿದ್ದು, ಮತ್ತೆ ಹೊಂದಾಣಿಕೆಯಾಗುವ ಯಾವುದೇ ಸಾಧ್ಯತೆ ಇಲ್ಲದ ಸಂದರ್ಭದಲ್ಲಿ ಈ ವಿವೇಚನಾಧಿಕಾರವನ್ನು ಚಲಾಯಿಸಲಾಗುತ್ತದೆ. ಇದರಿಂದ ದೀರ್ಘಕಾಲದಿಂದ ಮುಂದುವರಿಯುತ್ತಿರುವ ವ್ಯಾಜ್ಯಗಳಿಗೆ ಶಾಶ್ವತ ಅಂತ್ಯವನ್ನು ಒದಗಿಸಬಹುದು ಎಂದು ನ್ಯಾಯಪೀಠ ತಿಳಿಸಿದೆ.
4 ಡಿಸೆಂಬರ್ 2016ರಂದು ದಂಪತಿ ವಿವಾಹವಾಗಿದ್ದರು.. ಆದರೆ ಪರಸ್ಪರ ಹೊಂದಾಣಿಕೆಯಾಗದ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಅವರು 2022ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಅಲ್ಲದೆ, ಪತಿ-ಪತ್ನಿಯರ ನಡುವೆ ಮಾತ್ರವಲ್ಲದೆ, ಅವರ ಕುಟುಂಬ ಸದಸ್ಯರು ದಾಖಲಿಸಿದ್ದ ಪ್ರಕರಣಗಳನ್ನೂ ಒಳಗೊಂಡಂತೆ ಒಟ್ಟು 18 ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದವು ಎಂಬುದನ್ನು ನ್ಯಾಯಪೀಠವು ಗಮನಿಸಿತು.
“ಪಕ್ಷಗಳು ಹೊಂದಾಣಿಕೆಯಾಗುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಮಾಡಲು ಈ ನ್ಯಾಯಾಲಯ ಕೈಗೊಂಡ ಪ್ರಯತ್ನದ ಫಲವಾಗಿ, ಹಿಂದಿನ ಸಂದರ್ಭಗಳಲ್ಲಿ ಮಧ್ಯಸ್ಥಿಕೆ ಫಲಪ್ರದವಾಗದಿದ್ದರೂ, ಪಕ್ಷಗಳ ನಡುವಿನ ದೀರ್ಘಕಾಲದ ವ್ಯಾಜ್ಯಗಳಿಗೆ ಅಂತ್ಯ ಹಾಡುವ ಉದ್ದೇಶದಿಂದ ಅವರು ಸೌಹಾರ್ದಯುತ ಒಪ್ಪಂದಕ್ಕೆ ಬಂದಿದ್ದಾರೆ.” ವಿವಾಹವು ಸಂಪೂರ್ಣವಾಗಿ “ಡೆಡ್ ಎಂಡ್” (dead end) ತಲುಪಿದ್ದು. ಇನ್ನು ಮುಂದೆ ಹೊಂದಾಣಿಕೆಯಾಗುವ ಯಾವುದೇ ಸಾಧ್ಯತೆ ಇಲ್ಲ ಎಂಬ ಪತಿಯ ವಾದದಲ್ಲಿ ನ್ಯಾಯಾಲಯಕ್ಕೆ ಸಮರ್ಥನೆ ಕಂಡುಬಂತು.
ಆದ್ದರಿಂದ, ಅನುಚ್ಛೇದ 142ರಡಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿ, ಪರಸ್ಪರ ಸಮ್ಮತಿಯ ವಿಚ್ಚೇದನ ನೀಡುವುದರ ಜೊತೆಗೆ ಬಾಕಿ ಇರುವ ಪ್ರಕರಣಗಳನ್ನು ರದ್ದುಪಡಿಸುವುದರಿಂದಲೇ ನಿಜವಾದ ನ್ಯಾಯ ದೊರೆಯುತ್ತದೆ ಎಂದು ನ್ಯಾಯಪೀಠ ತಿಳಿಸಿತು.
ಪತಿ ಮತ್ತು ಪತ್ನಿ ಇಬ್ಬರೂ ವಿಚ್ಛೇದನಕ್ಕೆ ಸಮ್ಮತಿಸಿರುವುದನ್ನೂ ನ್ಯಾಯಾಲಯ ಗಮನಿಸಿತು. ತಮ್ಮ ಎಲ್ಲಾ ಹಕ್ಕು-ದಾವೆಗಳಿಗೆ ಪೂರ್ಣ ಮತ್ತು ಅಂತಿಮ ಇತ್ಯರ್ಥವೆಂದು ಒಪ್ಪಿಕೊಂಡಿದ್ದ ಮೊತ್ತವಾಗಿ ಪತಿಯು ಈಗಾಗಲೇ ಪತ್ನಿಗೆ ₹35 ಲಕ್ಷ ಶಾಶ್ವತ ಜೀವನಾಂಶ (Permanent Alimony) ಪಾವತಿಸಿದ್ದನು.
ಈ ಪ್ರಕರಣದಲ್ಲಿ ಭಾರತದ ಸಂವಿಧಾನದ ಅನುಚ್ಛೇದ 142ರಡಿ ನಮ್ಮ ಅಧಿಕಾರವನ್ನು ಚಲಾಯಿಸುವ ಸಂದರ್ಭದಲ್ಲಿ, ಈ ನ್ಯಾಯಾಲಯವು Shilpa Sailesh ಮತ್ತು Rinku Baheti ಪ್ರಕರಣಗಳಲ್ಲಿ ಪ್ರತಿಪಾದಿಸಿದ ತತ್ತ್ವಗಳನ್ನು ಅನುಸರಿಸುವುದು ಸೂಕ್ತವೆಂದು ನಾವು ಪರಿಗಣಿಸುತ್ತೇವೆ. ಅದರಂತೆ, ಸುಪ್ರೀಂ ಕೋರ್ಟ್ ಪತಿಯ ಅರ್ಜಿಯನ್ನು ಪುರಸ್ಕರಿಸಿ ವಿವಾಹ ಸಂಬಂಧವನ್ನು ವಿಸರ್ಜಿಸಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
