ನಿವೃತ್ತಿ ಕೊನೆಯ ದಿನ ಬಡ್ತಿ ಸಿಕ್ಕರೂ ಪಿಂಚಣಿಗೆ ಅರ್ಹರು- ಹೈಕೋರ್ಟ್
ಬೆಂಗಳೂರು: ನೌಕರರೊಬ್ಬರು ನಿವೃತ್ತರಾಗುವ ಕೊನೆಯ ದಿನ ಅವರಿಗೆ ಉನ್ನತ ಹುದ್ದೆಗೆ ಬಡ್ತಿ ನೀಡಲಾಗಿದ್ದರೂ ಸಹ ಅವರಿಗೆ ಆ ಹೊಸ ಹುದ್ದೆಯ ವೇತನ ಶ್ರೇಣಿಯ ಆಧಾರದ ಮೇಲೆಯೇ ನಿವೃತ್ತಿ ಸೌಲಭ್ಯಗಳನ್ನ ಹಾಗೂ ಪಿಂಚಣಿಯನ್ನು ನಿಗದಿಪಡಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಹಾಗೆಯೇ ಕೊನೆಯ ದಿನ ಬಡ್ತಿ ಪಡೆದ ತಕ್ಷಣಕ್ಕೆ ಅವರು ಆ ಹುದ್ದೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿಲ್ಲ ಎಂಬ ಕಾರಣ ನೀಡಿ ಸೌಲಭ್ಯಗಳನ್ನ ನಿರಾಕರಿಸುವಂತಿಲ್ಲ ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
.ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಪ್ರಾಧ್ಯಾಪಕರ ಪರವಾಗಿ ಕೆಎಟಿ ನೀಡಿದ್ದ ಆದೇಶ ಪ್ರಶ್ನಿಸಿ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾ. ಮೊಹಮ್ಮದ್ ನವಾಜ್ ಮತ್ತು ನ್ಯಾ. ಟಿ.ವೆಂಕಟೇಶ್ ನಾಯಕ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ನಿವೃತ್ತಿಯ ದಿನಾಂಕದಂದು ಬಡ್ತಿ ಪಡೆದ ಹುದ್ದೆಯ ಜವಾಬ್ದಾರಿ ವಹಿಸಿಕೊಳ್ಳುವ ಸರ್ಕಾರಿ ನೌಕರನು ಮಧ್ಯಾಹ್ನದ ನಂತರ ಅಧಿಕಾರ ವಹಿಸಿಕೊಂಡರೂ ಸಹ ಆ ದಿನಾಂಕದಿಂದ ಆತ ಬಡ್ತಿ ಮತ್ತು ಪಿಂಚಣಿ ಪ್ರಯೋಜನಗಳಿಗೆ ಅರ್ಹನಾಗಿರುತ್ತಾನೆ ಎಂದು ಅಭಿಪ್ರಾಯ ಪಟ್ಟಿದೆ.
ಸರಕಾರವು ಪ್ರತಿವಾದಿಯನ್ನು ಅವರ ನಿವೃತ್ತಿಯ ದಿನಾಂಕದಂದು ಉನ್ನತ ವೃಂದಕ್ಕೆ ಬಡ್ತಿ ನೀಡಿದೆ. ನಂತರ ಅದೇ ಸರಕಾರವು ಬಡ್ತಿ ಸೌಲಭ್ಯಗಳನ್ನು ನಿರಾಕರಿಸಿದೆ. ಸರಕಾರವು ತನ್ನ ಉದ್ಯೋಗಿಗೆ ಅವರ ನಿವೃತ್ತಿಯ ದಿನಾಂಕದಂದು ಬಡ್ತಿ ನೀಡಿದಾಗ ಮತ್ತು ಅವರು ಉನ್ನತ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರೆ ಆನಂತರ ಸರಕಾರವು ಬಡ್ತಿ ಸೌಲಭ್ಯ ಗಳನ್ನು ನಿರಾಕರಿಸಲು ಸಾಧ್ಯವಿಲ್ಲ. ಅಲ್ಲದೆ, “ಮುಂದಿನ ದಿನಾಂಕದಿಂದ ವೇತನ ಹೆಚ್ಚಳವು ಸಂಗ್ರಹವಾಗುತ್ತದೆಂದು ಸರಕಾರ ಹೇಳುತ್ತಿದೆ. ಆದರೆ, ಕೆಸಿಎಸ್ಆರ್ ನಿಯಮ 23ರ ಪ್ರಕಾರ, ಸರಕಾರಿ ನೌಕರನು ಹುದ್ದೆ ವಹಿಸಿಕೊಂಡ ದಿನಾಂಕದಿಂದ ಬಡ್ತಿ ಆರಂಭವಾದಾಗ, ಮುಂದಿನ ದಿನಾಂಕದಿಂದ ಆರ್ಥಿಕ ಪ್ರಯೋಜನಗಳು ಅನ್ವಯವಾಗುತ್ತವೆಂದು ಭಾವಿಸುವುದು ತಪ್ಪು” ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು ಕೆಎಟಿ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.
ನ್ಯಾಯಮಂಡಳಿಯು ಪ್ರತಿವಾದಿಗೆ ಬಡ್ತಿಯಿಂದ ಉಂಟಾಗುವ ಎಲ್ಲಾ ಪ್ರಯೋಜನಗಳನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದ್ದು ಸರಿಯಾಗಿದೆ ಎಂದು ಆದೇಶಿಸಿದೆ.
“ಪ್ರತಿವಾದಿಯು ಪ್ರಾಧ್ಯಾಪಕರಾಗಿ ಬಡ್ತಿ ಪಡೆದಿದ್ದರು ಮತ್ತು ಅದೇ ದಿನ ಮಧ್ಯಾಹ್ನ ಕರ್ತವ್ಯಕ್ಕೆ ಹಾಜರಾಗಿದ್ದರು. ಕೆಸಿಎಸ್ಆರ್ ನಿಯಮ 23ರ ಪ್ರಕಾರ, ಸರಕಾರಿ ನೌಕರರು ಆ ಹುದ್ದೆಯ ಕರ್ತವ್ಯಗಳನ್ನು ವಹಿಸಿಕೊಂಡ ದಿನಾಂಕದಿಂದ ಕರ್ತವ್ಯ ಬದಲಾವಣೆ ಯನ್ನು ಒಳಗೊಂಡ ಬಡ್ತಿ ಜಾರಿಗೆ ಬರುತ್ತದೆ. ಆದರೆ, ಉದ್ಯೋಗಿ ನಿವೃತ್ತಿಯ ದಿನಾಂಕದಂದು ಮಧ್ಯಾಹ್ನ ಅಧಿಕಾರ ವಹಿಸಿಕೊಂಡರು ಎಂಬ ಏಕೈಕ ಕಾರಣದಿಂದ ಪ್ರಯೋಜನಗಳನ್ನು ನಿರಾಕರಿಸುವುದು ಸರಿಯಲ್ಲ,” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
