ಧರ್ಮ ತಪ್ಪಾಗಿ ನಮೂದು: ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿ: ಮೂಲ ಗುರುತು ಮರುಸ್ಥಾಪಿಸಲು ಸಿವಿಲ್ ಕೋರ್ಟ್ಗೆ ಅಧಿಕಾರವಿದೆಯೇ..?
ಬೆಂಗಳೂರು: ಶಾಲಾ ದಾಖಲೆಯಲ್ಲಿ ಹಿಂದೂ ಬಾಲಕನ ಹೆಸರನ್ನು ‘ಶಾಹಿದ್’ ಎಂದು ಧರ್ಮವನ್ನು ‘ಮುಸ್ಲಿಂ’ ಎಂದು ತಪ್ಪಾಗಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಲ ಗುರುತನ್ನು ಮರುಸ್ಥಾಪಿಸಲು ಸಿವಿಲ್ ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠವು ಮಹತ್ವದ ಈ ತೀರ್ಪು ನೀಡಿದೆ. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ ಕುಮಾರ್ ಅವರಿದ್ದ ಪೀಠವು, ಸಿವಿಲ್ ಪ್ರೊಸೀಜರ್ ಕೋಡ್ (CPC)ನ ಸೆಕ್ಷನ್ 9 ಅಡಿಯಲ್ಲಿ ಸಿವಿಲ್ ನ್ಯಾಯಾಲಯಕ್ಕೆ ವ್ಯಕ್ತಿಯ ಹೆಸರು, ಜಾತಿ ಅಥವಾ ಧರ್ಮವನ್ನು ಶಾಲಾ ದಾಖಲೆಯಲ್ಲಿ ಆಡಳಿತಾತ್ಮಕ ತಪ್ಪಿನಿಂದ ತಪ್ಪಾಗಿ ದಾಖಲಿಸಿರುವುದನ್ನು ತಿದ್ದುಪಡಿ ಮಾಡುವ ಸಂಪೂರ್ಣ ಅಧಿಕಾರವಿದೆ ಎಂದು ನ್ಯಾಯಾಲಯ ಹೇಳಿದೆ.
ಮೀಸಲಾತಿಯ ಯಾವುದೇ ಪ್ರಯೋಜನವನ್ನು ಕೋರುತ್ತಿಲ್ಲದ ಸಂದರ್ಭದಲ್ಲಿ, ಜನ್ಮಸಿದ್ದ ಗುರುತು ಮತ್ತು ವಂಶಪಾರಂಪರ್ಯವನ್ನು ಆಡಳಿತಾತ್ಮಕ ತಪ್ಪುಗಳಿಂದ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕರ್ನಾಟಕ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯಲ್ಲಿ ಮೀಸಲಾತಿ ಇತ್ಯಾದಿ) ಅಧಿನಿಯಮ, 1990ರ ಅಡಿಯಲ್ಲಿ ಕಾರ್ಯನಿರ್ವಹಿಸುವ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ (District Caste Verification Committee – DCVC) ಅಧಿಕಾರವು ಮೀಸಲಾತಿ ಹಾಗೂ ಸಂಬಂಧಿತ ಸಾಮಾಜಿಕ-ಆರ್ಥಿಕ ಸೌಲಭ್ಯಗಳ ಅರ್ಹತೆಯನ್ನು ಪರಿಶೀಲಿಸುವುದಕ್ಕೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಿದೆ.
ಶಾಲಾ ದಾಖಲೆಯಲ್ಲಿ ಹಿಂದೂ ಬಾಲಕನ ಹೆಸರನ್ನು “ಆರೂಜ್” ಬದಲಿಗೆ “ಶಾಹಿದ್” ಎಂದು ಹಾಗೂ ಧರ್ಮ/ಜಾತಿಯನ್ನು ”ಹಿಂದೂ ಗೌಳಿ” ಬದಲಿಗೆ “ಮುಸ್ಲಿಂ” ಎಂದು ದಾಖಲಿಸಿರುವುದು ಕೇವಲ ಆಡಳಿತಾತ್ಮಕ ದೋಷವಾಗಿದೆ. ಜನ್ಮದಿಂದ ವ್ಯಕ್ತಿಗೆ ದೊರೆಯುವ ಗುರುತು (ಹೆಸರು, ಧರ್ಮ, ವಂಶಪಾರಂಪರ್ಯ) ಒಂದು ಸ್ವಾಭಾವಿಕ ನಾಗರಿಕ ಹಕ್ಕಾಗಿದ್ದು, ಅದನ್ನು ತಪ್ಪಾದ ಶಾಲಾ ದಾಖಲೆಗಳ ಆಧಾರದ ಮೇಲೆ ಶಾಶ್ವತವಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ವಾದಿಯು ಜಾತಿ ಪ್ರಮಾಣಪತ್ರ ಅಥವಾ ಮೀಸಲಾತಿಯ ಲಾಭವನ್ನು ಕೋರುತ್ತಿಲ್ಲದ ಕಾರಣ, ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯನ್ನು ಸಂಪರ್ಕಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ, ಶಾಲಾ ದಾಖಲೆಯನ್ನು ತಿದ್ದುಪಡಿ ಮಾಡಿ ಮೂಲ ಗುರುತನ್ನು ಮರುಸ್ಥಾಪಿಸಲು ಸಿವಿಲ್ ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ತೀರ್ಪು ನೀಡಿದೆ.
