ವರ್ಗಾವಣೆ ಬಗ್ಗೆ ಅಸಮಾಧಾನ: ವಿಚಾರಣೆಗೆ ಪೊಲೀಸರನ್ನು ಕರೆತಂದ ಮ್ಯಾನೇಜರ್ ನಡೆಗೆ ಹೈಕೋರ್ಟ್ ತೀವ್ರ ಟೀಕೆ..!
ಬ್ಯಾಂಕ್ ವ್ಯವಸ್ಥಾಪಕರನ್ನು ವರ್ಗಾವಣೆ ವಿಚಾರವಾಗಿ ವಿಚಾರಣೆ ಮಾಡಲು ಬ್ಯಾಂಕ್ ಕಚೇರಿಗೆ ಪೊಲೀಸರನ್ನು ಕರೆತಂದ ಉದ್ಯೋಗಿಯ ನಡೆಗೆ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬ್ಯಾಂಕ್ ಅಧಿಕಾರಿಯ ವರ್ಗಾವಣೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಪೊಲೀಸರನ್ನು ಬ್ಯಾಂಕ್ ಆವರಣಕ್ಕೆ ಕರೆತಂದು ವ್ಯವಸ್ಥಾಪಕರನ್ನು ವಿಚಾರಣೆಗೆ ಒಳಪಡಿಸಿದ ಉದ್ಯೋಗಿಯ ನಡೆ, ಯಾವುದೇ ಹಿಂಸಾಚಾರ, ವಾಗ್ವಾದ ಅಥವಾ ಅವಾಚ್ಯ ಶಬ್ದಗಳ ಬಳಕೆ ನಡೆದಿರದಿದ್ದರೂ ಸಹ, ದುರ್ವರ್ತನೆಗೆ ಸಮಾನ ಎಂದು ಬಾಂಬೆ ಹೈಕೋರ್ಟ್ ಕಿಡಿಕಾರಿದೆ.
ಧಾಣಿಯ ಪ್ರಧಮ ಕಾರ್ಮಿಕ ನ್ಯಾಯಾಲಯ ಹಾಗೂ ಮಹಾರಾಷ್ಟ್ರ ಕೈಗಾರಿಕಾ ನ್ಯಾಯಾಲಯ ನೀಡಿದ್ದ ಆದೇಶಗಳನ್ನು ರದ್ದುಗೊಳಿಸಿದ ಹೈಕೋರ್ಟ್ ಇಲಾಖಾ ತನಿಖಾ ಅಧಿಕಾರಿಯ ತೀರ್ಮಾನಗಳು ಸಾಕ್ಷಾಧಾರವಿಲ್ಲದವು ಅಥವಾ ಅಸಂಗತವಾದವುಗಳಲ್ಲ ಎಂದು ಹೇಳಿ, ಕಾರ್ಮಿಕ ನ್ಯಾಯಾಲಯವು ಆರೋಪವನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಿದೆ ಎಂದು ಅಭಿಪ್ರಾಯಪಟ್ಟಿತು.
“ಪ್ರತಿವಾದಿ ತನ್ನ ವರ್ಗಾವಣೆಯ ವಿರುದ್ಧ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ ಕ್ರಿಯೆಯೇ ದುರ್ವರ್ತನೆ ಯಾಗಿದೆ. ವಾಶಿ ಶಾಖೆಗೆ ವರ್ಗಾವಣೆಗೊಂಡಿದ್ದರಿಂದ ಆಕೆಗೆ ಅಸಮಾಧಾನವಿದ್ದರೆ, ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದು ಅಥವಾ ಲಭ್ಯವಿರುವ ಆಂತರಿಕ ಪರಿಹಾರ ಕ್ರಮಗಳನ್ನು ಅನುಸರಿಸುವುದು ಸೂಕ್ತವಾಗಿತ್ತು. ಆದರೆ ಆಕೆ ಪೊಲೀಸರನ್ನು ಸಂಪರ್ಕಿಸಿದಳು. ಅಲ್ಲದೆ, ತಾನು ಕಿರುಕುಳಕ್ಕೊಳಗಾಗುತ್ತಿದ್ದೇನೆ ಎಂದು ಆರೋಪಿಸಿ ಇಬ್ಬರು ಪೊಲೀಸರನ್ನು ಬ್ಯಾಂಕ್ ಶಾಖೆಗೆ ಕರೆತಂದಳು ಎಂದು ನ್ಯಾಯಮೂರ್ತಿ ಸಂದೀಪ್ ವಿ. ಮಾರ್ನೆ ಅವರು ಹೇಳಿದರು.
ಆಕೆಯ ವರ್ಗಾವಣೆಯ ಕಾರಣವನ್ನು ತಿಳಿದುಕೊಳ್ಳಲು ಬ್ಯಾಂಕ್ ಅಧಿಕಾರಿಯನ್ನು ಪೊಲೀಸರು ವಿಚಾರಣೆ ನಡೆಸುವಂತೆ ಮಾಡಿದಳು. ಇಂತಹ ವರ್ತನೆ ನಿಸ್ಸಂಶಯವಾಗಿ ದುರ್ವರ್ತನೆಯಾಗಿದೆ. ಆದರೆ ಕಾರ್ಮಿಕ ನ್ಯಾಯಾಲಯವು ಮೊದಲ ಆರೋಪವನ್ನು ವರ್ಗಾವಣೆ ಆದೇಶ ಪಾಲಿಸದಿರುವ ಆರೋಪವೆಂದು ತಪ್ಪಾಗಿ ಅರ್ಥೈಸಿದೆ ಎಂದು ನ್ಯಾಯಪೀಠ ಅಭಿಪ್ರಾಯಿಸಿತು.
