07/07/2026

Law Guide Kannada

Online Guide

ಪೋಕ್ಸೋ ಕೇಸ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದಿರುವುದೂ ಸಹ ಅಪರಾಧ – ಹೈಕೋರ್ಟ್

ಬೆಂಗಳೂರು: ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪೋಕೋ ಕಾಯ್ದೆ ಅಡಿ ಅಪರಾಧವಾಗಿದ್ದು, ಇಂತಹ ಕೃತ್ಯದ ಬಗ್ಗೆ ಅರಿವಿದ್ದರೂ ಪೊಲೀಸರಿಗೆ ಮಾಹಿತಿ ನೀಡದಿದ್ದರೇ ಅದು ಕೂಡ ಅಪರಾಧವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಾಲೆಯ ಹಾಸ್ಟೆಲ್ ನಲ್ಲಿ 15 ವರ್ಷದ ವಿದ್ಯಾರ್ಥಿ, ಅದೇ ವಯಸ್ಸಿನ ತನ್ನ ಸಹಪಾಠಿ ಮೇಲೆ ಲೈಂಗಿಕ ದೌರ್ಜನ್ಯ (ಸಲಿಂಗ ಕಾಮ) ಎಸಗಿದ ಘಟನೆ ನಡೆದಿತ್ತು. ಈ ಬಗ್ಗೆ ತಿಳಿದಿದ್ದರೂ ವರದಿ ಮಾಡದ ಶಾಲೆಯ ಪ್ರಾಂಶುಪಾಲ, ಹಾಸ್ಟೆಲ್ ವಾರ್ಡನ್ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯನ ಮೇಲೆ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಾಗಿತ್ತು.

ಈ ಎಫ್ ಐಆರ್ರದ್ದು ಕೋರಿ ಶಾಲಾ ಪ್ರಾಂಶುಪಾಲ ಶಿವಪ್ರಸಾದ್ ಭಟ್ ಸೇರಿ ಮೂವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದು ಎಫ್ ಐಆರ್ ರದ್ದುಗೊಳಿಸಲು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠವು ನಿರಾಕರಿಸಿದೆ.

ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು, ಪ್ರಕರಣದ ಬಗ್ಗೆ ಮಾಹಿತಿ ನೀಡದಕ್ಕೆ ಪೊಲೀಸರು ಅರ್ಜಿದಾರರ ಮೇಲೆ ಪೋಕ್ಸೋ ಕಾಯ್ದೆ- 2012ರ ಸೆಕ್ಷನ್ 4 ಮತ್ತು 8 (ಲೈಂಗಿಕ ದೌರ್ಜನ್ಯ) ಹಾಗೂ 21 ಅಡಿ (ಒಂದು ಕಂಪನಿ, ಶಾಲೆ ಅಥವಾ ಸಂಸ್ಥೆ ಉಸ್ತುವಾರಿ ಹೊಂದಿರುವ ಯಾರಾದರೂ, ತಮ್ಮ ಸಂಸ್ಥೆಯಲ್ಲಿ ನಡೆದ ಅಪ್ರಾಪ್ತರ ಮೇಲಿನ ಲೈಂಗಿಕ ಅಪರಾಧ ಬಗ್ಗೆ ವರದಿ ಮಾಡಲು ವಿಫಲವಾದರೆ) ಎಫ್ಐಆರ್ ದಾಖಲಿಸಿದ್ದಾರೆ. ಅದರ ರದ್ದತಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ನ್ಯಾಯಪೀಠ ಪ್ರತಿಕ್ರಿಯಿಸಿ, ಹಾಸ್ಟೆಲ್ ನಲ್ಲಿ ಸಲಿಂಗ ಕಾಮಕ್ಕೆ ಅವಕಾಶ ಹೇಗೆ ಆಯಿತು, ವಾರ್ಡನ್ ಯಾರು, ಹಾಸ್ಟೆಲ್ ಕೊಠಡಿ ಹೊರಗೆ ಘಟನೆ ನಡೆಯಬೇಕಿತ್ತೇ? ಸಂತ್ರಸ್ತ ನಿದ್ದೆ ಮಾಡುತ್ತಿರಬೇಕಾದರೆ ಈ ಘಟನೆ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿತು.

