ನೇರ ನೇಮಕಾತಿ ಸಿಬ್ಬಂದಿಯ ಸೇವಾ ಜೇಷ್ಠತಾ ಪಟ್ಟಿಯಲ್ಲಿ ಎರವಲು ಸಿಬ್ಬಂದಿಯನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ- ಹೈಕೋರ್ಟ್
ಬೆಂಗಳೂರು: ಸರ್ಕಾರಿ ಸಂಸ್ಥೆಗಳಲ್ಲಿ ನೇರ ನೇಮಕಾತಿಯಾದ ಸಿಬ್ಬಂದಿಯ ಸೇವಾ ಜೇಷ್ಠತಾ ಪಟ್ಟಿಯಲ್ಲಿ ಎರವಲು ಸಿಬ್ಬಂದಿಯನ್ನು ಪ್ರತ್ಯೇಕಿಸಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ನೀಡಿದೆ.
ನಗರದ ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಎರವಲು ಸೇವೆಯಲ್ಲಿ ನಿಯೋಜನೆಗೊಂಡ ಸಿಬ್ಬಂದಿ ಮತ್ತು ನೇರ ನೇಮಕಾತಿಯಲ್ಲಿ ಆಯ್ಕೆಯಾದ ಸಿಬ್ಬಂದಿಯನ್ನು ಸೇವಾ ಹಿರಿತನದಲ್ಲಿ ಪರಿಗಣಿಸಿರುವ ಕ್ರಮ ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ನೇರ ನೇಮಕಾತಿಯಲ್ಲಿ ಆಯ್ಕೆಯಾಗಿದ್ದ ವೈದ್ಯರೊಬ್ಬರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಟಿ.ಎಂ.ನದಾಫ್ ಅವರಿದ್ದ ನ್ಯಾಯಪೀಠ ಮೇಲ್ಮನವಿಯನ್ನು ವಜಾಗೊಳಿಸಿ ತೀರ್ಪು ನೀಡಿದ್ದಾರೆ.
ಏನಿದು ಪ್ರಕರಣ :
ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಡಾ.ಪಿ.ಹೇಮಾ ಮಿಥಾಲಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ದಂತ ಆರೋಗ್ಯ ಅಧಿಕಾರಿಯಾಗಿ ನೇಮಕವಾಗಿದ್ದರು. ಅವರನ್ನು ಬಳಿಕ ಸರ್ಕಾರಿ ದಂತ ಕಾಲೇಜಿನ ಉಪನ್ಯಾಸಕಿಯಾಗಿ ಎರವಲು ಸೇವೆ ಅಡಿಯಲ್ಲಿ ನಿಯೋಜನೆ ಮಾಡಲಾಗಿತ್ತು. ಇದಾದ ಬಳಿಕ ಸರ್ಕಾರಿ ದಂತ ಕಾಲೇಜನ್ನು ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಾಗಿನ್ನಾಗಿ ಮಾಡಿ, ಸೊಸೈಟಿಗಳ ಕಾಯ್ದೆಯಡಿ ನೋಂದಾಯಿಸಿ, ಅದಕ್ಕೆ ನಿಯಮಗಳನ್ನು ರೂಪಿಸಲಾಗಿತ್ತು. ನಂತರ ಸಂಸ್ಥೆಯಲ್ಲಿ ಖಾಲಿಯಿದ್ದ ಇಬ್ಬರು ಪ್ರಾಧ್ಯಾಪಕರು, 11 ಮಂದಿ ಸಹಾಯಕ ಪ್ರಾಧ್ಯಾಪಕರು, 9 ಉಪನ್ಯಾಸಕರು ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಈ ನೇಮಕಾತಿಯಲ್ಲಿ ಮೇಲ್ಮನವಿದಾರರಾದ ಡಾ.ಮಮತಾಶ್ರೀ ವಿ. ಎಂಬುವರು ನೇಮಕಗೊಂಡಿದ್ದರು.
ಬಳಿಕ ದಂತ ವೈದ್ಯಕೀಯ ಕಾಲೇಜು ಸ್ವಾಯತ್ತ ಸಂಸ್ಥೆಯಾದ ನಂತರ, ಕಾಲೇಜಿಗೆ ಎರವಲು ಸೇವೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಯನ್ನು ಶಾಶ್ವತವಾಗಿ ಸಂಸ್ಥೆಯಲ್ಲಿ ವಿಲೀನವಾಗುವುದಕ್ಕೆ ಅವಕಾಶ ನೀಡಲಾಗಿತ್ತು. ವಿಲೀನದ ಬಳಿಕ ಅವರಿಗೆ ಒಪ್ಪಿಗೆ ಪತ್ರಗಳನ್ನು ರವಾನಿಸಲಾಗಿತ್ತು. ಈ ನಡುವೆ ಸಂಸ್ಥೆಯ ಡೀನ್ ಅವರು ಎರವಲು ಸೇವೆಗೆ ನಿಯೋಜಿಸಿರುವ ಸಿಬ್ಬಂದಿಯನ್ನು ಸಂಸ್ಥೆಯಲ್ಲಿಯೇ ವಿಲೀನ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಸರ್ಕಾರ ಸಮ್ಮತಿಸಿತ್ತು. ಆದರೆ, ಸೇವಾ ಹಿರಿತನವನ್ನು ಪರಿಗಣಿಸುವ ಸಂದರ್ಭದಲ್ಲಿ ಮೇಲ್ಮನವಿ ಅರ್ಜಿದಾರರಾದ ಡಾ.ಮಮತಾಶ್ರೀ ಹಾಗೂ ಹೇಮಾ ಮಿಥಾಲಿ ಅವರಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಇದಕ್ಕೆ ಹೇಮಾ ಆಕ್ಷೇಪಣೆಗಳನ್ನು ಸಲ್ಲಿಸಿದ್ದರು. ಇದಾದ ಬಳಿಕ ಮಮತಾಶ್ರೀ ಅವರನ್ನು ಮೇಲೆ ಮತ್ತು ಹೇಮಾ ಅವರನ್ನು ಅವರಿಗಿಂತ ಕಿರಿಯರನ್ನಾಗಿ ಪರಿಗಣಿಸಿ ಅಂತಿಮ ಜೇಷ್ಠತಾ ಪಟ್ಟಿಯನ್ನು ಹೊರಡಿಸಿತ್ತು.
