25/04/2026

Law Guide Kannada

Online Guide

ವಾಹನ ಮಾರಾಟವಾದ್ರೂ `RC’ ಬದಲಾಗದಿದ್ದರೆ ಅಪಘಾತದ ಹೊಣೆ ಯಾರ ಮೇಲೆ ಬೀಳುತ್ತೆ? ಹೈಕೋರ್ಟ್ ಕೊಟ್ಟ ತೀರ್ಪಿದು.

ಬೆಂಗಳೂರು: ವಾಹನ ಮಾರಾಟವಾದರೂ ಅಧಿಕೃತವಾಗಿ ನೋಂದಣಿ ಪ್ರಮಾಣಪತ್ರ (RC)ಬದಲಾಗದಿದ್ದರೆ ಅಪಘಾತದ ಹೊಣೆ ಹಳೇ ಮಾಲೀಕರ ಮೇಲೆ ಬೀಳುತ್ತೋ? ಅಥವಾ ಹೊಸ ಮಾಲೀಕರ ಮೇಲೆ ಬೀಳುತ್ತೋ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ.

ಈ ಸಂಬಂಧ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠವು, ವಾಹನವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದರೂ ಸಹ, ಅಧಿಕೃತವಾಗಿ ನೋಂದಣಿ ಪ್ರಮಾಣಪತ್ರದಲ್ಲಿ (RC) ಮಾಲೀಕತ್ವ ವರ್ಗಾವಣೆಯಾಗುವವರೆಗೆ ಅಪಘಾತಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಹೊಣೆಗಾರಿಕೆಗಳು ನೋಂದಾಯಿತ ಮಾಲೀಕರದ್ದೇ ಆಗಿರುತ್ತದೆ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ವಿವರ
ಮಾರತಹಳ್ಳಿಯ ನಿವಾಸಿ ಸುನಿಲ್ ಕುಮಾರ್ ಎಂಬುವವರು ತಮ್ಮ ಬೈಕ್ ಅನ್ನು ಶಬ್ರೇಜ್ ಎಂಬುವವರಿಗೆ ಮಾರಾಟ ಮಾಡಿದ್ದರು. ಶಬ್ರೇಜ್ ಖರೀದಿಸಿದ್ದ ಈ ಬೈಕ್ 2020ರ ಜೂನ್ 18ರಂದು ಹನುಮಂತ ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದರು. ಮೃತರ ಕುಟುಂಬದವರು ಪರಿಹಾರ ಕೋರಿ ಮೋಟಾರು ಅಪಘಾತ ನ್ಯಾಯಮಂಡಳಿ ಮೆಟ್ಟಿಲೇರಿದ್ದರು.

ವಿಮಾ ದಾಖಲೆಗಳಲ್ಲಿನ ಸಮಸ್ಯೆಯಿಂದಾಗಿ, ನೋಂದಾಯಿತ ಮಾಲೀಕರೇ ಪರಿಹಾರ ನೀಡಬೇಕು ಎಂದು ನ್ಯಾಯಮಂಡಳಿ ಈ ಹಿಂದೆ 33 ಲಕ್ಷ ರೂ. ಪರಿಹಾರ ನಿಗದಿಪಡಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು, ವಾಹನ ಮಾರಾಟವಾದರೂ `RC’ ಬದಲಾಗದಿದ್ದರೆ ಅಪಘಾತದ ಹೊಣೆ ಹಳೇ ಮಾಲೀಕನದ್ದೇ ಆಗಿರುತ್ತದೆ ಎಂದು ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್ನ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿ ಮಾಲೀಕತ್ವ ವರ್ಗಾವಣೆಯಾಗದ ಹೊರತು ಮೊದಲ ಮಾಲೀಕನೇ ಹೊಣೆ ಎಂದು ಹೇಳಿದೆ. ಮೃತರ ಕುಟುಂಬಕ್ಕೆ 47.15 ಲಕ್ಷ ರೂ. ಪರಿಹಾರ ಪಾವತಿಸುವಂತೆ ನ್ಯಾಯಪೀಠ ಈಗ ಆದೇಶಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.