ಪ್ರಕರಣದ ದಾಖಲೆ ಪರಿಶೀಲಿಸಿದ ಪೀಠ, ಘಟನೆ ಜೂ.3ರಂದು ನಡೆದಿದೆ. ಜೂ.4ರಂದು ಸಂತ್ರಸ್ತನ ತಂದೆ ದೂರು ನೀಡಿದ್ದಾರೆ. ಜು.2ರಂದು ಆರೋಪಿ ಪ್ರಾಂಶುಪಾಲರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಅದಾದ ಕೂಡಲೇ ಅವರು ಏನು ಮಾಡಿದರು ಎಂದು ಖಾರವಾಗಿ ಪ್ರಶ್ನಿಸಿತು.

ಇದಕ್ಕೆ ಅರ್ಜಿದಾರರ ಪರ ವಕೀಲರು, ಜೂ.2ರ ಘಟನೆ ನಂತರ ಸಂತ್ರಸ್ತ ಮೊಬೈಲ್ ಫೋನ್ ಜೊತೆಗೆ ಸಿಕ್ಕಿಬಿದ್ದ. ಆ ಕುರಿತು ವಿಚಾರಣೆ ವೇಳೆ ಆರೋಪಿಯ ಪೋಷಕರು ಶಾಲೆಗೆ ಬಂದಿದ್ದರು. ಆಗ ಬಾರದ ಸಂತ್ರಸ್ತನ ಪೋಷಕರು, ಫೋನ್ ಜಪ್ತಿ ಮಾಡಿ ದಂಡ ವಿಧಿಸಿದಾಗ ಶಾಲೆಗೆ ಬಂದಿದ್ದರು. ನಂತರ ಶಿವಮೊಗ್ಗಕ್ಕೆ ತೆರಳಿ ಜೀರೋ ಎಫ್ ಐಆರ್ ದಾಖಲಿಸಿದ್ದರು. ಅರ್ಜಿದಾರರ ಪರ ಸೆಕ್ಸನ್ 4 ಹಾಗೂ 8 ಅಡಿ ಪ್ರಕರಣ ಹಾಗಾಗಿ, ಎಫ್ ಐಆರ್ ದಾಖಲಿಸಲಾಗದು. ರದ್ದುಪಡಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಗರಂ ಆದ ನ್ಯಾಯಪೀಠವು, ಎಲ್ಲಿ ಬೇಕಾದರೂ ಜೀರೋ ಎಫ್ ಐಆರ್ ದಾಖಲಿಸಲು ಅವಕಾಶವಿದೆ. ಶೈಕ್ಷಣಿಕ ಸಂಸ್ಥೆಯೇ ಫೈಟ್ ಬಗ್ಗೆ ಮಾತ್ರ ಉಲ್ಲೇಖಿಸುವಂತೆ ಸಂತ್ರಸ್ತನೇ ಹೇಳಿಕೆ ನೀಡಿದ್ದಾನೆ. ತನ್ನ ಇಮೇಜ್/ಪ್ರೆಸ್ಟೀಜ್ ರಕ್ಷಿಸಿಕೊಳ್ಳಲು ಶಾಲೆ ಆ ರೀತಿ ಬಲವಂತಪಡಿಸಿರುವ ಸಾಧ್ಯ ಇರಬಹುದು. ಅರ್ಜಿದಾರರು ಸೆಕ್ಷನ್ 4 ಹಾಗೂ 8 ಅಡಿ ಅಪರಾಧ ಎಸಗಿಲ್ಲದೇ ಇರಬಹುದು. ಆದರೆ, ಘಟನೆ ಮಾಹಿತಿ ನೀಡಿಲ್ಲ. ಇದು ನೇರವಾಗಿ ಕಾಯ್ದೆ ಯ ಸೆಕ್ಷನ್ 21ರ ಉಲ್ಲಂಘನೆ. ಪ್ರಕರಣ ಎಫ್ ಐಆರ್ ಹಂತದಲ್ಲಿದ್ದು, ಈ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ, ಅರ್ಜಿದಾರರು ಜಾಮೀನು ಕೋರಬಹುದು ಎಂದು ಹೇಳಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.