ಇದನ್ನು ಪ್ರಶ್ನಿಸಿ ಹೇಮಾ ಮಿಥಾಲಿ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಜೇಷ್ಠತಾ ಪಟ್ಟಿಯನ್ನು ರದ್ದುಗೊಳಿಸಿ, ಪಟ್ಟಿಯನ್ನು ಪರಿಷ್ಕರಣೆ ಮಾಡಿ ಹೊಸದಾಗಿ ಜೇಷ್ಠತಾ ಪಟ್ಟಿ ಪ್ರಕಟಿಸುವಂತೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಮಮತಾಶ್ರೀ ಅವರು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಸರ್ಕಾರಿ ಸಂಸ್ಥೆಗಳಲ್ಲಿ ಎರವಲು ಸೇವೆಗೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವೂ ನೇಮಕಾತಿ ನಿಯಮಗಳ ಅನುಸಾರವಾಗಿಯೇ ನೇಮಕವಾಗಿರಲಿದ್ದು, ಅವರನ್ನು ಸೇವಾ ಶ್ರೇಷ್ಠತಾ ಪಟ್ಟಿಯಲ್ಲಿ ನೇರ ನೇಮಕಾತಿಯಾದ ಸಿಬ್ಬಂದಿಯಿಂದ ಪ್ರತ್ಯೇಕಿಸಲಾಗದು. ಎರವಲು ಸೇವೆಗಾಗಿ ನೇಮಕವಾಗಿದ್ದ ಸಿಬ್ಬಂದಿಯನ್ನು ಉಳಿಸಿಕೊಳ್ಳುವುದು ಸಂಸ್ಥೆಗೆ ಅನಿವಾರ್ಯವಾಗಿದ್ದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ ಸಂಸ್ಥೆಯ ಸಿಬ್ಬಂದಿಯೊಂದಿಗೆ ವಿಲೀನ ಮಾಡಲಾಗಿದೆ ಎಂದು ಹೊರಡಿಸಿರುವ ಆದೇಶದಲ್ಲಿ ದೋಷವುಂಟಾಗಿಲ್ಲ. ಈ ಸಂಬಂಧ 2019ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಇದೀಗ ಹಿಂಪಡೆಯುವುದು ನ್ಯಾಯಸಮ್ಮತವಲ್ಲ ಎಂದು ನ್ಯಾಯಪೀಠ ಹೇಳಿದೆ.
ಜೊತೆಗೆ, ನೇರ ನೇಮಕಾತಿ ನಡೆಯುವುದಕ್ಕೂ ಮುನ್ನ ಎರವಲು ಸೇವೆಗೆ ಖಾಸಗಿ ವ್ಯಕ್ತಿಯನ್ನು ನೇಮಕ ಮಾಡಲಾಗಿದೆ ಎಂಬ ಮೇಲ್ಮನವಿದಾರರ ವಾದವನ್ನು ತಿರಸ್ಕರಿಸಿರುವ ನ್ಯಾಯಪೀಠ, ಮೇಲ್ಮನವಿದಾರ ಡಾ.ಮಮತಾಶ್ರೀ ಅವರ ನೇಮಕಕ್ಕೂ ಮುನ್ನ ಪ್ರತಿವಾದಿಯಾಗಿರುವ ಡಾ.ಪಿ.ಹೇಮಾ ಮಿಥಾಲಿ ಅವರು ಸಂಸ್ಥೆಗೆ ನಿಯೋಜನೆಗೊಂಡಿದ್ದಾರೆ. ಸಿಬ್ಬಂದಿ ಕೊರತೆಯಿಂದ ಸಂಸ್ಥೆಯ ಮಾನ್ಯತೆ ಉಳಿಸಿಕೊಳ್ಳಲು ನೇರ ನೇಮಕಾತಿ ಮೂಲಕ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಆದ್ದರಿಂದ ಎರವಲು ಸೇವೆಯಿಂದ ಪಡೆದವರು ಜೇಷ್ಠತಾ ಪಟ್ಟಿಯಿಂದ ಪ್ರತ್ಯೇಕವಲ್ಲ ಎಂದು ಪೀಠ ತಿಳಿಸಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