ಪ್ರಕರಣದ ವಿವರ..
16 ಮೇ 2012ರಂದು ಅಭ್ಯುದಯ ಸಹಕಾರಿ ಬ್ಯಾಂಕ್ ನ ಉದ್ಯೋಗಿಯಾಗಿದ್ದ ಪ್ರತಿವಾದಿಯನ್ನು ಲೆಕ್ಕಪತ್ರ ವಿಭಾಗದಿಂದ ವಾಶಿ ಶಾಖೆಗೆ ವರ್ಗಾಯಿಸಲಾಗಿತ್ತು. 17 ಮೇ 2012ರಂದು ಹಳೆಯ ಹುದ್ದೆಯಿಂದ ಬಿಡುಗಡೆಗೊಂಡ ಬಳಿಕ, ಆಕೆ ಇಬ್ಬರು ಪೊಲೀಸರನ್ನು ಬ್ಯಾಂಕ್ ಮಾನವ ಸಂಪನ್ಮೂಲ (HRM) ವಿಭಾಗಕ್ಕೆ ಕರೆತಂದು, ವ್ಯವಸ್ಥಾಪಕ ಎಚ್.ಡಿ. ಭಟ್ ಅವರು ತನ್ನನ್ನು ಕಿರುಕುಳ ನೀಡುವ ಉದ್ದೇಶದಿಂದ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಈ ವೇಳೆ ಪೊಲೀಸರು ಶ್ರೀ ಭಟ್ ಅವರನ್ನು ವಿಚಾರಣೆ ನಡೆಸಿದ್ದು, ಅವರು ಇದು ನಿಯಮಿತ ಆಡಳಿತಾತ್ಮಕ ವರ್ಗಾವಣೆ ಎಂದು ಸ್ಪಷ್ಟಪಡಿಸಿದ ನಂತರ ಪೊಲೀಸರು ಅಲ್ಲಿಂದ ತೆರಳಿದರು. ನಂತರ 16 ಎಪ್ರಿಲ್ 2013ರಂದು ನೀಡಲಾದ ಆರೋಪ ಪತ್ರದಲ್ಲಿ ಎರಡು ಆರೋಪಗಳನ್ನು ಹಿರಿಯ ಅಧಿಕಾರಿಯನ್ನು ಬೆದರಿಸುವ ಉದ್ದೇಶದಿಂದ ಪೊಲೀಸರನ್ನು ಕರೆತರುವುದು. ಬ್ಯಾಂಕಿಂಗ್ ಒಂಬುಡ್ಸ್ ಮನ್, ಭಾರತೀಯ ರಿಸರ್ವ್ ಬ್ಯಾಂಕ್, ಮಹಾರಾಷ್ಟ್ರ ರಾಜ್ಯ ಮಾನವ ಹಕ್ಕು ಆಯೋಗ ಹಾಗೂ ಮುಖ್ಯಮಂತ್ರಿಗಳಿಗೆ ಬ್ಯಾಂಕ್ ವಿರುದ್ಧ ಸುಳ್ಳು ಮತ್ತು ಕಿರುಕುಳದ ದೂರುಗಳನ್ನು ಸಲ್ಲಿಸುವುದು.
ತನಿಖಾ ಅಧಿಕಾರಿ ಎರಡೂ ಆರೋಪಗಳು ಸಾಬೀತಾಗಿವೆ ಎಂದು ಕಂಡುಕೊಂಡು ಅದರ ಆಧಾರದ ಮೇಲೆ ಬ್ಯಾಂಕ್ 28 ಜನವರಿ 2015ರಂದು ಪ್ರತಿವಾದಿಯನ್ನು ಸೇವೆಯಿಂದ ವಜಾಗೊಳಿಸಿತು.
ಕಾರ್ಮಿಕ ನ್ಯಾಯಾಲಯ ತನಿಖೆ ನ್ಯಾಯಸಮ್ಮತವಾಗಿದೆ ಎಂದು ಒಪ್ಪಿಕೊಂಡರೂ, ತನಿಖಾಧಿಕಾರಿಯ ತೀರ್ಮಾನಗಳು ವಿಕೃತ (perverse) ಎಂದು ಹೇಳಿತು. ಬ್ಯಾಂಕ್ ಸಲ್ಲಿಸಿದ್ಧ ಮರುಪರಿಶೀಲನಾ ಅರ್ಜಿಯನ್ನು ಕೈಗಾರಿಕಾ ನ್ಯಾಯಾಲಯವೂ ತಿರಸ್ಕರಿಸಿತು. ನಂತರ ಬ್ಯಾಂಕ್ ಭಾರತೀಯ ಸಂವಿಧಾನದ 227ನೇ ವಿಧಿಯಡಿ ಹೈಕೋರ್ಟ್ ಮೊರೆಹೋಯಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
