ಅಪ್ರಾಪ್ತ ಮಗನಿಗೆ ಸ್ಕೂಟರ್ ಕೊಟ್ಟ ತಂದೆಗೆ ಬಿತ್ತು 25 ಸಾವಿರ ರೂ. ದಂಡ
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತರು ವಾಹನಗಳನ್ನು ಚಲಾಯಿಸುವ ಪ್ರಕರಣಗಳು ಹಾಗೂ ಅದರಿಂದಾಗುವ ಅಪಘಾತ ಘಟನೆಗಳು ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ದಂಡ ಮತ್ತು ಜೈಲು ಶಿಕ್ಷೆಯಂತಹ ಕಾನೂನು ಕ್ರಮಗಳಿದ್ದರೂ ಸಹ ಅದನ್ನೂ ಲೆಕ್ಕಿಸದೇ ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ಕೊಟ್ಟು ಪೋಷಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅಂತೆಯೇ ಇಲ್ಲೊಬ್ಬರು ತಂದೆ ತನ್ನ ಅಪ್ರಾಪ್ತ ಮಗನಿಗೆ ಬೈಕ್ ಚಲಾಯಿಸಲು ಕೊಟ್ಟು ನಂತರ ಬೈಕ್ ಅಪಘಾತವಾದ ಹಿನ್ನೆಲೆಯಲ್ಲಿ ಇದೀಗ ಅಪ್ರಾಪ್ತನ ತಂದೆ 25 ಸಾವಿರ ರೂ. ದಂಡ ತೆತ್ತಿದ್ದಾರೆ.
ಹೌದು, ತನ್ನ ದ್ವಿಚಕ್ರ ವಾಹನವನ್ನು ಚಲಾಯಿಸಲು ಅಪ್ರಾಪ್ತ ಮಗನಿಗೆ ನೀಡಿ ರಸ್ತೆ ಅಪಘಾತಕ್ಕೆ ಕಾರಣರಾದ ವಾಹನ ಮಾಲೀಕ ತಂದೆಗೆ 25 ಸಾವಿರ ರೂ. ದಂಡ ವಿಧಿಸಿ ಮಂಗಳೂರು ಜೆಎಂಎಫ್ಸಿ ನ್ಯಾಯಾಲಯ ತೀರ್ಪು ನೀಡಿದೆ.
ಸ್ಕೂಟರ್ ಮಾಲೀಕ ಅಬ್ದುಲ್ ಹಮೀದ್ ಎಂಬವರಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ತನ್ನ ಮಗ ಅಪ್ರಾಪ್ತ ಬಾಲಕನಾಗಿದ್ದರೂ ಆತನಿಗೆ ಅಬ್ದುಲ್ ಹಮೀದ್ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ್ದರು. ಈವೇಳೆ ಅಪ್ರಾಪ್ತ ಮಗ ರಸ್ತೆ ಅಪಘಾತ ಮಾಡಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರಿನ ನ್ಯಾಯಾಲಯ ಗಮನಾರ್ಹ ದಂಡ ವಿಧಿಸುವ ಮೂಲಕ ಎಚ್ಚರಿಕೆಯ ಸಂದೇಶ ನೀಡಿದೆ.
ಏನಿದು ಘಟನೆ..?
ಮಾರ್ಚ್ 30ರಂದು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ನಂತೂರು ಪದವು ಬಳಿ ಬೆಳಗಿನ ಜಾವ ಅಪ್ರಾಪ್ತ ಬಾಲಕ ಇತರ ಇಬ್ಬರೊಂದಿಗೆ ದ್ವಿಚಕ್ರ ವಾಹನದಲ್ಲಿ ಸುರತ್ಕಲ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ. ಈ ವೇಳೆ ಅದೇ ದಿಕ್ಕಿನಲ್ಲಿ ಕುಂಟಿಕಾನ ಕಡೆಗೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಹೊಡೆದಿದ್ದು, ಇದರಿಂದ ಎರಡೂ ಸ್ಕೂಟರ್ ನಲ್ಲಿದ್ದವರು ಗಾಯಗೊಂಡಿದ್ದರು.
ಈ ಬಗ್ಗೆ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಉಪನಿರೀಕ್ಷಕಿ ರೋಸಮ್ಮ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಜೆಎಂಎಫ್ ಸಿ 8ನೇ ನ್ಯಾಯಾಲಯದ ನ್ಯಾಯಾಧೀಶ ಫವಾಜ್ ಪಿ.ಎ. ಸ್ಕೂಟರ್ ಮಾಲೀಕ ಅಬ್ದುಲ್ ಹಮೀದ್ ಅವರಿಗೆ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
