23/06/2026

Law Guide Kannada

Online Guide

ಸಂತ್ರಸ್ತೆ ಬೇರೆ ಮದುವೆ ಆದ್ರೂ ಪೋಕ್ಸೋ ಕೇಸ್ ರದ್ದಾಗಲ್ಲ: ಹೈಕೋರ್ಟ್ ಸ್ಪಷ್ಟ ತೀರ್ಪು

ಬೆಂಗಳೂರು: ಅಪ್ರಾಪ್ತ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆ ಬೇರೊಬ್ಬರನ್ನು ಮದುವೆ ಆಗಿದ್ದಾರೆ ಎಂಬ ಕಾರಣಕ್ಕೆ ಆರೋಪಿ ವಿರುದ್ದ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ.

ದೇವನಹಳ್ಳಿತಾಲೂಕಿನ ನಿವಾಸಿ ಪಾಲಾಕ್ಷ ಕುಮಾರ್ (34) ತನ್ನ ವಿರುದ್ದ ದಾಖಲಾಗಿರುವ ಪೋಕ್ಸೋ ಕೇಸ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನು. ಸಂತ್ರಸ್ತೆ ಬೇರೊಬ್ಬನನ್ನು ಮದುವೆಯಾಗಿದ್ದಾರೆ ಮತ್ತು ಸಹ ಆರೋಪಿಗಳು ಖುಲಾಸೆಯಾಗಿದ್ದಾರೆ ಎಂಬ ಕಾರಣ ನೀಡಿ ಪೋಕೋ ಕಾಯ್ದೆಯಡಿ ತನ್ನ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿದ್ದನು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ.ಎಂ.ನಾಗಪ್ರಸನ್ನ ಅವರ ಪೀಠವು ಪ್ರಕರಣ ರದ್ದುಪಡಿಸಲು ನಿರಾಕರಿಸಿತು. ಅರ್ಜಿದಾರನು ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿದ್ದಾನೆ. ಪ್ರಕರಣದ ಇತರೆ ಆರೋಪಿಗಳು ಖುಲಾಸೆಯಾಗಿದ್ದಾರೆ ಅಂದ ಮಾತ್ರಕ್ಕೆ ಆ ಆದೇಶ ಅರ್ಜಿದಾರನಿಗೆ ಹೇಗೆ ಅನ್ವಯಿಸುತ್ತದೆ ಎಂದು ಅರ್ಜಿದಾರರ ಪರ ವಕೀಲರಿಗೆ ನ್ಯಾಯಪೀಠ ಪ್ರಶ್ನಿಸಿತು. ಸಂತ್ರಸ್ತೆ ರಾಜೀ ಸಂಧಾನ ಮೂಲಕ ಪ್ರಕರಣ ಬಗೆಹರಿಸಿಕೊಳ್ಳಲು ಸಿದ್ದರಿದ್ದಾರೆ ಎಂದು ಅರ್ಜಿದಾರನ ಪರ ವಕೀಲರು ತಿಳಿಸಿದರು.

ಇದಕ್ಕೆ ಗರಂ ಆದ ನ್ಯಾಯಪೀಠವು, ಸಂತ್ರಸ್ತೆ ಅರ್ಜಿದಾರನನ್ನು ಮದುವೆಯಾಗಿಲ್ಲ.ಆಕೆ ಬೇರೊಬ್ಬರನ್ನು ಮದುವೆಯಾದರೆ ಅರ್ಜಿದಾರನ ಮೇಲಿನ ಆರೋಪ ಹೇಗೆ ಅಳಿಸಿಹೋಗುತ್ತದೆ? ಮೊದಲನೇ ಆರೋಪಿಯಾಗಿರುವ ಅರ್ಜಿದಾರನ ಮೇಲೆ ಪೋಕ್ಸೋ ಕಾಯ್ದೆಯ ಸೆಕ್ಷನ್ 3 ಮತ್ತು 4 ಅಡಿಯ ಲೈಂಗಿಕ ದೌರ್ಜನ್ಯ ಅಪರಾಧದ ಆರೋಪಗಳಿವೆ. ಪ್ರಕರಣದ ಸಹ ಆರೋಪಿಗಳು ಖುಲಾಸೆಯಾದರೆಂದು ಅರ್ಜಿದಾರ ಖುಲಾಸೆಯಾಗಲ್ಲ. ವಿಚಾರಣಾ ನ್ಯಾಯಾಲಯದ ಮುಂದೆ ಹೋಗಿ ವಿಚಾರಣೆ ಎದುರಿಸಿ ಎಂದು ಕಿಡಿಕಾರಿತು.

ಸಂತ್ರಸ್ತೆ ಬೇರೊಬ್ಬರನ್ನು ಮದುವೆಯಾಗಿದ್ದಾರೆ. ಅಂದ ಮಾತ್ರಕ್ಕೆ ಅರ್ಜಿದಾರರ ಮೇಲಿನ ಅಪರಾಧಗಳು ಅಳಿಸಿ ಹೋಗುವುದಿಲ್ಲ. ಪ್ರಕರಣವನ್ನು ರಾಜೀ ಮಾಡಲಾಗದು. ಅರ್ಜಿಯನ್ನು ವಜಾಗೊಳಿಸಲಾಗುವುದು. ಯಾವುದೇ ಕಾರಣಕ್ಕೂ ಅರ್ಜಿದಾರ ವಿರುದ್ದದ ಪ್ರಕರಣ ರದ್ದುಪಡಿಸ ಲಾಗದು ಎಂದು ನ್ಯಾಯಪೀಠ ಆದೇಶ ಬರೆಸಲು ಮುಂದಾದ ವೇಳೆ ಅರ್ಜಿದಾರರ ಪರ ವಕೀಲ, ಅರ್ಜಿ ಹಿಂಪಡೆ ಯಲು ಅನುಮತಿಸಬೇಕು ಎಂದು ಕೋರಿದರು. ಆಗ ಪೀಠ, ಅರ್ಜಿ ಹಿಂಪಡೆಯಲು ಅನುಮತಿ ನೀಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.