“ಒಬ್ಬ ವ್ಯಕ್ತಿಗೆ ನಿರ್ದಿಷ್ಟ ಜಾತಿಯ ಆಧಾರದ ಮೇಲೆ ಮೀಸಲಾತಿ ಸೌಲಭ್ಯ ದೊರೆಯಬೇಕೇ ಎಂಬುದನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯೇ ನಿರ್ಧರಿಸಬೇಕು. ಆದರೆ ಹೆಸರು, ಉಪನಾಮ, ಜಾತಿ ಅಥವಾ ಧರ್ಮದ ದಾಖಲೆಯನ್ನು ತಿದ್ದುಪಡಿ ಮಾಡುವ ಪ್ರಶ್ನೆ ಬಂದಾಗ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅದನ್ನು ನಿರ್ಣಯಿಸುವ ಅಧಿಕಾರ ಸಿವಿಲ್ ನ್ಯಾಯಾಲಯಕ್ಕಿದೆ. ಆದ್ದರಿಂದ, ಈ ದಾವೆಯು CPC ಸೆಕ್ಷನ್ 9ರ ಅಡಿಯಲ್ಲಿ ವಿಚಾರಣೆಗೆ ಅರ್ಹವಾಗಿದೆ ಎಂದು ನ್ಯಾಯಮೂರ್ತಿ ಹಂಚಾಟೆ ಸಂಜೀವ ಕುಮಾರ್ ಅವರು ಹೇಳಿದ್ದಾರೆ.
ಏನಿದು ಪ್ರಕರಣ…
ಶಾಲೆಗೆ ಮೊದಲ ಬಾರಿಗೆ ದಾಖಲಾತಿ ಮಾಡುವ ಸಂದರ್ಭದಲ್ಲಿ ತನ್ನ ಹೆಸರನ್ನು “ಆರೂಷ್” ಬದಲಿಗೆ “ಶಾಹಿದ್” ಎಂದು ಹಾಗೂ ಜಾತಿ/ಧರ್ಮವನ್ನು ‘ಹಿಂದೂ ಗೌಳಿ” ಬದಲಿಗೆ “ಮುಸ್ಲಿಂ” ಎಂದು ತಪ್ಪಾಗಿ ದಾಖಲಿಸಲಾಗಿದೆ ಎಂದು ಕುಮಾರ್ ಆರೂಷ್, ತನ್ನ ತಂದೆ ರಾಕೇಶ್ ಕಲದಗಿ ಅವರ ಮೂಲಕ ದಾವೆ ಹೂಡಿದ್ದರು.
ಶಾಲಾ ಆಡಳಿತವು, ನ್ಯಾಯಾಲಯದ ಆದೇಶವಿಲ್ಲದೆ ಈ ದಾಖಲೆಗಳನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ ಹಿನ್ನೆಲೆಯಲ್ಲಿ, ತಮ್ಮ ನಿಜವಾದ ಗುರುತನ್ನು ಘೋಷಿಸುವಂತೆ ಹಾಗೂ ದಾಖಲೆಗಳನ್ನು ತಿದ್ದುಪಡಿ ಮಾಡಲು ಕಡ್ಡಾಯ ಆದೇಶ ನೀಡುವಂತೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಯಿತು.
ಧಾರವಾಡದ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ನ್ಯಾಯಾಲಯವು 2022ರ ಜನವರಿ 28ರಂದು ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ತಂದೆ ಹಾಗೂ ಸಹೋದರಿಯ ಜಾತಿ ಪ್ರಮಾಣಪತ್ರಗಳನ್ನು ಪರಿಶೀಲಿಸಿ, ಎಲ್ಲ ದಾಖಲೆಗಳಲ್ಲಿಯೂ ”ಹಿಂದೂ ಗೌಳಿ” ಎಂದು ದಾಖಲಾಗಿರುವುದನ್ನು ಗಮನಿಸಿ ದಾವೆಯನ್ನು ಅಂಗೀಕರಿಸಿತು.
ಆದರೆ, ಕರ್ನಾಟಕ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮೇಲ್ಮನವಿ ಸಲ್ಲಿಸಿದ ನಂತರ, ಧಾರವಾಡದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಸಿಜೆಎಂ ಅವರು 2025ರ ಸೆಪ್ಟೆಂಬರ್ 8ರಂದು, ಮೊದಲು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯನ್ನು ಸಂಪರ್ಕಿಸಬೇಕಾಗಿತ್ತು ಎಂದು ಹೇಳಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದರು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿ ಕರ್ನಾಟಕ ಹೈಕೋರ್ಟ್ ಗೆ ನಿಯಮಿತ ದ್ವಿತೀಯ ಮೇಲ್ಮನವಿ ಸಲ್ಲಿಸಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
