LLB ಪರೀಕ್ಷೆಯಲ್ಲಿ ಕಾಪಿ ಹೊಡೆದ ವಿದ್ಯಾರ್ಥಿಗೆ ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು,ಜನವರಿ,31,2026 (www.justkannada.in): ಎಲ್ ಎಲ್ ಬಿ ಪರೀಕ್ಷೆಯಲ್ಲಿ ಕಾಪಿ ಹೊಡೆದು ಸಿಕ್ಕಿಬಿದ್ದ ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿಗೆ ಉಚ್ಛನ್ಯಾಯಾಲಯ 5 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ಪರೀಕ್ಷೆಯಲ್ಲಿ ಮೈಕ್ರೋ ಜೆರಾಕ್ಸ್ ಚೀಟಿಗಳನ್ನು ಬಳಸಿ ನಕಲು ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದ ಪ್ರಥಮ ವರ್ಷದ ಎಲ್ಎಲ್ ಬಿ ವಿದ್ಯಾರ್ಥಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿರುವ ಹೈಕೋರ್ಟ್ ಮುಖ್ಯ ನ್ಯಾಯಾಮೂರ್ತಿ ವಿಭು ಬಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯಪೀಠವು, ನ್ಯಾಯಾಲಯದ ಸಮಯ ವ್ಯರ್ಥ ಮಾಡಿದಕ್ಕಾಗಿ 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಕೋಲಾರದ ಕಾನೂನು ಕಾಲೇಜೊಂದರ ಪ್ರಥಮ ವರ್ಷದ ಎಲ್ಎಲ್ ಬಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವಾಗ ಫ್ಲೈಯಿಂಗ್ ಸ್ಕ್ಯಾಡ್ ಕೈಗೆ ಸಿಕ್ಕಿಬಿದ್ದಿದ್ದ. ಆತನ ಬಳಿ 13 ಮೈಕ್ರೋ ಜೆರಾಕ್ಸ್ ಪ್ರತಿಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಪರೀಕ್ಷಾ ಫಲಿತಾಂಶವನ್ನು ತಡೆ ಹಿಡಿದು ಮುಂದಿನ ಪರೀಕ್ಷೆಗೆ ಹಾಜರಾಗದಂತೆ ನಿರ್ಬಂಧ ವಿಧಿಸಲಾಗಿತ್ತು.
ನಿರ್ಬಂಧವನ್ನು ಪ್ರಶ್ನಿಸಿ ವಿದ್ಯಾರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದ . ಆತ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ವಜಾಗೊಳಿಸಿತ್ತು. ಆ ಆದೇಶ ಪ್ರಶ್ನಿಸಿ ವಿಭಾಗೀಯ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ನ್ಯಾಯಪೀಠವು, ಇಂತಹ ಅನಗತ್ಯ ಅರ್ಜಿಗಳಿಂದ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ. ಅರ್ಜಿಯನ್ನು ವಜಾಗೊಳಿಸಿತು. ಹಾಗೆಯೇ ಕಾಪಿ ಹೊಡೆದು ನಂತರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಸಮಯದ ವ್ಯರ್ಥ ಮಾಡಿದ ವಿದ್ಯಾರ್ಥಿಗೆ 5 ಸಾವಿರ ರೂ.ಗಳ ದಂಡ ವಿಧಿಸಿ ಅದನ್ನು ಎರಡು ವಾರಗಳಲ್ಲಿ ಪಾವತಿಸುವಂತೆ ನಿರ್ದೇಶನ ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
